ಮಡಿಕೇರಿ, ಜು. 12: ಮಳೆಗಾಲದಲ್ಲಿ ತೆಗೆದುಕೊಳ್ಳಬೇಕಾದ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಜಿಲ್ಲಾಡಳಿತ ಈಗಾಗಲೇ ಕೈಗೊಂಡಿದ್ದು, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ವಿಪತ್ತಿನಿಂದ ಸಂಭವಿಸಬಹುದಾದ ಹಾನಿ ಕಡಿಮೆಗೊಳಿಸುವ ಬಗ್ಗೆ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಚರ್ಚಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅಧ್ಯಕ್ಷತೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಿತು. ತುರ್ತಾಗಿ ಕೊಡಗು ಜಿಲ್ಲೆಗೆ ಸಮಗ್ರ ಪುನರ್ ನಿರ್ಮಾಣ, ಹಾನಿ ತಗ್ಗಿಸುವ ಕ್ರಮಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಲು ಮತ್ತು ರಚನಾತ್ಮಕ ಯೋಜನೆ ರೂಪಿಸಲು ವಿಷಯ ತಜ್ಞರು, ಸ್ಥಳೀಯರ ಹಾಗೂ ಸಂಬಂಧಪಟ್ಟವರ ಜೊತೆಗೂಡಿಸಿ, ಕಾರ್ಯಾಗಾರವನ್ನು ಏರ್ಪಡಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಜೊತೆಗೆ ಶಾಲೆ, ಆಸ್ಪತ್ರೆಗಳಲ್ಲಿ ವಿಪತ್ತು ನಿರ್ವಹಣೆಯ ತರಬೇತಿ ಮತ್ತು ಯೋಜನೆಗಳನ್ನು ಜಾರಿಗೊಳಿಸಲು ಚರ್ಚಿಸಲಾಯಿತು.
ಗ್ರಾಮೀಣ ಮಟ್ಟದಲ್ಲಿ ರೂಪಿಸುತ್ತಿರುವ ಗ್ರಾಮೀಣ ವಿಪತ್ತು ನಿರ್ವಹಣಾ ಯೋಜನೆಯನ್ನು ಪ್ರಥಮ ಹಂತದಲ್ಲಿ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಜಿಲ್ಲೆಯ ಸೂಕ್ಷ್ಮ ಗ್ರಾಮ ಪಂಚಾಯಿತಿಗಳಲ್ಲಿ ಪ್ರಥಮ ಹಂತದಲ್ಲಿ ಇತರ ಗ್ರಾಮ ಪಂಚಾಯಿತಿಗಳಿಗೆ ವಿಸ್ತರಿಸಿ ಗ್ರಾಮೀಣಾಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವಂತೆ ಚರ್ಚಿಸಲಾಯಿತು. ಇದರೊಂದಿಗೆ ವಿಪತ್ತು ನಿರ್ವಹಣೆ ಸಂಬಂಧಿಸಿದಂತೆ ಮಹಿಳಾ, ಮಕ್ಕಳ, ಸಮುದಾಯ ಕೇಂದ್ರಿತ ಮತ್ತು ವಿವಿಧ ತರಬೇತಿಗಳನ್ನು ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ವಿಪತ್ತು ಪರಿಹಾರವನ್ನು ಸುಸೂತ್ರವಾಗಿ ಅರ್ಹರಿಗೆ ತಲಪಿಸಲು ಸಹಕಾರವಾಗುವಂತೆ ತಾಲೂಕು ಮಟ್ಟ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕಾಯ್ದೆ ಮತ್ತು ಪರಿಹಾರ ಲಭ್ಯತೆಯ ಬಗ್ಗೆ ತರಬೇತಿ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು.
ಪ್ರಾಧಿಕಾರದ ಸದಸ್ಯರಾದ ಜಿ.ಪಂ. ಸಿಇಓ ಕೆ. ಲಕ್ಷ್ಮೀಪ್ರಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸ್ನೇಹಾ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಾಜು, ಆರ್‍ಸಿಹೆಚ್. ಅಧಿಕಾರಿ ಡಾ. ಆನಂದ್, ಪಂಚಾಯತ್ ರಾಜ್ ಇಲಾಖೆಯ ಇಂಜಿನಿಯರ್ ಶ್ರೀಕಂಠಯ್ಯ, ಯುನಿಸೆಫ್ ಸಮಾಲೋಚಕ ಪ್ರಭಾತ್ ಕಲ್ಕೂರ ಇತರರು ಇದ್ದರು.