ಮಡಿಕೇರಿ, ಜು. 12: ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣದಲ್ಲಿ ಕಲಿಕೆಯೊಂದಿಗೆ ಗ್ರಹಿಕಾ ಸಾಮಥ್ರ್ಯವನ್ನು ಹೆಚ್ಚಿಸಿದಲ್ಲಿ ಭವಿಷ್ಯದ ಕಲಿಕೆಗೆ ಸಹಕಾರಿಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಅರುಂದತಿ ತಿಳಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮೈಸೂರಿನ ಪ್ರಥಮ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ನಗರದ ಸ್ತ್ರೀ ಶಕ್ತಿ ಭವನದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗಾಗಿ ನಡೆದ ಶಾಲಾ ಪೂರ್ವ ಶಿಕ್ಷಣ ತರಬೇತಿ ಕಾರ್ಯಗಾರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಪುಟ್ಟ ಮಕ್ಕಳಿಗೆ ಶಿಕ್ಷಣ ನೀಡುವ ಮೊದಲು ಅವರ ಮನಸ್ಸನ್ನು ಭಾವನಾತ್ಮಕವಾಗಿ, ಬೌದ್ಧಿಕವಾಗಿ ಹಾಗೂ ಮಾನಸಿಕವಾಗಿ ಅರಿತುಕೊಂಡು ತಯಾರಿ ನಡೆಸುವದು ಸೂಕ್ತವೆಂದರು. ಸಹ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಪಿ. ಸವಿತಾ ಮಾತನಾಡಿ, ಖಾಸಗಿ ವಿದ್ಯಾಸಂಸ್ಥೆಗಳು ನೀಡುವ ಪೂರ್ವ ಶಿಕ್ಷಣಕ್ಕೆ ಸರಿಸಮಾನವಾಗಿ ಶಿಕ್ಷಣ ನೀಡುವ ಉದ್ದೇಶದಿಂದ ಇಲಾಖೆಯು ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ಕಾರ್ಯಾಗಾರ ನಡೆಸುತ್ತಿದೆ ಎಂದರು. ಮೈಸೂರಿನ ಪ್ರಥಮ್ ಸಂಸ್ಥೆಯ ಸಂಚಾಲಕಿ ಸರಸ್ವತಿ ಮಾತನಾಡಿ, ಮಕ್ಕಳಲ್ಲಿ ಕಲಿಕೆಯ ಮಟ್ಟವನ್ನು ವೃದ್ಧಿಸಲು ಬೇಕಾದ ಅಗತ್ಯ ಕ್ರಮ ಹಾಗೂ ಅನುಸರಿಸಬೇಕಾದ ವಿಧಾನವನ್ನು ತಿಳಿ ಹೇಳಲಾಗುತ್ತದೆ. ಬಡ ವರ್ಗದವರೂ ತಮ್ಮ ಮಕ್ಕಳಿಗೆ ಗುಣಮಟ್ಟದ ಪೂರ್ವ ಶಿಕ್ಷಣ ಕೊಡಿಸಲು ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಅಂಗನವಾಡಿಗಳಲ್ಲಿ ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು. ಕಾರ್ಯಾಗಾರ ಎರಡು ದಿನಗಳ ಕಾಲ ನಡೆಯಿತು.