ಕೊಡ್ಲಿಪೇಟೆ, ಜು. 12: ಆಗಸ್ಟ್ ತಿಂಗಳಿನಲ್ಲಿ ಜಿಲ್ಲಾ ಮಟ್ಟದ ಶರಣ ಸಂಗಮ ಎಂಬ ವಿಶೇಷ ಕಾರ್ಯಕ್ರಮವನ್ನು ಕೊಡ್ಲಿಪೇಟೆ ಸಮೀಪದ ಬೆಸೂರು ಗ್ರಾಮದಲ್ಲಿ ನಡೆಸಲು ತೀರ್ಮಾನಿಸಿದ್ದು ಇದಕ್ಕೆ ಸಂಬಂಧಪಟ್ಟಂತೆ ಸಿದ್ಧತೆಗಳ ಕುರಿತಾಗಿ ನಿಲುವಾಗಿಲು ಬಾಲತ್ರಿಪುರ ಸುಂದರಿ ದೇವಾಲಯದ ಸಭಾಂಗಣದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಹಾಗೂ ಬೆಸೂರು ಗ್ರಾಮಸ್ಥರು ಮತ್ತು ನಿಲುವಾಗಿಲು ದೇವಾಲಯ ಆಡಳಿತ ಮಂಡಳಿ ಹಾಗೂ ಸುತ್ತಮುತ್ತಲಿನ ಮಠಾಧೀಶರುಗಳ ಸಮ್ಮುಖದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಕಿರಿಕೊಡ್ಲಿಮಠದ ಸದಾಶೀವ ಸ್ವಾಮಿಜಿ ಮಾತನಾಡಿ ಈ ಶರಣ ಸಂಗಮ ಕಾರ್ಯಕ್ರಮದಲ್ಲಿ ಎಲ್ಲಾ ಜಾತಿ ಧರ್ಮದವರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು ಬೆಳಗ್ಗೆ ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳಿದ್ದರೆ ಕಾರ್ಯಕ್ರಮಕ್ಕೆ ಮೆರಗು ಬರುತ್ತದೆ. ಶರಣರ ನಾಟಕ ಪ್ರದರ್ಶನ ಏರ್ಪಡಿಸುವ ಬಗ್ಗೆ ಚಿಂತಿಸಿದರೆ ಒಳ್ಳೆಯದು ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಮಹೇಶ್ ಮಾತನಾಡಿ ಕಾರ್ಯ ಕ್ರಮದಲ್ಲಿ ಉಪನ್ಯಾಸ ಕಾರ್ಯಕ್ರಮ ಹಾಗೂ ವಚನ ಗಾಯನ ಕಾರ್ಯಕ್ರಮ ಏರ್ಪಡಿಸುವ ಮೂಲಕ ಶರಣರ ಬಗ್ಗೆ ಹೆಚ್ಚು ಮಾಹಿತಿ ತಿಳಿಸುವ ಬಗ್ಗೆ ಎಲ್ಲರೂ ಚಿಂತಿಸೋಣ ಎಂದರು. ಬೆಸೂರು ಸುತ್ತಮುತ್ತಲಿನ ಎಲ್ಲಾ ಹಳ್ಳಿಗಳ ಎಲ್ಲರನ್ನು ಸೇರಿಸಿಕೊಂಡು ವಿವಿಧ ಸಮಿತಿಗಳನ್ನು ರಚಿಸಬೇಕಾ ಗಿದೆ ಎಂದು ಸಲಹೆ ನೀಡಿದರು.

ಈ ಸಂದರ್ಭ ಕಲ್ಲು ಮಠದ ಮಹಾಂತ ಸ್ವಾಮೀಜಿ, ಮುದ್ದಿನಕಟ್ಟೆ ಮಠದ ಅಭಿನವ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಶರಣ ಸಾಹಿತ್ಯ ಪರಿಷತ್ತಿನ ಖಜಾಂಚಿ ಡಿ.ಬಿ. ಸೋಮಪ್ಪ, ಬೆಸೂರು ಗ್ರಾ.ಪಂ. ಸದಸ್ಯ ವಸಂತ್ ಕುಮಾರ್, ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಶಿವಪ್ಪ, ಮಹ ದೇವಪ್ಪ, ಉದಯ್, ರಾಜಶೇಖರ್, ರೇಣುಕ, ಬಾಲತ್ರಿಪುರ ಸುಂದರಿ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಪ್ರಸನ್ನ, ಶನಿವಾರಸಂತೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಎಂ. ಪುಟ್ಟಸ್ವಾಮಿ, ಶಿವಕುಮಾರ್ ಮುಂತಾದವರಿದ್ದರು.