ಮಡಿಕೇರಿ, ಜು. 12: ಕೊಡಗು ಜಿಲ್ಲೆಯ ಕೇರಳ ಗಡಿ ಪ್ರದೇಶದಲ್ಲಿ ಮಳೆಗಾಗಿ ಮೋಡ ಬಿತ್ತನೆ ಶಂಕೆ ವ್ಯಕ್ತಪಡಿಸಿರುವ ಗ್ರಾಮಸ್ಥರು; ಪರಿಣಾಮವಾಗಿ ಕಾಫಿ ಫಸಲು ಭಾರೀ ಪ್ರಮಾಣದಲ್ಲಿ ಒಂದು ವಾರದಿಂದ ಉದುರುವಂತಾಗಿದೆ ಎಂದು ಆತಂಕ ತೋಡಿ ಕೊಂಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಕೊಡಗಿನಲ್ಲಿ ಮಳೆಯ ಪ್ರಮಾಣ ಇಳಿಮುಖವಿದ್ದು, ಕಾಫಿ ಉತ್ತಮ ಫಸಲು ಬಿಡುತ್ತಿದ್ದುದಾಗಿಯೂ, ಬಿರುನಾಣಿ, ಪರಕಟಗೇರಿ ಸುತ್ತಮುತ್ತಲಿನ ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.ಈ ನಡುವೆ ಕಳೆದ ಒಂದು ವಾರದಿಂದ ಗಡಿ ಪ್ರದೇಶಗಳಲ್ಲಿ ಆಗೊಮ್ಮೆ, ಈಗೊಮ್ಮೆ ವಿಮಾನ ಅಥವಾ ಹೆಲಿಕಾಪ್ಟರ್ ಹಾರಾಟದ ಸದ್ದು ಕೇಳಿಬರುತ್ತಿದ್ದು, ಅನಂತರದಲ್ಲಿ ಮಳೆಯಾಗುತ್ತಿರುವದು ‘ಕೃತಕ’ ಎಂಬ ಶಂಕೆ ಮೂಡಿಸಿದೆ ಎಂದು ಟೀಕಿಸಿದ್ದಾರೆ.ಈ ಕುರಿತು ಅಲ್ಲಿನ ನಿವೃತ್ತ ಸೈನಿಕ ಹಾಗೂ ಬೆಳೆಗಾರ ಕೆ.ಎಸ್. ಅಪ್ಪಯ್ಯ ಹಾಗೂ ಇತರರು ‘ಶಕ್ತಿ’ಯೊಂದಿಗೆ ಹೇಳಿಕೆ ನೀಡುತ್ತಾ; ಒಂದು ವಾರದ ಹಿಂದೆ ಯಾವದೇ ಸಮಸ್ಯೆ ಇಲ್ಲದಿದ್ದ ಕಾಫಿ ತೋಟಗಳಲ್ಲಿ ಹಠಾತ್ ಉದುರುವಿಕೆ ಆತಂಕ ಮೂಡಿಸಿದೆ ಎಂದು ವಿವರಿಸಿದ್ದಾರೆ.ಪ್ರಸಕ್ತ ವರ್ಷ ಈ ತನಕವೂ ಅಷ್ಟಾಗಿ ಜಿಲ್ಲೆಯ ಮಟ್ಟಿಗೆ ಮಳೆಯಾಗದಿದ್ದರೂ, ಬಿರುನಾಣಿ, ಪರಕಟಗೇರಿ ಸುತ್ತಮುತ್ತ ಮಾತ್ರ ಈಚಿನ ಮಾಹಿತಿಯಂತೆ 70 ಇಂಚು ಮಳೆ ದಾಖಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಮೇ ಅಂತ್ಯದವರೆಗೆ ಕೇವಲ 5 ಇಂಚು ಮಳೆಯಾಗಿದ್ದು, ಜೂನ್ ಕೊನೆಯಲ್ಲಿ ಒಟ್ಟು 28 ಇಂಚು ಹಾಗೂ ಜುಲೈ ಮಾಸದ 11 ದಿನಗಳಲ್ಲಿ ಈ ಭಾಗಕ್ಕೆ 37 ಇಂಚು ಮಳೆ ದಾಖಲಾಗಿದೆ ಎಂದು ಬೊಟ್ಟು ಮಾಡಿದ್ದಾರೆ.

ಕಾಫಿ ತೋಟಗಳಲ್ಲಿ ಎಲೆಗಳು ಉದುರಿ ಸುಟ್ಟುಹೋದ ರೀತಿ ಗೋಚರಿಸಿದರೆ, ಈಗಷ್ಟೇ ಬಿಟ್ಟಿರುವ ಕಾಫಿ ಕಾಯಿಗಳು ತೀವ್ರ ಪ್ರಮಾಣದಲ್ಲಿ ಉದುರತೊಡಗಿರುವದು ಆತಂಕ ಮೂಡಿಸಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಕಳವಳ ಹೊರಗೆಡವಿದ್ದಾರೆ. ಅಲ್ಲದೆ ಕೊಡಗಿನಲ್ಲಿ ಇಂತಹ ಅನಾಹುತಗಳನ್ನು ಸರಕಾರ ಅರಿತು ಮೋಡ ಬಿತ್ತನೆಯೊಂದಿಗೆ ಕೃತಕ ಮಳೆಗೆ ಆಸ್ಪದ ನೀಡದಂತೆ ಒತ್ತಾಯಿಸಿದ್ದಾರೆ. ಅಲ್ಲದೆ ಭವಿಷ್ಯದಲ್ಲಿ ಕಾಳುಮೆಣಸು ಸಹಿತ ಇತರ ಕೃಷಿ ಮೇಲೂ ವ್ಯತಿರಿಕ್ತ ಪರಿಣಾಮದ ಆತಂಕ ತೋಡಿಕೊಂಡಿದ್ದಾರೆ.