ಮಡಿಕೇರಿ: ಸಂತಾನ ಹರಣ ಶಸ್ತ್ರ ಚಿಕಿತ್ಸೆಯಲ್ಲಿ ಪುರಷರ ಸಹಭಾಗಿತ್ವ ಬಹಳ ಮುಖ್ಯ ಎಂದು ಮಡಿಕೇರಿಯ ಶ್ರೀ ರಾಜರಾಜೇಶ್ವರಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆರ್.ಆರ್. ಆಸ್ಪತ್ರೆಯ ಆವರಣದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆಯಲ್ಲಿ ಡಾ. ಎನ್. ಆನಂದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಮ್ಮ ಸಮಾಜವು ಪುರುಷ ಪ್ರಧಾನ ಸಮಾಜವಾಗಿದ್ದು ಕೌಟುಂಬಿಕ ಜವಾಬ್ದಾರಿ ಮಕ್ಕಳ ಪಾಲನೆ, ಪೋಷಣೆ ಹಾಗೂ ಕುಟುಂಬ ಕಲ್ಯಾಣ ಯೋಜನೆಯು ಕೂಡ ಮಹಿಳೆಯೇ ಒಳಗಾಗಬೇಕು ಎಂಬ ಭಾವನೆ ನಮ್ಮಲ್ಲಿದೆ. ದುರಾದೃಷ್ಟವಶಾತ್ ನಮ್ಮ ಸಮಾಜದ ಮಹಿಳೆಯರು ಕೂಡ ಇದೇ ಮನಸ್ಥಿತಿಯನ್ನು ಹೊಂದಿದ್ದಾರೆ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಆನಂದ್ ವಿಷಾದಿಸಿದರು.
ಮುಖ್ಯ ಅತಿಥಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಾದ್ಯಾಪಕ ಮತ್ತು ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ್ ಮಾತನಾಡಿ, ಕುಟುಂಬ ಕಲ್ಯಾಣ ನಿಭಾಯಿಸುವ ಜವಾಬ್ದಾರಿ ತಾಯಿ ಮತ್ತು ಮಗುವಿನ ಆರೋಗ್ಯದ ಪೂರ್ಣ ತಯಾರಿಯನ್ನು ಪ್ರತಿ ಮನೆಯಿಂದ ಆರಂಭಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಜಾಸತ್ಯ ದಿನಪತ್ರಿಕೆಯ ಹಿರಿಯ ವರದಿಗಾರ ಬಿ.ಸಿ. ದಿನೇಶ್, ಅತಿಥಿಗಳಾಗಿ ಗ್ರೀನ್ ಡಾಟ್ ಟ್ರಸ್ಟ್‍ನ ಜಿಲ್ಲಾ ವ್ಯವಸ್ಥಾಪಕ ಸಿ.ಇ. ವಿಶ್ವನಾಥ್ ಉಪಸ್ಥಿತರಿದ್ದರು. ತನು ಮತ್ತು ಸಂಗಡಿಗರು ಪ್ರಾರ್ಥಿಸಿದರೆ, ಮರಿಯಮ್ಮ ಸ್ವಾಗತಿಸಿ, ಪ್ರೀತಿ ನಿರೂಪಿಸಿ, ಕಾವ್ಯ ವಂದಿಸಿದರು.
ಕುಶಾಲನಗರ: ಪ್ರಸಕ್ತ ಯುವಪೀಳಿಗೆ ಶಿಕ್ಷಣದೊಂದಿಗೆ ಸಾಮಾಜಿಕ ಜವಾಬ್ದಾರಿ ಮೈಗೂಡಿಸಿಕೊಳ್ಳಬೇಕಿದೆ ಎಂದು ಚಿಕ್ಕ ಅಳುವಾರ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ಉಪನ್ಯಾಸಕ ಜಮೀರ್ ಅಹಮ್ಮದ್ ಅಭಿಪ್ರಾಯ ವ್ಯಕ್ತಪಡಿಸಿದರು.
ಗುಮ್ಮನಕೊಲ್ಲಿಯ ಮೂಕಾಂಬಿಕ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ‘ರಾಷ್ಟ್ರ ನಿರ್ಮಾಣದಲ್ಲಿ ಯುವ ಸಮೂಹದ ಪಾತ್ರ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಮುಖ್ಯ ಶಿಕ್ಷಕ ಗೋಪಾಲ್ ಮಾತನಾಡಿ, ಜನಸಂಖ್ಯೆ ಸ್ಫೋಟದಿಂದ ನಿರುದ್ಯೋಗ ಸಮಸ್ಯೆ, ಆಹಾರ, ಭೂಮಿ ಸೇರಿದಂತೆ ಅಗತ್ಯ ಸಂಪನ್ಮೂಲಗಳ ಕೊರತೆ ತಲೆದೋರಿದೆ ಎಂದರು.
ಮರಗೋಡು ಸರಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬೆಳ್ಳಿಯಪ್ಪ ದಿನದ ಮಹತ್ವದ ಕುರಿತು ಮಾತನಾಡಿದರು. ಮೂಕಾಂಬಿಕ ಕಾಲೇಜು ಪ್ರಾಂಶುಪಾಲ ಜಿ.ಕೆ. ಯೋಗೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಕೊಣನೂರಿನಲ್ಲಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಸಂತ್ರಸ್ತರಿಗೆ ಕಾಲೇಜು ವಿದ್ಯಾರ್ಥಿಗಳು ಸಂಗ್ರಹಿಸಿದ್ದ ಹಣವನ್ನು ಜಮೀರ್ ಅಹಮ್ಮದ್ ಮೂಲಕ ಹಸ್ತಾಂತರಿಸಲಾಯಿತು. ಕಾಲೇಜು ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಇದ್ದರು.
ಸೋಮವಾರಪೇಟೆ: ಮಕ್ಕಳ ಸಹಾಯವಾಣಿ ಕೇಂದ್ರದ ಆಶ್ರಯದಲ್ಲಿ ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಸಹಯೋಗದೊಂದಿಗೆ ಪಟ್ಟಣದ ಜನತಾಕಾಲೋನಿ ಅಂಗನವಾಡಿಯಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಯುಕ್ತ ಕುಟುಂಬ ಕಲ್ಯಾಣ ವಿಧಾನಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯಿತು.
ಆಸ್ಪತ್ರೆಯ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಬಿ.ಎಂ. ಅನಿತ ಮತ್ತು ಎಂ.ಈ. ದಿವ್ಯ ಅವರುಗಳು, ತಾತ್ಕಾಲಿಕ ಮತ್ತು ಶಾಶ್ವತ ಕುಟುಂಬ ಕಲ್ಯಾಣ ಯೋಜನೆಯನ್ನು ಅಳವಡಿಸಿಕೊಳ್ಳುವ ವಿಧಾನಗಳ ಬಗ್ಗೆ ಮಾಹಿತಿ ಒದಗಿಸಿದರು. ಇದರೊಂದಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುವ ಸವಲತ್ತುಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸಂಘದ ಸದಸ್ಯರು, ಮಕ್ಕಳ ಸಹಾಯವಾಣಿ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಿದ್ದಾಪುರ: ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಮಾಲ್ದಾರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಚರಿಸಲಾಯಿತು.
ಈ ಸಂದರ್ಭ ಕುಟುಂಬ ಕಲ್ಯಾಣ ನಿಭಾಯಿಸುವ ಜವಾಬ್ದಾರಿ, ತಾಯಿ ಮತ್ತು ಮಗುವಿನ ಆರೋಗ್ಯದ ಪೂರ್ಣ ತಯಾರಿಯ ಬಗ್ಗೆ ವೈದ್ಯೆ ಶೃಂಗಶ್ರೀ ಮಾಹಿತಿ ನೀಡಿದರು. ಆರೋಗ್ಯ ನಿರೀಕ್ಷಕ ಸುದರ್ಶನ್, ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು ಹಾಜರಿದ್ದರು.ಕುಶಾಲನಗರ: ಜನಸಂಖ್ಯಾ ಸ್ಫೋಟದ ಬಗ್ಗೆ ವಿದ್ಯಾರ್ಥಿಗಳು, ಯುವ ಸಮುದಾಯ ಅರಿವು ಮತ್ತು ಜಾಗೃತಿ ಮೂಡಿಸಿಕೊಳ್ಳುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ ಎಂದು ಸೋಮವಾರಪೇಟೆ ತಾ.ಪಂ. ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಕರೆ ನೀಡಿದ್ದಾರೆ.
ಕುಶಾಲನಗರದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಆರೋಗ್ಯ ಇಲಾಖೆಯ ತಾಲೂಕು ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಹೆಚ್ಚುತ್ತಿರುವ ಜನಸಂಖ್ಯೆ ನಿಯಂತ್ರಿಸಲು ಕುಟುಂಬ ಕಲ್ಯಾಣ ಇಲಾಖೆಯ ಯೋಜನೆಗಳ ಮೂಲಕ ಸಾಧ್ಯ ಎಂದ ಅವರು, ಕೊಡಗು ಜಿಲ್ಲೆಯಲ್ಲಿ ಕುಟುಂಬ ಯೋಜನೆ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗಿರುವದಾಗಿ ತಿಳಿಸಿದರು.
ನುಸುಳುಕೋರರಿಂದ ಜಿಲ್ಲೆಯಲ್ಲಿ ಜನಸಂಖ್ಯಾ ಸ್ಫೋಟವಾಗುತ್ತಿರುವ ಬಗ್ಗೆ ಅಸಹನೆ ವ್ಯಕ್ತಪಡಿಸಿದ ಅವರು, ಆರೋಗ್ಯ ಇಲಾಖೆಯ ಯೋಜನೆಗಳ ಬಗ್ಗೆ ಅರಿವು ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದ ಶನಿವಾರಸಂತೆಯ ಉಪನ್ಯಾಸಕ ಜಯಕುಮಾರ್, ಬಾಲ್ಯ ವಿವಾಹದೊಂದಿಗೆ ಧಾರ್ಮಿಕ ಮೂಢನಂಬಿಕೆ, ಅನಕ್ಷರತೆ ಸಾಮಾಜಿಕ ಮೌಢ್ಯಗಳು ಜನಸಂಖ್ಯಾ ಸ್ಫೋಟಕ್ಕೆ ಪ್ರಮುಖ ಕಾರಣವಾಗಿವೆ. ಈ ಮೂಲಕ ಆಹಾರ ಸಮಸ್ಯೆ ಸೇರಿದಂತೆ ಮೂಲಭೂತ ಸೌಲಭ್ಯ, ಸಂಪನ್ಮೂಲ ಕೊರತೆ ಎದುರಾಗುತ್ತಿರುವದು ಆತಂಕದ ವಿಷಯವಾಗಿದೆ ಎಂದರು. ಈ ಮೂಲಕ ದೇಶದ ಅಭಿವೃದ್ಧಿ ಕುಂಠಿತಗೊಳ್ಳಲು ಅವಕಾಶ ಕಲ್ಪಿಸಿದಂತಾಗುತ್ತದೆ. ಭಾರತ ದೇಶದಲ್ಲಿ ನೂರು ವರ್ಷಗಳ ಅವಧಿಯಲ್ಲಿ 100 ಕೋಟಿ ಜನಸಂಖ್ಯೆ ಏರಿಕೆಯಾಗಿರುವ ಬಗ್ಗೆ ಮಾಹಿತಿ ಒದಗಿಸಿದ ಅವರು, ದೇಶದ ಭವಿಷ್ಯದ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ಹೊಂದಬೇಕು ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್ ಮಾತನಾಡಿ, ಜನಸಂಖ್ಯೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕುಟುಂಬ ಕಲ್ಯಾಣ ಯೋಜನೆಯಡಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಮಾಹಿತಿ ಒದಗಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋಮವಾರಪೇಟೆ ತಾ.ಪಂ. ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ತಂಗಮ್ಮ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸೋಮವಾರಪೇಟೆ ಪ.ಪಂ. ಸದಸ್ಯೆ ನಳಿನಿ ಗಣೇಶ್, ಕುಶಾಲನಗರ ಪ.ಪಂ. ಸದಸ್ಯೆ ರೂಪಾ ಉಮಾಶಂಕರ್, ಸಿಡಿಪಿಒ ಮಹೇಶ್, ರೋಟರಿ ಅಧ್ಯಕ್ಷ ಅಶೋಕ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಮತ್ತಿತರರು ಇದ್ದರು. ಈ ಸಂದರ್ಭ ಆರೋಗ್ಯ ಇಲಾಖೆಯಲ್ಲಿ ಪ್ರಗತಿ ಸಾಧಿಸಿದ ಆಶಾ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರಿಗೆ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ವಿವಿಧ ವಿಭಾಗಗಳ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಕುಶಾಲನಗರ ಮಹಾತ್ಮಾಗಾಂಧಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಸ್ಥಳೀಯ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ತೆರಳುವ ಮೂಲಕ ಜನಸಂಖ್ಯಾ ದಿನಾಚರಣೆ ಬಗ್ಗೆ ಘೋಷಣೆ ಕೂಗುತ್ತಾ ಸಾಗಿದರು.