ಸುಂಟಿಕೊಪ್ಪ, ಜು. 12: ಬಡ ಜನರ ಆಶೋತ್ತರಗಳನ್ನು ಪ್ರಾಮಾಣಿಕವಾಗಿ ಈಡೇರಿಸುತ್ತಾ ಅಭಿವೃದ್ಧಿಯ ದೂರದೃಷ್ಠಿಯಿಂದ ಕಾರ್ಯನಿರ್ವಹಿಸುತ್ತಿದ್ದ ಗ್ರಾ.ಪಂ. ಪಿಡಿಓ ರಾಜಕೀಯ ಸ್ವಪ್ರತಿಷ್ಠೆ ಹಿತಾಶಕ್ತಿಗೆ ವರ್ಗಾವಣೆ ‘ಭಾಗ್ಯ’ ಲಭ್ಯವಾಗಿದೆ.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ ಅವರು 30.01.2017 ರಂದು ಅಧಿಕಾರ ಸ್ವೀಕರಿಸಿದರು. ಅದಕ್ಕಿಂತ ಹಿಂದೆ ಈ ಗ್ರಾಮ ಪಂಚಾಯಿತಿಗೆ ‘ಮ್ಯೂಸಿಕ್ ಛೇರ್’ ರೀತಿ 4 ಮಂದಿ ಪಿಡಿಓಗಳು 1 ವರ್ಷದಲ್ಲಿ ಬಂದು ಹೋದರು. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಕಾಂಗ್ರೆಸ್ ಆಡಳಿತದಲ್ಲಿದ್ದು ರಾಜಕೀಯವಾಗಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮತ್ತು ಎಸ್‍ಡಿಪಿಐ ಪಕ್ಷದ ಪ್ರಮುಖರ ಕಾರ್ಯಕ್ಷೇತ್ರವಾಗಿದೆ. ಸುಂಟಿಕೊಪ್ಪ ಗ್ರಾ.ಪಂ. ಕೆಲ ಸದಸ್ಯರುಗಳಿಗೆ ಕಾಮಗಾರಿ ಗುತ್ತಿಗೆ ಪಡೆಯುವ ವ್ಯಕ್ತಿಯೋರ್ವರಿಗೆ ‘ಮಣೆ’ ಹಾಕಲಿಲ್ಲ ಎಂಬ ಕಾರಣಕ್ಕಾಗಿ ಎರಡೂ ಪಕ್ಷದ ಸದಸ್ಯರುಗಳು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿ.ಪಂ. ಸದಸ್ಯರ ಮೊರೆಹೋಗಿ ವರ್ಗಾವಣೆಗೆ ಒತ್ತಾಯಿಸಿದ್ದು ಜಿ.ಪಂ.ನ ಅಧಿಕಾರಿಯೋರ್ವರು ವಿಶೇಷ ಆಸಕ್ತಿ ವಹಿಸಿ ವರ್ಗಾವಣೆಗೆ ಅಸ್ತು ನೀಡಿದ್ದಾರೆ.

ಪಂಚಾಯಿತಿ ನೂತನ ಕಟ್ಟಡ ಕಾಮಗಾರಿ: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಕಟ್ಟಡ ರಾಷ್ಟ್ರೀಯ ಹೆದ್ದಾರಿ ಬಳಿಯಿದ್ದು ಪುರಾತನ ಕಾಲದ ಕಟ್ಟಡ ಗಾಳಿ ಮಳೆಗೆ ಸಿಲುಕಿ ಬೀಳುವ ಸ್ಥಿತಿಯಲ್ಲಿದೆ ನೂತನ ಕಟ್ಟಡಕ್ಕೆ ಮಾರ್ಕೆಟ್ ಹಿಂಭಾಗದ ಜಾಗದಲ್ಲಿ ಶಾಸಕ ಅಪ್ಪಚ್ಚು ರಂಜನ್ ಭೂಮಿಪೂಜೆ ನೇರವೇರಿಸಿದ್ದರು. ಆಗ ಕಾಂಗ್ರೆಸ್‍ನ ಜಿ.ಪಂ. ಸದಸ್ಯೆ ಕೆಲ ಗ್ರಾ.ಪಂ. ಸದಸ್ಯರುಗಳು ಇಲ್ಲಿ ಭೂಮಿಪೂಜೆಗೆ ವಿರೋಧ ವ್ಯಕ್ತಪಡಿಸಿದ್ದರು ಸಮಾರಂಭಕ್ಕೆ ಗೈರಾಗಿ ಆಡಳಿತ ಮಂಡಳಿಯ ವಿರುದ್ಧ ಕೆಂಗಣ್ಣಿಗೆ ಗುರಿಯಾಗಿದ್ದರು.

ಅಯ್ಯಪ್ಪ ದೇವಾಲಯದ ಬಳಿ ಭೂಪರಿವರ್ತನೆಯಾದ ನಿವೇಶನದಲ್ಲಿ ಗ್ರಾ.ಪಂ. ನೂತನ ಕಟ್ಟಡವನ್ನು ನಿರ್ಮಿಸಲು ಕೆಲ ಗ್ರಾ.ಪಂ. ಸದಸ್ಯರುಗಳ ‘ಸ್ವಇಚ್ಚಾಶಕ್ತಿಗೆ’ ಅಡ್ಡಿಯಾಗಿರುವದರಿಂದ ಹಾಗೂ ಮಾರ್ಕೆಟ್ ಬಳಿ ಗ್ರಾ.ಪಂ. ಕಟ್ಟಡದ ಭೂಮಿಪೂಜೆ ನೇರವೇರಿಸಿ 4 ತಿಂಗಳಾದರೂ ಕಾಮಗಾರಿ ಆರಂಭವಾಗದರಿಂದ ಶಾಸಕರು ‘ಗರಂ’ಆಗಿದ್ದು, ಪಿಡಿಓ ಈ ಬಗ್ಗೆ ಆಸಕ್ತಿ ವಹಿಸಲಿಲ್ಲವೆಂದು ಈ ಬಗ್ಗೆ ಜಿ.ಪಂ. ಸದಸ್ಯರು ಉಸ್ತುವಾರಿ ಸಚಿವರಿಗೆ ಪಿಡಿಓ ವರ್ಗಾವಣೆಗೆ ‘ಸಾಥ್’ ನೀಡಲು ಕಾರಣವೆನ್ನಲಾಗಿದೆ.

ಕಸ ವಿಲೇವಾರಿಗಾಗಿ ಟಾಟಾ ಕಾಪಿ üತೋಟದಿಂದ 2 ಎಕ್ರೆ ಜಾಗವನ್ನು 14 ವರ್ಷಗಳ ಹಿಂದೆಯೇ ಗುರುತಿಸಿ ಜಾಗವನ್ನು ಖರೀದಿಸಲಾಗಿದ್ದರೂ ಪಂಚಾಯಿತಿ ಖಾತೆಗೆ ವರ್ಗಾವಣೆಗೊಳಿಸಲು ಹಿಂದಿನಿಂದಲೂ ಆಡಳಿತ ನಡೆಸುತ್ತಾ ಬಂದ ಆಡಳಿತ ಮಂಡಳಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಡತದ ಬಗ್ಗೆ ಗಮನಹರಿಸದೆ ಇರುವದರಿಂದ ಜಾಗದ ಕಡತವು ಉಪವಿಭಾಗಧಿಕಾರಿಗಳ ಕಚೇರಿಯಲ್ಲಿ ಮೂಲೆಗುಂಪಾಗಿತ್ತು. ಈ ಅಭಿವೃದ್ಧಿ ಅಧಿಕಾರಿ ಕಾರ್ಯಾವಧಿಯಲ್ಲಿ ಅದಕ್ಕೆ ಪ್ರಾಮುಖ್ಯತೆ ನೀಡಿ ಪಂಚಾಯಿತಿ ಖಾತೆಗೆ ಹೊಂದಿಸಿಕೊಳ್ಳುವ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಿದ್ದರು. ನೂತನ ಬಡಾವಣೆಗಳನ್ನು ನಿರ್ಮಿಸಿಕೊಂಡು ಜಾಗವನ್ನು ಪಡೆಯಲು 11 ಬಿ ಪ್ರಕಾರ ಮನೆ ನಿರ್ಮಿಸುವವರಿಗೆ ತೆರಿಗೆ ವಿಧಿಸುವದು ಸೇರಿದಂತೆ ಪಂಚಾಯಿತಿ ಅಭಿವೃದ್ಧಿಗೆ ಶ್ರಮಿಸುವಲ್ಲಿ ಕಾನೂನಿನ ಚೌಕಟ್ಟಿನೊಳಗೆ ಕರ್ತವ್ಯ ನಿರ್ವಹಿಸುತ್ತಿದ್ದುದು ಕೆಲ ಗ್ರಾ.ಪಂ. ಸದಸ್ಯರ ಕೆಂಗಣ್ಣಿಗೆ ಗುರಿಯಾಯಿತ್ತೆನ್ನಲಾಗಿದೆ. ಗ್ರಾ.ಪಂ. ಕೆಲ ಸದಸ್ಯರುಗಳು ಹಾಗೂ ಗುತ್ತಿಗೆದಾರರೋರ್ವರು ಪಿಡಿಓ ವರ್ಗಾವಣೆಗೆ ವಿಶೇಷ ಆಸಕ್ತಿ ವಹಿಸಿದ್ದು ಸಾರ್ವಜನಿಕರು ಮಾತ್ರ ಪಿಡಿಓ ವರ್ಗಾವಣೆ ನಡೆಸಿದ್ದು ಸಾರ್ವಜನಿಕರ ಕೆಂಗಣಿಗೆ ಗುರಿಯಾಗುವಂತಾಗಿದೆ.

ಸುಂಟಿಕೊಪ್ಪದ ಸರಕಾರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲ ಭ್ರಷ್ಟ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಉದ್ದಟತನ ತೋರ್ಪಡಿಸುತ್ತಾ ಆನೇಕ ವರ್ಷಗಳಿಂದ ಠಿಕಾಣಿಹೂಡಿದ್ದು ಅವರುಗಳ ವರ್ಗಾವಣೆಗೆ ಜಿ.ಪಂ. ಸದಸ್ಯರು, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಗ್ರಾ.ಪಂ. ಸದಸ್ಯರು ದೂರು ನೀಡಿ ಅವರ ಕಾರ್ಯವೈಖರಿಯನ್ನು ಪ್ರಶ್ನಿಸದೆ ಜಾಣ ಮೌನ ವಹಿಸಿರುವ ಮರ್ಮವೇನು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಸುಂಟಿಕೊಪ್ಪ ಪಂಚಾಯಿತಿಯನ್ನು ಅಭಿವೃದ್ಧಿಪಡಿಸುವ ದಿಸೆಯಲ್ಲಿ ಉತ್ತಮ ಕೆಲಸ ಕಾರ್ಯ ಅಲ್ಲದೆ ಗ್ರಾಮದ ಬಡಜನತೆಗೆ ಸದುಪಯೋಗ ಆಗುವ ರೀತಿಯಲ್ಲಿ ನಿರ್ವಹಿಸಿಕೊಡುತ್ತಿದ್ದು, ಅವರನ್ನು ವರ್ಗಾಹಿಸಿ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ತೊಡಕು ತಂದಿರುವದು ವಿಷಾದನೀಯ ಎಂದು ಕರವೇ ಹೋಬಳಿ ಅಧ್ಯಕ್ಷ ನಾಗೇಶ್ ಪೂಜಾರಿ, ಸಂತೋಷ್ (ದಿನು) ಅಸಾಮಾಧಾನ ವ್ಯಕ್ತಪಡಿಸಿದ್ದಾರೆ.