ಕೂಡಿಗೆ, ಜು. 12: ರಾಜ್ಯ ಸರ್ಕಾರ ರೈತರ ಕೃಷಿ ಸಾಲ ಮನ್ನಾ ಮಾಡಿದ್ದೇವೆ ಎಂದು ರೈತರ ಸಾಲ ಮನ್ನಾದ ಪಟ್ಟಿಯನ್ನು ಆಯಾ ವ್ಯಾಪ್ತಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕೇಂದ್ರದ ಕಚೇರಿಗಳಿಗೆ ನೀಡಿದೆ. ಕಚೇರಿಯವರು ಸೂಚನಾ ಫಲಕಗಳಲ್ಲಿ ಸಾಲ ಮನ್ನಾವಾದ ರೈತರ ಹೆಸರು ಮತ್ತು ಮನ್ನವಾದ ಸಾಲದ ಮೊತ್ತವನ್ನು ನಮೂದಿಸಿದ್ದಾರೆ.

ಸಾಲ ಮನ್ನಾ ಯೋಜನೆಯು ರಾಜ್ಯದಲ್ಲಿ ಸಮರ್ಪಕವಾಗಿ ರೈತನಿಗೆ ದೊರಕಬೇಕೆಂಬ ಚಿಂತನೆಯಲ್ಲಿ ಜಿಲ್ಲಾ ಸಹಕಾರ ಬ್ಯಾಂಕಿನ ಸಹಕಾರದೊಂದಿಗೆ ಪ್ರತಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ರೈತನ ದಾಖಲಾತಿ ಮತ್ತು ಸಹಕಾರ ಸಂಘದ ಸದಸ್ಯತ್ವದ ಅನ್ವಯ ನೀಡಲಾಗಿದೆ. ಸಾಲ ಮನ್ನಾದ ಹಣವನ್ನು ಪಟ್ಟಿಯಲ್ಲಿ ಬಿಡುಗಡೆಗೊಂಡ ಅನ್ವಯ ಆಯಾ ರೈತರು ಜಿಲ್ಲಾ ಕೇಂದ್ರ ಬ್ಯಾಂಕಿನ ಉಪ ಕಚೇರಿಯ ಎಟಿಎಂಗಳಲ್ಲಿ ಪಡೆಯುವಂತೆ ಸೂಚಿಸಲಾಗಿದೆ. ಆದರೆ ಕುಶಾಲನಗರ ಹೋಬಳಿ ವ್ಯಾಪ್ತಿಯ ಕೂಡಿಗೆ, ತೊರೆನೂರು, ಹೆಬ್ಬಾಲೆ, ಶಿರಂಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸಾಲ ಮನ್ನಾದ ಪಟ್ಟಿಗಳನ್ನು ನಮೂದಿಸಲಾಗಿದೆ.

ಸಾಲ ಮನ್ನಾದ ಮೊದಲ ಪಟ್ಟಿಯು ಬಿಡುಗಡೆಗೊಂಡು ಒಂದು ತಿಂಗಳು ಕಳೆದಿದೆ. ಶೇ. 60 ರಷ್ಟು ರೈತರಿಗೆ ಸಾಲ ಮನ್ನಾದ ಹಣ ಬಂದಿದ್ದು, ಇನ್ನುಳಿದ ರೈತರಿಗೆ ಹಣ ಬಂದಿರುವದಿಲ್ಲ. ಆದರೆ ಈಗಾಗಲೇ 2, 3 ಮತ್ತು 4ನೇ ಪಟ್ಟಿಯು ಬಿಡುಗಡೆಗೊಂಡಿದ್ದು, ಆ ಪಟ್ಟಿಯಲ್ಲಿರುವ ಕೆಲವು ಮಂದಿಗೆ ಸಾಲ ಮನ್ನಾ ಹಣ ಬಿಡುಗಡೆಗೊಂಡಿದೆ. ಆದರೆ ಮೊದಲ ಮತ್ತು ಎರಡನೇ ಪಟ್ಟಿಯಲ್ಲಿ ರೈತರ ಹೆಸರಿದ್ದರೂ ಅಂತಹವರಿಗೆ ಸಾಲ ಮನ್ನಾದ ಹಣ ಇನ್ನು ಬಂದಿಲ್ಲದ ಬಗ್ಗೆ ರೈತರು ದಿನಂಪ್ರತಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಉಪ ಕಚೇರಿಗೆ ಅಲೆಯುತ್ತಾರೆ. ಅಲ್ಲದೆ, ಸಾಲ ಮನ್ನಾ ಯೋಜನೆಯಿಂದ ಅಳಿದುಳಿದ ವ್ಯವಸಾಯಕ್ಕಾದರೂ ಹಣ ತೊಡಗಿಸಿಕೊಳ್ಳಲು ಆಯಾಯಾ ಪ್ರಾಥಮಿಕ ಆರೋಗ್ಯ ಕೇಂದ್ರಗಳತ್ತ ರೈತರು ಪರದಾಡುವಂತಾಗಿದೆ. ಜಿಲ್ಲೆಗೆ ಈಗಾಗಲೇ ಸಾಲ ಮನ್ನಾದ ಹಣವು ಬಂದಿದೆ. ಸಹಕಾರ ಸಂಘಗಳ ಮೂಲಕ ಸದುಪಯೋಗಪಡಿಸಿಕೊಳ್ಳಿ ಎಂದು ಹೇಳುವ ಜಿಲ್ಲೆಯ ಅಧಿಕಾರಿಗಳು ಇನ್ನು ಬಿಡಗಡೆಯಾಗದ ಸಾಲ ಮನ್ನಾದ ಹಣದ ಬಗ್ಗೆ ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದು ಶಿರಂಗಾಲ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ್, ತೊರೆನೂರು ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಕೃಷ್ಣೇಗೌಡ ಸೇರಿದಂತೆ ನೂರಾರು ರೈತರು ಆಗ್ರಹಿಸಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ.