ಕೂಡಿಗೆ, ಜು. 12: ಮುಳ್ಳು ಸೋಗೆ ಗ್ರಾಮ ಪಂಚಾಯಿತಿಯ ಮೊದಲ ಹಂತದ ಗ್ರಾಮಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವ್ಯ ಅಧ್ಯಕ್ಷತೆಯಲ್ಲಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯಿತು.
ಸಭೆಯಲ್ಲಿ ಮೊದಲಿಗೆ ಕಳೆದ ಸಾಲಿನಲ್ಲಿ ನಡೆದ ಗ್ರಾಮಸಭೆಯಲ್ಲಿ ತೀರ್ಮಾನಿಸಿದ ಮತ್ತು ಚರ್ಚೆಗೊಂಡ ಯೋಜನೆಗಳನ್ನು ಅನುಷ್ಠಾನ ಗೊಳಿಸಿರುವ ಬಗ್ಗೆ ವರದಿ ನೀಡುವಂತೆ, ಮತ್ತು ಕಳೆದ ಸಭೆಗೆ ಗೈರಾದ ವಿವಿಧ ಇಲಾಖೆಗಳ ಅಧಿಕಾರಿಗಳು ಮುಂದಿನ ಸಭೆಗೆ ಹಾಜರಾಗುವಂತೆ ನೋಡಲ್ ಅಧಿಕಾರಿಯ ಮುಖೇನ ಒತ್ತಾಯಿಸಲಾಯಿತ್ತು. ಆದರೆ ಕೆಲವು ಇಲಾಖೆಯ ಅಧಿಕಾರಿಗಳು ಈ ಸಭೆಗೆ ಬಾರದೆ ಇರುವ ಬಗ್ಗೆ ಮತ್ತು ಯೋಜನೆಗಳ ಬಗ್ಗೆ ಮಾಹಿತಿ ಇಲ್ಲದಿರುವ ಬಗ್ಗೆ ನೋಡಲ್ ಅಧಿಕಾರಿಯೊಂದಿಗೆ ಗ್ರಾಮಸ್ಥರಾದ ರಾಜೇಶ್, ಗಣೇಶ್, ಕೃಷ್ಣ, ಕುಮಾರ್ ಮಾತಿನ ಚಕಮಕಿ ನಡೆಸಿದರು.
ನೋಡಲ್ ಅಧಿಕಾರಿಯಾಗಿದ್ದ ತಾಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಹೇಮಂತ್ ಕುಮಾರ್ ಅವರು, ನೋಡಲ್ ಅಧಿಕಾರಿಯಾಗಿ ನಾನು ಸಭೆಯ ನಡವಳಿಕೆಯನ್ನು ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಿಗೆ ಒಪ್ಪಿಸಿದ್ದೇನೆ. ಅದರಂತೆ ಅವರು ಕಾರ್ಯಪ್ರವೃತ್ತರಾಗಬೇಕಿದೆ ಎಂದರು.
ಗೊಂದಿಬಸವನಹಳ್ಳಿ ವ್ಯಾಪ್ತಿಗಳಲ್ಲಿ ಕಾಡಾನೆ ಹಾವಳಿ ಬಗ್ಗೆ ಅರಣ್ಯಕ್ಕೆ ಹೊಂದಿಕೊಂಡಂತಿರುವ 300ಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ಮತ್ತು ಇನ್ನಿತರ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಆ ವ್ಯಾಪ್ತಿಯ ಗ್ರಾಮಸ್ಥರು ಒತ್ತಾಯಿಸಿದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗಮ್ಮನಮಂಟಿ, ವೀರಭೂಮಿ ರಸ್ತೆ, ಕುವೆಂಪು ಬಡಾವಣೆಯ ರಸ್ತೆ ತೀರಾ ಹಾಳಾಗಿದ್ದು, ಸರಿಪಡಿಸುವಂತೆ ಆಗ್ರಹಿಸಿ ಚರ್ಚೆ ನಡೆಯಿತು.
ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಮ್ಮನಕೊಲ್ಲಿ ಶಾಲೆಯ ವ್ಯಾಪ್ತಿಯ ಜಾಗವು ವಿಶಾಲವಾಗಿದ್ದು, ಈ ಜಾಗಕ್ಕೆ ತಾತ್ಕಾಲಿಕವಾದ ಬೇಲಿಯನ್ನಾದರೂ ಅಳವಡಿಸಬೇಕು. ರಸ್ತೆಯ ಬದಿಯಲ್ಲಿ ಶಾಲೆಯು ಇರುವದರಿಂದ ವಿದ್ಯಾರ್ಥಿಗಳಿಗೆ ಅಪಾಯಗಳೇ ಹೆಚ್ಚು. ಆದ್ದರಿಂದ ಗ್ರಾಮ ಪಂಚಾಯಿತಿ ತಡೆಗೋಡೆಯನ್ನಾಗಿ ತಾತ್ಕಾಲಿಕವಾಗಿ ಬೇಲಿಯನ್ನು ನಿರ್ಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಇದರ ಬಗ್ಗೆ ಮಾಹಿತಿ ನೀಡಿದ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ರಾಜಶೇಖರ್, ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ತಡೆಗೋಡೆ ಮತ್ತು ಮೂಲಭೂತ ಸೌಲಭ್ಯ ಮತ್ತು ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ಆದರೆ, ಈ ಶಾಲೆಯ ಮೂರೂವರೆ ಎಕರೆ ಪ್ರದೇಶದ ವಿವಾದ ಕೋರ್ಟಿನಲ್ಲಿರುವದರಿಂದ ತಡೆಗೋಡೆ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ತಾತ್ಕಾಲಿಕವಾಗಿ ಬೇಲಿ ನಿರ್ಮಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವದು ಎಂದರು.
ಈ ಸಂದರ್ಭ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಕೆ.ಆರ್. ಮಂಜುಳಾ, ಜಿಲ್ಲಾ ಪಂಚಾಯ್ತಿ ಅನುದಾನದಲ್ಲಿ ಮುಳ್ಳುಸೋಗೆ ಗುಮ್ಮನಕೊಲ್ಲಿ, ಗೊಂದಿಬಸವನಹಳ್ಳಿ ಗ್ರಾಮ ವ್ಯಾಪ್ತಿಗಳಲ್ಲಿ ಕೈಗೊಂಡ ಕಾಮಗಾರಿಗಳ ಬಗ್ಗೆ, ಮುಂದೆ ಕಾಮಗಾರಿಗಳನ್ನು ನಡೆಸುವ ಕ್ರಿಯಾಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಹಾಜರಿದ್ದ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಮಾಹಿತಿಗಳನ್ನು ನೀಡಿದರು. ಇದೇ ಸಂದರ್ಭ ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆಯೂ ನಡೆಯಿತು. ಸಾರ್ವಜನಿಕರಿಂದ ಅರ್ಜಿ ಸ್ವೀಕಾರ ಮತ್ತು ಅಭಿವೃದ್ಧಿ ಕಾಮಗಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಗ್ರಾಮಸ್ಥರು ಅನೇಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಅನುದಾನವನ್ನು ಸಮರ್ಪಕವಾಗಿ ಬಳಸುವಂತೆ ಒತ್ತಾಯಿಸಿದರು. ಸಭೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯೆ ಪುಷ್ಪ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ತಾರಾನಾಥ್, ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.