ಮಡಿಕೇರಿ, ಜು. 12: ವೀರಾಜಪೇಟೆ ತಾಲೂಕಿನ ಹೆಗ್ಗಳ ಗ್ರಾಮದಲ್ಲಿ ಫೋರ್ಟ್ಲ್ಯಾಂಡ್ ರಬ್ಬರ್ ಕಂಪೆನಿಗೆ ಗೇಣಿಗೆ ನೀಡಲಾಗಿದ್ದ ಅರಣ್ಯ ಜಮೀನನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಖಾತೆ ವರ್ಗಾಯಿಸಿರುವ ಕುರಿತು ಈ ಹಿಂದೆ ಕೊಡಗು ಏಕೀಕರಣರಂಗದ ಪ್ರಮುಖರ ಮೂಲಕ ಬಹಿರಂಗಗೊಂಡ ಆತಂಕಕಾರಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಮಾನವ ಹಕ್ಕು ಆಯೋಗವು ಸ್ವಯಂಪ್ರೇರಣೆಯಿಂದ ಪ್ರಕರಣ ದಾಖಲಿಸಿದೆ. ಈ ವಿಷಯದಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮದ ಕುರಿತು ಜಿಲ್ಲಾಧಿಕಾರಿಗಳು ಇತ್ತೀಚೆಗೆ ತಮ್ಮ ಕಚೇರಿಯಲ್ಲಿ ಸಂಬಂಧಿಸಿದ ಪ್ರಮುಖ ಅಧಿಕಾರಿಗಳನ್ನು ಒಳಗೊಂಡ ಮಹತ್ವದ ಸಭೆಯೊಂದನ್ನು ನಡೆಸಿದ್ದಾರೆ.
ಹೆಗ್ಗಳ ಗ್ರಾಮದ ಎರಡು ಪ್ರತ್ಯೇಕ ಸರ್ವೆ ನಂಬರ್ಗಳನ್ನು ಒಟ್ಟು 118.87 ಎಕರೆಗಳನ್ನು 1913ರಲ್ಲಿ 99 ವರ್ಷ ಗುತ್ತಿಗೆ ಪಡೆದಿದ್ದ ಪೋರ್ಲ್ಲ್ಯಾಂಡ್ ಸಂಸ್ಥೆ ಅಕ್ರಮವಾಗಿ 1980ರಲ್ಲಿ ಖಾಸಗಿಯವರಿಗೆ ಮಾರಾಟ ಮಾಡಿದ್ದು, ಇದೀಗ ಹಲವಾರು ಅದನ್ನು ಖರೀದಿಸಿದ ದಾಖಲೆಗಳಿದ್ದು, ಎಲ್ಲವೂ ಅಕ್ರಮವಾಗಿದ್ದಲ್ಲಿ, ಕೂಡಲೇ ಮ್ಯೂಟೇಷನ್ ರದ್ದುಪಡಿಸುವದು ಹಾಗೂ ಈ ಜಾಗಗಳಲ್ಲಿ ಯಾವದೇ ರೀತಿಯ ವಹಿವಾಟುಗಳಿಗೆ ತಡೆಯಾಜ್ಞೆ ನೀಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಅಕ್ರಮ ವ್ಯವಹಾರಗಳಿಗೆ ಸಂಬಂಧಿಸಿ ಸಹಕರಿಸಿದ ಅಂದಿನ ತಹಶೀಲ್ದಾರ್ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸುವದರೊಂದಿಗೆ, ಗ್ರಾಮ ಲೆಕ್ಕಿಗ, ಕಂದಾಯ ಪರಿವೀಕ್ಷಕ ಹಾಗೂ ಅಂದಿನ ಉಪನೋಂದಣಾಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲು ತೀರ್ಮಾನಿಸಿ 1 ವಾರ ಗಡುವು ನೀಡಲಾಯಿತು. ಸರ್ವೆ ಇಲಾಖೆಯ ಸಿಬ್ಬಂದಿಗಳಿಗೆ 1 ವಾರದೊಳಗೆ ನೋಟೀಸ್ ನೀಡಿ, ಶಿಸ್ತು ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಭೆ ತೀರ್ಮಾನಿಸಿತು.
ಮಡಿಕೇರಿಯ ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಭೂದಾಖಲೆಗಳ ಉಪನಿರ್ದೇಶಕರು, ಜಿಲ್ಲಾ ನೋಂದಣಾಧಿಕಾರಿ, ವೀರಾಜಪೇಟೆ ತಹಶೀಲ್ದಾರ್ ಅವರನ್ನು ಒಳಗೊಂಡಂತೆ ಈ ಸಭೆಯಲ್ಲಿ ಕೂಲಂಕಶÀವಾದ ಚರ್ಚೆ ನಡೆದಿದ್ದು, ಪ್ರಕರಣದ ಬಗ್ಗೆ ಆಯೋಗ ಹಾಗೂ ಸರಕಾರಕ್ಕೆ ತುರ್ತಾಗಿ ವರದಿ ಸಲ್ಲಿಸಬೇಕಾಗಿರುವದರಿಂದ ಇದನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ವರದಿ ನೀಡಲು ಅಂದು ನಡೆದ ಸಭೆಯಲ್ಲಿ ಸೂಚನೆ ನೀಡಲಾಗಿದ್ದು, ಭಾರೀ ಪ್ರಭಾವಗಳ ಹಿನ್ನೆಲೆಯಲ್ಲಿ ಮುಚ್ಚಿಹೋಗುತ್ತಿದ್ದ ಈ ಪ್ರಕರಣ ಮರುಜೀವ ಪಡೆಯುತ್ತಿದೆ.
2017ರಲ್ಲಿ ಕೊಡಗು ಏಕೀಕರಣ ರಂಗದ ಕಾರ್ಯದರ್ಶಿ ಟಿ.ಎಂ. ಸೋಮಯ್ಯ ಅವರು ಮುಖ್ಯ ಅರಣ್ಯ ಸಂರಕ್ಷಣಾದಿ üಕಾರಿಗಳಿಗೆ ಈ ಬಗ್ಗೆ ಲಿಖಿತ ಪುಕಾರು ನೀಡಿದ್ದರು.
ಹಿನ್ನೆಲೆ ಏನು?
ವೀರಾಜಪೇಟೆ ತಾಲೂಕು ಹೆಗ್ಗಳ ಗ್ರಾಮದ ಮಾಕುಟ್ಟ ಅರಣ್ಯವಲಯಕ್ಕೆ ಒಳಪಟ್ಟ ಕೆರ್ಟಿ ಮೀಸಲು ಅರಣ್ಯ ಪ್ರದೇಶದಲ್ಲಿ 1288.75 ಅರಣ್ಯ ಪ್ರದೇಶವನ್ನು ಪೋರ್ಟ್ಲ್ಯಾಂಡ್ ರಬ್ಬರ್ ಕಂಪನಿಗೆ ಗುತ್ತಿಗೆಗೆ ನೀಡಿದ್ದು, ಗುತ್ತಿಗೆ ನೀಡಲ್ಪಟ್ಟ ಸರ್ವೆ ನಂಬರ್ ಪೈಕಿ ಸರ್ವೆ ನಂ. 211/1ರ 88.27 ಎಕ್ರೆ ಮತ್ತು 211/16ರ 30.60ಎಕ್ರೆ ಜಮೀನುಗಳನ್ನು ಪೋರ್ಟ್ಲ್ಯಾಂಡ್ ರಬ್ಬರ್ ಕಂಪನಿ ಎಸ್ಟೇಟ್ನ ಮಾಲೀಕರು ವೀರಾಜಪೇಟೆ ಉಪನೋಂದಾಣಾಧಿಕಾರಿಯವರ ಕಚೇರಿಯಲ್ಲಿ ನೋಂದಾಯಿತವಾದ ಕ್ರಯ ಪತ್ರ ಸಂಖ್ಯೆ: 570/79-80, ದಿ: 21.03.1980ರಲ್ಲಿ ವಿ.ಸಿ. ಪೌಲೋಸ್, ಯು. ಮ್ಯಾಥ್ಯು ಮತ್ತು ಚಿಣ್ಣಮ್ಮ ಮ್ಯಾಥ್ಯು ಇವರಿಗೆ ಮಾರಾಟ ಮಾಡಿದ್ದು, ನಂತರ ಇದೇ ಸರ್ವೆ ನಂ.ನಲ್ಲಿ ಮರುವಿಕ್ರಯವಾಗಿ ಸುಮಾರು 15 ಜನರಿಗೆ ಪೋಡಿಯಾಗಿ ಖಾಸಗಿ ವ್ಯಕ್ತಿಗಳ ಹೆಸರಿಗೆ ಖಾತೆ ವರ್ಗಾವಣೆಯಾಗಿದೆ. ಇದು ಬೆಳಕಿಗೆ ಬಂದ ನಂತರ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ಪ್ರಕರಣ ಸಂಖ್ಯೆ: 2585/10/23/2017(ಬಿ-2) ಮೇರೆ ಸ್ವಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡಿದ್ದು, ಈ ವಿಷಯದಲ್ಲಿ ಶೀಘ್ರವಾಗಿ ಕ್ರಮ ಕೈಗೊಂಡು ಆಯೋಗಕ್ಕೆ ವರದಿ ಸಲ್ಲಿಸುವಂತೆ ನಿರ್ದೇಶಿಸಿತು. ಗುತ್ತಿಗೆ ನೀಡಲಾದ ಅರಣ್ಯ ಜಮೀನುಗಳನ್ನು ಷರತ್ತು ಉಲ್ಲಂಘಿಸಿ ಮಾರಾಟವಾಗಿರುವದು ಅತ್ಯಂತ ಗಂಭೀರ ಪ್ರಕರಣವಾಗಿದ್ದು, ದೂರಿನ ಕುರಿತು ಕ್ರಮಕೈಗೊಂಡು, ಕೈಗೊಂಡ ಕ್ರಮದ ಬಗ್ಗೆ ರಾಜ್ಯ ಮಾನವ ಹಕ್ಕು ಆಯೋಗ ಹಾಗೂ ಸರ್ಕಾರಕ್ಕೆ ತುರ್ತಾಗಿ ವರದಿ ಸಲ್ಲಿಸಬೇಕಾಗಿರುತ್ತದೆ ಎಂಬ ಅಂಶವನ್ನು ಸಭೆಯಲ್ಲಿ ಚರ್ಚಿಸಲಾಯಿತು.
ದಿನಾಂಕ: 6.10.1913ರಲ್ಲಿ ಕೆರ್ಟಿ ಮೀಸಲು ಅರಣ್ಯದ 1288.75 ಎಕ್ರೆ (ಹೆಗ್ಗಳ ಗ್ರಾಮದ ಸರ್ವೆ ನಂ. 211/1ರಲ್ಲಿ 88.27 ಎಕ್ರೆ, 211/2ರ 566.34 ಎಕ್ರೆ, 211/3ರ 444.70 ಎಕ್ರೆ, 211/4ರ 115.24 ಎಕ್ರೆ, 211/5ರ 18.40 ಎಕ್ರೆ, 211/6ರ 21.90 ಎಕ್ರೆ, 211/15ರ 3.30 ಎಕ್ರೆ ಮತ್ತು 211/16ರ 30.60 ಎಕ್ರೆ) ಅರಣ್ಯ ಜಮೀನನ್ನು ಲಂಡನ್ ಮೂಲದ ಪೋರ್ಟ್ ಲ್ಯಾಂಡ್ ರಬ್ಬರ್ ಕಂಪನಿಗೆ ಗುತ್ತಿಗೆಗೆ ನೀಡಲಾಗಿತ್ತು.
(ಮೊದಲ ಪುಟದಿಂದ) 1936ರಲ್ಲಿ ಪೋರ್ಟ್ಲ್ಯಾಂಡ್ ರಬ್ಬರ್ ಕಂಪನಿಯು 1288.75 ಎಕ್ರೆಯ ಗುತ್ತಿಗೆ ಹಕ್ಕನ್ನು ಎ.ವಿ. ಥೋಮಸ್ ಮಾಲೀಕತ್ವದ ಕೂರ್ಗ್ ರಬ್ಬರ್ ಕಂಪನಿಗೆ ವರ್ಗಾಯಿಸಿದ್ದು, ದಿನಾಂಕ: 20.6.1944ರಲ್ಲಿ ಕೂರ್ಗ್ ರಬ್ಬರ್ ಕಂಪನಿಯು ಎ.ಕೆ. ಗೋಪಾಲ್ ಪಿಳ್ಳೆ ಮಾಲೀಕತ್ವದ ಪೋರ್ಟ್ಲ್ಯಾಂಡ್ ರಬ್ಬರ್ ಎಸ್ಟೇಟ್ ಕಂಪನಿಗೆ ಗುತ್ತಿಗೆ ಹಕ್ಕನ್ನು ವರ್ಗಾಯಿಸಿದ್ದಾರೆ. ದಿನಾಂಕ 25.3.1980ರಲ್ಲಿ ಪೋರ್ಟ್ ಲ್ಯಾಂಡ್ ರಬ್ಬರ್ ಕಂಪನಿ (ಪ್ರತಿನಿಧಿಸುವವರು ಕೆ. ಕೋರ ಮತ್ತು ಮ್ಯಾಥ್ಯು ಜೋಸ್ವ)ಯವರು ಮಾರಾಟಗಾರರಾಗಿ ವಿ.ಸಿ. ಪೌಲೋಸ್, ಚಿನ್ನಮ್ಮ ಮ್ಯಾಥ್ಯು ಮತ್ತು ಯು. ಮ್ಯಾಥ್ಯು ಇವರಿಗೆ ಹೆಗ್ಗಳ ಗ್ರಾಮದ ಸರ್ವೆ ನಂ. 211/1ರ 88.27 ಎಕ್ರೆ ಮತ್ತು ಸರ್ವೆ ನಂ. 211/16 30.60 ಎಕ್ರೆ ಜಮೀನನ್ನು ಮಾರಾಟ ಮಾಡಿದ್ದಾರೆ.
ಕರ್ನಾಟಕ ಅರಣ್ಯ ಕಾಯ್ದೆ 1963ರ (ಕಾಯ್ದೆ 1964ರ) ಕಲಂ 23 ರನ್ವಯ ಗೇಣಿಗೆ ನೀಡಲಾದ ಪ್ರದೇಶಗಳು ಮೀಸಲು ಅರಣ್ಯ ಪ್ರದೇಶವಾಗಿದ್ದು, ಕೊಡಗು ಜಿಲ್ಲೆಯಲ್ಲಿರುವ ಖಾಸಗಿ ರಬ್ಬರ್ ಕಂಪೆನಿಯ ಗೇಣಿ ಅವಧಿಯನ್ನು ಮೂಲ ಗೇಣಿ ದಿನಾಂಕದಿಂದ 99 ವರ್ಷಗಳ ಅವಧಿಗೆ ಮಿತಿಗೊಳಿಸುವದು ಹಾಗೂ ಈ ಭೂಮಿಗಳನ್ನು ಗುತ್ತಿಗೆ ಅವಧಿ ಪೂರ್ಣವಾದ ತಕ್ಷಣ ಮೀಸಲು ಅರಣ್ಯವೆಂದು ಪರಿಗಣಿಸಲು ಸರ್ಕಾರ ಹಿಂದೆಯೇ ಆದೇಶಿಸಿದೆ. ಅದರಂತೆ ಗೇಣಿ ಅವಧಿಯು 2012ಕ್ಕೆ ಮುಕ್ತಾಯಗೊಂಡಿದೆ.
ಅದರಂತೆ ಕರ್ನಾಟಕ ಸರ್ಕಾರವು ರಬ್ಬರ್ ಕೃಷಿಗೆ ನೀಡಿರುವ ಜಮೀನುಗಳನ್ನು ಡೀಮ್ಡ್ ಫಾರೆಸ್ಟ್ ಮಾಡಿಲ್ಲವಾಗಿ ಜಮೀನುಗಳನ್ನು ಮೂಲ ಗುತ್ತಿಗೆದಾರರು ಗುತ್ತಿಗೆಯ ಹಕ್ಕನ್ನು ಕಂಪನಿಗಳಿಗೆ ನೋಂದಣಿ ಮೂಲಕ ವರ್ಗಾಯಿಸಿದ್ದು, ಗುತ್ತಿಗೆ ಕಂಪನಿಗಳಾಗಿರುತ್ತವೆಯೇ ಹೊರತು ಅವರಿಗೆ ಮಾಲೀಕತ್ವದ ಹಕ್ಕು ದೊರೆಯುವದಿಲ್ಲ. ಅದರಂತೆ ಕೊಡಗು ಜಿಲ್ಲೆಯಲ್ಲಿ ಗೇಣಿಗೆ ನೀಡಿದ ಅರಣ್ಯ ಜಮೀನುಗಳನ್ನು ಪಹಣಿಯಲ್ಲಿ ‘ರೆಡೀಮ್ಡ್ ಸಾಗು’ ಎಂದಿರುವದನ್ನು ಅರಣ್ಯ ಹೆಸರಿಗೆ ದಾಖಲಿಸುವಂತೆ ಸರ್ಕಾರ ನಿರ್ದೇಶಿಸಿದೆ.
ಸರ್ವೆ ನಂ. 211/1ರ 88.27 ಎಕ್ರೆ ಮತ್ತು 211/16ರ 30.60 ಎಕ್ರೆ ಒಟ್ಟು 118.87. ಎಕ್ರೆ ಜಮೀನನ್ನು ಗೇಣಿ ಅವಧಿ ಮುಗಿದ ನಂತರ ಅರಣ್ಯ ಇಲಾಖೆಗೆ ವರ್ಗಾಯಿಸದೆ ಖಾಸಗಿಯವರ ಹೆಸರಿಗೆ ಖಾತೆ ವರ್ಗಾಯಿಸಲಾಗಿದೆ. ಉಳಿದಂತೆ ಪೋರ್ಟ್ಲ್ಯಾಂಡ್ ರಬ್ಬರ್ ಕಂಪನಿ ಹೆಸರಿನಲ್ಲಿರುವ ಜಮೀನನ್ನು ಸರ್ಕಾರದ ಹೆಸರಿನಲ್ಲಿ ಪಹಣಿ ಕಲಂ 9ರಲ್ಲಿ ದಾಖಲಿಸಿ ಕಲಂ 6ರಲ್ಲಿ ಮೀಸಲು ಅರಣ್ಯ ಎಂದು ದಾಖಲಿಸಲಾಗಿದೆ. ಸರ್ವೆ ನಂ. 211/16ರ 30.60 ಎಕ್ರೆ ಮತ್ತು 211/1ರ 88.27 ಎಕ್ರೆ ನಂತರ ಮರುವಿಕ್ರಯವಾಗಿದ್ದು, ಲೀಸ್ ಅವಧಿ ಮುಗಿಯುವ ಮೊದಲೇ ಜೆ ಸ್ಲಿಫ್ನಂತೆ ವಿವಿಧ ಕ್ರಯದಾರರ ಹೆಸರಿಗೆ ತುಂಡು ತುಂಡಾಗಿ ದುರಸ್ತಿಗೊಳಪಟ್ಟು ಖಾತೆ ವರ್ಗಾವಣೆಯಾಗಿರುತ್ತದೆ. ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಎ.ಕೆ. ಗೋಪಾಲಕೃಷ್ಣ ಮತ್ತಿತರ 11 ಜನರು ಇದರ ವಿರುದ್ಧ ಅರ್ಜಿ ಸಲ್ಲಿಸಿದ್ದರು.
ನಿಯಮ ಪಾಲಿಸದಿರುವದು ಅರಿವಿಗೆ
ಗುತ್ತಿಗೆ ನೀಡಿದ ಜಮೀನು ಅರಣ್ಯ ಆಗಿದ್ದು, ಕ್ರಯಪತ್ರದಂತೆ ಖಾತೆ ವರ್ಗಾವಣೆ ಸಂದರ್ಭದಲ್ಲಿ ನಿಯಮಗಳನ್ನು ಅನುಸರಿಸದೆ ಖಾತೆ ವರ್ಗಾವಣೆ ಮಾಡಿರುವದು ಹಾಗೂ ತಹಶೀಲ್ದಾರರು ಪ್ರಕರಣದ ಕುರಿತು ಕ್ರಮಬದ್ಧವಾಗಿ ವಿಚಾರಣೆ ನಡೆಸದಿರುವದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಈ ಪ್ರಕರಣದಲ್ಲಿ ತಪ್ಪೆಸಗಿರುವ ಅಧಿಕಾರಿಗಳ ವಿರುದ್ಧ ಕ್ರಮವಹಿಸುವದು ಅವಶ್ಯವಾಗಿರುತ್ತದೆ ಎಂಬ ಅಭಿಪ್ರಾಯ ಜಿಲ್ಲಾಧಿಕಾರಿ ಸಭೆಯಲ್ಲಿ ವ್ಯಕ್ತವಾಯಿತು.
ಏನೇನು ಕ್ರಮ
ತಹಶೀಲ್ದಾರರ ಆದೇಶದ ವಿರುದ್ಧ ಹಾಗೂ ಖಾಸಗಿ ವ್ಯಕ್ತಿಗಳಿಗೆ ಮ್ಯೂಟೇಷನ್ ಮಾಡಿ ಖಾತೆ ವರ್ಗಾಯಿಸಿರುವ ಕ್ರಮದÀ ವಿರುದ್ಧ ಅರಣ್ಯ ಇಲಾಖೆಯವರು ಮೇಲ್ಮನವಿ ಸಲ್ಲಿಸಿದ್ದರೆ ಕೂಡಲೇ ಈ ಕುರಿತು ವಿಚಾರಣೆ ಕೈಗೊಳ್ಳುವದು, ಮೇಲ್ಮನವಿ ಸಲ್ಲಿಸದಿದ್ದಲ್ಲಿ, ಸ್ವಯಂ ಮೇಲ್ಮನವಿ ದಾಖಲಿಸಿಕೊಂಡು ಮುಂದಿನ ಕ್ರಮವಹಿಸುವದು, ಉಪವಿಭಾಗಾಧಿಕಾರಿ, ಮಡಿಕೇರಿ ಉಪವಿಭಾಗ, ಮಡಿಕೇರಿ ಇವರು ನಿಯಮಾನುಸಾರ ಕ್ರಮವಹಿಸಿ ವಿಚಾರಣೆ ಕೈಗೊಂಡು ಗುತ್ತಿಗೆ ಜಮೀನುಗಳನ್ನು ಖಾಸಗಿ ವ್ಯಕ್ತಿಗಳಿಗೆ ಖಾತೆ ವರ್ಗಾವಣೆ ಮಾಡುವಲ್ಲಿ ನಿಯಮ ಉಲ್ಲಂಘನೆಯಾಗಿದಲ್ಲಿ ಮ್ಯೂಟೇಷನ್ ರದ್ದುಗೊಳಿಸಲು ಕ್ರಮವಹಿಸುವದು ಹಾಗೂ ಪ್ರಕರಣದ ವಿಲೇವಾರಿಯಾಗುವವರೆಗೆ ಸದರಿ ಸರ್ವೆ ನಂಬರ್ಗಳಲ್ಲಿ ಯಾವದೇ ರೀತಿಯ ವಹಿವಾಟು ನಡೆಯದಂತೆ ತಡೆಯಾಜ್ಞೆ ನೀಡುವದು.
ಗುತ್ತಿಗೆ ನೀಡಲಾದ ಅರಣ್ಯ ಜಮೀನುಗಳನ್ನು ಈಗಾಗಲೇ ಖಾಸಗಿ ವ್ಯಕ್ತಿಗಳಿಗೆ ನೋಂದಣಿ ಮಾಡಿಸಿ ಖಾತೆ ವರ್ಗಾವಣೆಯಾಗಿರುವ ಪ್ರಕರಣಗಳಲ್ಲಿ ಪುನಃ ಮಾರಾಟ ಪ್ರಕ್ರಿಯೆಯಾಗುತ್ತಿರುವದಾಗಿ ತಹಶೀಲ್ದಾರರು ತಿಳಿಸಿದ್ದಾರೆ. ಗುತ್ತಿಗೆ ನೀಡಿದ ಜಮೀನುಗಳನ್ನು ಒಮ್ಮೆ ಕ್ರಯಕ್ಕೆ ಒಳಪಟ್ಟು ಖಾತೆ ವರ್ಗಾವಣೆಯಾದ ಪ್ರಕರಣಗಳಲ್ಲಿ ಮರು ವಿಕ್ರಯ ನೋಂದಣಿಗೆ ಬಂದಲ್ಲಿ ಹಿಂದಿನ ದಾಖಲೆಗಳನ್ನು ಪರಿಶೀಲಿಸಿ ನಿಯಮ ಉಲ್ಲಂಘನೆಯಾಗಿದೆಯೇ, ಇಲ್ಲವೆ ಎಂಬವದನ್ನು ಮನವರಿಕೆ ಮಾಡಿಕೊಂಡು ಕ್ರಮವಹಿಸಲು ಹಾಗೂ ಇಂತಹ ಪ್ರಕರಣಗಳಲ್ಲಿ ನೋಂದಣಿಗೆ ಅವಕಾಶ ನೀಡಬಾರದಾಗಿ ಹಾಜರಿದ್ದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಯಿತು ಹಾಗೂ ಜಿಲ್ಲಾ ನೋಂದಣಾಧಿಕಾರಿಗಳಿಗೆ ಈ ಕುರಿತು ಪತ್ರ ಬರೆಯಲು ಸೂಚಿಸಲಾಯಿತು.
ಈ ಪ್ರಕರಣದಲ್ಲಿ ತಹಶೀಲ್ದಾರರು, ವೀರಾಜಪೇಟೆ ತಾಲೂಕು ಇವರು ಕ್ರಮಬದ್ಧವಾಗಿ ವಿಚಾರಣೆ ನಡೆಸಿರುವದಿಲ್ಲವೆಂದು ವರದಿ ಇರುವದರಿಂದ ತಹಶೀಲ್ದಾರರ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ತೀರ್ಮಾನಿಸಲಾಯಿತು.
ಖಾತೆ ವರ್ಗಾವಣೆ ಮಾಡಿದ ಸಂದರ್ಭದಲ್ಲಿ ಕ್ರಮವಹಿಸಿದ ಗ್ರಾಮ ಲೆಕ್ಕಿಗರು ಹಾಗೂ ಕಂದಾಯ ಪರಿವೀಕ್ಷಕರ ಹಾಗೂ ಸಂಬಂಧಿಸಿದ ಉಪ ನೋಂದಣಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವದು. ಪ್ರಾರಂಭಿಕ ಹಂತದಲ್ಲಿ ನಿಯಮ ಉಲ್ಲಂಘಿಸಿ ಖಾತೆ ವರ್ಗಾವಣೆ ಮಾಡಿದ ಬಗ್ಗೆ ಸದರಿಯವರ ವಿರುದ್ಧ ಎಫ್ಐಆರ್ ದಾಖಲಿಸಲು ತೀರ್ಮಾನಿಸಲಾಯಿತು.
ಲೀಸ್ ಅವಧಿ ಮುಗಿಯುವ ಮೊದಲೇ ವಿವಿಧ ಕ್ರಯದಾರರ ಹೆಸರಿಗೆ ತುಂಡು ತುಂಡಾಗಿ ದುರಸ್ತಿಗೊಳಪಟ್ಟು ಖಾತೆ ವರ್ಗಾವಣೆಯಾಗಿದ್ದು, ನಿಯಮ ಉಲ್ಲಂಘನೆ ಮಾಡಿ ಖಾತೆ ವರ್ಗಾವಣೆ ಹಾಗೂ ಪೋಡಿ ಪ್ರಕ್ರಿಯೆ ನಡೆಸಿದ ಗ್ರಾಮಲೆಕ್ಕಿಗರು, ಕಂದಾಯ ಪರಿವೀಕ್ಷಕರು ಹಾಗೂ ಸರ್ವೆ ಇಲಾಖೆಯ ಸಿಬ್ಬಂದಿಗಳಿಗೆ ನಿಯಮಾನುಸಾರ ನೋಟೀಸ್ ನೀಡಿ ತಪ್ಪಿತಸ್ಥರ ವಿರುದ್ಧ ಶಿಸ್ತಿನ ಕ್ರಮಕ್ಕೆ ವರದಿ ಸಲ್ಲಿಸಲು ಅಂದಿನ ಸಭೆಯಲ್ಲಿ ಸೂಚನೆ ನೀಡಲಾಯಿತು.