ಗೋಣಿಕೊಪ್ಪ ವರದಿ, ಜು. 11: ಹಾತೂರು ವನಭದ್ರಕಾಳಿ ನಮ್ಮೆ ಶ್ರದ್ಧಾ ಭಕ್ತಿಯಿಂದ ನಡೆಯಿತು.
ಎರಡು ವರ್ಷಗಳಿಗೊಮ್ಮೆ ನಡೆಯುವ ನಮ್ಮೆಯಲ್ಲಿ ದೇವರ ತೆರೆ, ಮೊಗ ದರ್ಶನ ಹಾಗೂ ಭದ್ರಕಾಳಿಗೆ ವಿವಿಧ ಪೂಜಾ ಕಾರ್ಯ ನಡೆಯಿತು.
ಸಾಂಪ್ರದಾಯದಂತೆ ಕೊಂಗೇಪಂಡ ಕುಟುಂಬದ ಮನೆಯಿಂದ ದೇವರ ಭಂಡಾರ, ಆಯುಧ ಹಾಗೂ ದೇವರ ಪರಿಕರಗಳನ್ನು ತರುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಯಿತು. ಕೊಕ್ಕಂಡ ಐನ್‍ಮನೆಯಲ್ಲಿ ದೇವರ ಪರಿಗಳನ್ನು ಇಟ್ಟು ನಂತರ ಊರಿನ ಭಕ್ತಾಧಿಗಳು ಸೇರಿ ದೊಡ್ಡಮನೆಯ ಅಂಬಲದಲ್ಲಿ ದೇವರನ್ನು ನೆನೆದು ದೇವಸ್ಥಾನಕ್ಕೆ ತಂದು ಪೂಜಿಸಲಾಯಿತು.
ಬುಧÀವಾರ ದಿನ ಕೂಡ ಭದ್ರಕಾಳಿ ದೇವಿಯೊಂದಿಗೆ ಅಯ್ಯಪ್ಪ ತೆರೆ ಹಾಗೂ ಮೊಗದೊಂದಿಗೆ ದೇವಸ್ಥಾನಕ್ಕೆ ಬಂದು ಹಬ್ಬ ಆಚರಿಸಲಾಯಿತು. ದೇವರ ಮೊಗ ಹಾಗೂ ಭದ್ರಕಾಳಿ ದೇವಿಯ ಮೂರ್ತಿಯನ್ನು ಹೊತ್ತು ತರಲಾಯಿತು. ಗ್ರಾಮದ ಕೊಂಗೇಪಂಡ, ಕೇಳಪಂಡ ಹಾಗೂ ಕೊಕ್ಕಂಡ ಕುಟುಂಬಸ್ಥರು ವಾಡಿಕೆಯಂತೆ ತಕ್ಕರಾಗಿ ಕಾರ್ಯ ನಿರ್ವಹಿಸಿದರು. ದೇವಸ್ಥಾನದಲ್ಲಿ ಶುದ್ಧಗೊಳಿಸುವ ಮೂಲಕ ನಮ್ಮೆಗೆ ತೆರೆ ಎಳೆಯಲಾಯಿತು. -ಸುದ್ದಿಪುತ್ರ