ಮಡಿಕೇರಿ, ಜು. 12: ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯೊಂದಿಗೆ ಶಿಸ್ತು ಮತ್ತು ಸ್ವಚ್ಛ ಪರಿಸರಕ್ಕೂ ಆದ್ಯತೆ ನೀಡಬೇಕೆಂದು ಪೊನ್ನಂಪೇಟೆ ಅರಣ್ಯ ಕಾಲೇಜ್ನ ಡೀನ್ ಸಿ.ಜಿ. ಕುಶಾಲಪ್ಪ ಕಿವಿಮಾತು ಹೇಳಿದ್ದಾರೆ.
ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ನಡೆದ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವ ಮೂಲಕ ಆರೋಗ್ಯಕರ ವಾತಾವರಣವನ್ನು ಸೃಷ್ಟಿಸಬೇಕು, ಈ ಸ್ವಚ್ಛ ಪರಿಸರದ ಕಾಳಜಿಯನ್ನು ವಿದ್ಯಾರ್ಥಿಗಳೂ ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ದೇಶದಲ್ಲೇ ವೀರ ಸೇನಾನಿ ಜನರಲ್ ತಿಮ್ಮಯ್ಯ ಅವರ ಹೆಸರಿನಲ್ಲಿರುವ ಏಕೈಕ ಶಾಲೆ ಇದಾಗಿದ್ದು, ಶಿಸ್ತನ್ನು ಮೈಗೂಡಿಸಿಕೊಂಡು ಮುಂದೆ ಸಾಗುವಂತೆ ವಿದ್ಯಾರ್ಥಿಗಳಿಗೆ ಸಿ.ಜಿ. ಕುಶಾಲಪ್ಪ ಹೇಳಿದರು. ಸ್ವಚ್ಛತೆಯ ಮಹತ್ವವನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು, ಆ ಮೂಲಕ ಸುಂದರ ಪರಿಸರವನ್ನು ರಕ್ಷಿಸಬೇಕೆಂದು ಸಲಹೆ ನೀಡಿದರು. ಇದೇ ಸಂದರ್ಭ ಅವರು ನೂತನ ವಿದ್ಯಾರ್ಥಿ ನಾಯಕರುಗಳನ್ನು ಅಭಿನಂದಿಸಿದರು.
ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ವಿದ್ಯಾರ್ಥಿಗಳ ವಿವಿಧ ಸಂಘಗಳನ್ನು ಉದ್ಘಾಟಿಸಲಾಯಿತು. ಶಾಲಾ ಪ್ರಾಂಶುಪಾಲೆ ಕಲ್ಮಾಡಂಡ ಸರಸ್ವತಿ ವಿದ್ಯಾರ್ಥಿ ನಾಯಕರುಗಳಿಗೆ ಪ್ರಮಾಣ ವಚನ ಭೋದಿಸಿದರು. 2018-19 ನೇ ಸಾಲಿನಲ್ಲಿ ಶೈಕ್ಷಣಿಕ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಸಮಾರಂಭದಲ್ಲಿ ಶಾಲಾ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಎಂ.ಇ. ಚಿಣ್ಣಪ್ಪ, ಸಂಚಾಲಕ ಸಿ.ಡಿ. ಕಾಳಪ್ಪ, ಶಾಲಾ ಆಡಳಿತಾಧಿಕಾರಿ ಎನ್.ಎ. ಪೊನ್ನಮ್ಮ ಸೇರಿದಂತೆ ಸದಸ್ಯರು, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.