ಕೂಡಿಗೆ, ಜು. 12: ತೊರೆನೂರಿನಲ್ಲಿ ಚಿಕುಂಗುನ್ಯದ ಶಂಕೆ ಹಿನ್ನೆಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ಶಿರಂಗಾಲ ವಲಯದ ಕಿರಿಯ ಆರೋಗ್ಯ ಸಹಾಯಕಿಯರು ಮನೆ ಮನೆಗಳಿಗೆ ಭೇಟಿ ನೀಡಿ, ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವವರಿಗೆ ಚುಚ್ಚುಮದ್ದು ನೀಡುವದು ಮತ್ತು ಔಷದೋಪಚಾರ ಮಾಡುತ್ತಿದ್ದಾರೆ. ಸಾಂಕ್ರಾಮಿಕ ರೋಗದ ಜ್ವರ ಪ್ರಕರಣದ ಸಮೀಕ್ಷೆ ನಡೆಸಿ, ರಕ್ತ ಪರೀಕ್ಷಿಸಿಕೊಳ್ಳಲು ತಿಳಿಸಿದ್ದು, ಮನೆಯೊಳಗೆ, ಹೊರಗೆ ಶುಚಿತ್ವ ಕಾಪಾಡಿಕೊಳ್ಳಲು ಸೂಚಿಸುತ್ತಿದ್ದಾರೆ.

ತೊರೆನೂರು ಪರಿಶಿಷ್ಟ ಜಾತಿಯ ಕಾಲೋನಿಯ ವಾಸಿಗಳಿಗೆ ಸಾಂಕ್ರಾಮಿಕ ರೋಗ ಹೆಚ್ಚಾಗಿದ್ದು, ಈ ಕಾಲೋನಿಯಲಿ ಬಳಲುತ್ತಿರುವವರಿಗೆ ಔಷಧಿ, ಮಾತ್ರೆಗಳನ್ನು ನೀಡಲಾಯಿತು.

ಅಶುಚಿತ್ವದಿಂದ ಇರುವ ಬೀದಿಗಳ ಚರಂಡಿಗಳಲ್ಲಿ ಸೊಳ್ಳೆಗಳು ಹೆಚ್ಚಾಗಿ, ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು, ಸೊಳ್ಳೆಗಳ ನಿಯಂತ್ರಣಕ್ಕೆ ಬೇಕಾಗುವ ಬ್ಲೀಚಿಂಗ್ ಪುಡಿಗಳನ್ನು ವಿತರಿಸಲಾಯಿತು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಕೆಲವು ಭಾಗಗಳಲ್ಲಿ ಮಾತ್ರ ಅಶುಚಿತ್ವದಿಂದ ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಇದಕ್ಕೆ ಪಂಚಾಯಿತಿ ಸೂಕ್ತ ಕ್ರಮಕೈಗೊಂಡಿದ್ದು, ಈಗಾಗಲೇ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಗ್ರಾಮದಲ್ಲಿ ಶುಚಿತ್ವ ಮಾಡುವತ್ತ ತಲ್ಲೀನರಾಗಿದ್ದಾರೆ. ಶುಚಿತ್ವ ಮಾಡಿದ ನಂತರ ಚರಂಡಿಗಳಿಗೆ, ನೀರು ನಿಂತ ಸ್ಥಳಗಳಿಗೆ ಬ್ಲೀಚಿಂಗ್ ಪೌಡರ್‍ಗಳನ್ನು ಹಾಕಲಾಗುತ್ತಿದೆ ಎಂದರು.

ತೊರೆನೂರು ಉಪ ಆರೋಗ್ಯ ಕೇಂದ್ರದಲ್ಲಿ ಆಯುರ್ವೇದಿಕ್ ವೈದ್ಯರಿದ್ದು, ಚಿಕಿತ್ಸೆ ನೀಡುತ್ತಿದ್ದಾರೆ.