ಗೋಣಿಕೊಪ್ಪಲು, ಜು. 12: ತಿತಿಮತಿ ಗಿರಿಜನ ವಿದ್ಯಾರ್ಥಿನಿ ನಿಲಯ, ಅಂಬೇಡ್ಕರ್ ಮೊರಾರ್ಜಿ ವಸತಿ ಶಾಲೆ, ಮರೂರು ಆಶ್ರಮ ಶಾಲೆಗಳಿಗೆ ಭೇಟಿ ನೀಡಿದ ಕೊಡಗು ಜಿಲ್ಲಾ ಪಂಚಾಯಿತಿಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದರು.

ನಂತರ ವಸತಿ ನಿಲಯಗಳಲ್ಲಿದ್ದ ಮಕ್ಕಳ ಪ್ರಗತಿಯ ಬಗ್ಗೆ ಮಾಹಿತಿ ಪಡೆದರು. ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಶಿಕ್ಷಕ, ಸಿಬ್ಬಂದಿಗಳೊಂದಿಗೆ ಚರ್ಚೆ ನಡೆಸಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟದ ಬಗ್ಗೆ ಮಾಹಿತಿ ಪಡೆದ ಅವರು ನಂತರ ವಿದ್ಯಾರ್ಥಿಗಳು ತಂಗುವ ನಿಲಯಗಳನ್ನು ಪರಿಶೀಲಿಸಿದರು. ಇಲಾಖೆಯ ನಿಯಮದಂತೆ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಆಹಾರ ವಿತರಣೆ ಆಗುವಂತೆ ಎಚ್ಚರಿಕೆ ವಹಿಸಬೇಕೆಂದು ಸೂಚನೆ ನೀಡಿದರು. ಶುಚಿತ್ವ, ಶೌಚಾಲಯದ ನಿರ್ವಹಣೆ ಬಗ್ಗೆ ವಿಶೇಷ ಗಮನ ಹರಿಸಲು ಸಲಹೆ ನೀಡಿದರು.

ವಿದ್ಯಾರ್ಥಿಗಳಿಗೆ ನೀಡುವ ಆಹಾರದ ಗುಣಮಟ್ಟವನ್ನು ಪರಿಶೀಲಿ ಸಿದರು. ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳು ಅಕ್ಟೋಬರ್ ತಿಂಗಳಿನಲ್ಲಿ ಪ್ರವಾಸ ಕೈಗೊಳ್ಳಲು ಅವಕಾಶ ಕಲ್ಪಿಸಬೇಕೆಂದು ಅಧ್ಯಕ್ಷರಲ್ಲಿ ಮನವಿ ಮಾಡಿದರು. ವಿದ್ಯಾರ್ಥಿಗಳು ಶೇ. 80 ಸಾಧನೆ ಮಾಡಿದರೆ ಖುದ್ದು ಪ್ರವಾಸ ಕರೆದುಕೊಂಡು ಹೋಗುವ ಭರವಸೆ ನೀಡಿದರು. ನಿಲಯದ ದಾಸ್ತಾನು ಕೊಠಡಿ, ಶೌಚಾಲಯ, ಅಡುಗೆ ಕೋಣೆ, ಊಟದ ಸಭಾಂಗಣ, ತರಗತಿ ಕೊಠಡಿಗಳನ್ನು ಪರಿಶೀಲನೆ ನಡೆಸಿದರು. ವಿದ್ಯಾರ್ಥಿಗಳಿಗೆ ಇಲಾಖೆ ನೀಡಿರುವ ಹಾಸಿಗೆ, ಹೊದಿಕೆಗಳ ಗುಣಮಟ್ಟವನ್ನು ಪರಿಶೀಲಿಸಿದರು. ಭೇಟಿಯ ಸಂದರ್ಭ ಗಿರಿಜನ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಚಂದ್ರಶೇಖರ್, ವ್ಯವಸ್ಥಾಪಕ ನವೀನ್ ವಸತಿ ನಿಲಯದ ವಾರ್ಡನ್ ಲಿಂಗರಾಜು ಹಾಜರಿದ್ದರು.

- ಹೆಚ್.ಕೆ. ಜಗದೀಶ್