ಮಡಿಕೇರಿ, ಸೆ. 16: ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವದಲ್ಲಿ ಪ್ರಮುಖ ಪಾತ್ರ ವಹಿಸುವ ನಗರದ ನಾಲ್ಕು ಶಕ್ತಿ ದೇವತೆಗÀಳ ಕರಗೋತ್ಸವಕ್ಕೆ ಈ ಬಾರಿ ಹೆಚ್ಚಿನ ಅನುದಾನ ನೀಡಬೇಕೆಂದು ನಾಲ್ಕು ದೇವಾಲಯಗಳ ಕರಗ ಸಮಿತಿಗಳು ಮನವಿ ಮಾಡಿವೆ.

ಶ್ರೀಕಂಚಿ ಕಾಮಾಕ್ಷಿಯಮ್ಮ ದೇವಾಲಯ ಸಮಿತಿಯ ನೇತೃತ್ವದಲ್ಲಿ ನಾಲ್ಕು ದೇವಾಲಯ ಸಮಿತಿಗಳ ನಿಯೋಗ ದಸರಾ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿತು.

ಕುಂದುರುಮೊಟ್ಟೆ ಶ್ರೀಚೌಟಿ ಮಾರಿಯಮ್ಮ, ಶ್ರೀಕಂಚಿ ಕಾಮಾಕ್ಷಿಯಮ್ಮ, ಶ್ರೀದಂಡಿನ ಮಾರಿಯಮ್ಮ ಹಾಗೂ ಶ್ರೀಕೋಟೆ ಮಾರಿಯಮ್ಮ ದೇವಾಲಯಗಳ ಮೂಲಕ ಸಾಂಪ್ರದಾಯಿಕ ನೆಲೆಗಟ್ಟಿನ ಕರಗೋತ್ಸವವು ನವರಾತ್ರಿಯ ಒಂಭತ್ತು ದಿನಗಳ ಕಾಲ ನಡೆಯಲಿದ್ದು, ಪ್ರತಿ ಕರಗಕ್ಕೆ ಲಕ್ಷಾಂತರ ರೂ. ವೆಚ್ಚವಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಸಾರ್ವಜನಿಕ ವಂತಿಗೆಯೂ ಸಿಗದೆ, ಭಕ್ತಾದಿಗಳಿಂದ ನಿರೀಕ್ಷಿತ ಆರ್ಥಿಕ ಸಹಕಾರವು ದೊರೆಯುತ್ತಿಲ್ಲ. ಕಳೆದ ಕೆಲವು ವರ್ಷಗಳಿಂದ ಕರಗೋತ್ಸವಕ್ಕೆ ಅಲ್ಪ ಮೊತ್ತದ ಅನುದಾನವನ್ನು ನೀಡುತ್ತಾ ಬರಲಾಗುತ್ತಿದ್ದು, ಖರ್ಚು, ವೆಚ್ಚವನ್ನು ಸರಿದೂಗಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ದಶಮಂಟಪಗಳಿಗೆ ನೀಡುವಷ್ಟೇ ಮೊತ್ತದ ಅನುದಾನ ಕರಗೋತ್ಸವಕ್ಕೂ ನೀಡಬೇಕೆಂದು ಪ್ರಮುಖರು ಮನವಿ ಮಾಡಿದರು.

ಇದೇ ಸಂದರ್ಭ ಮಡಿಕೇರಿ ದಸರಾ ಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ದಶಮಂಟಪ ಸಮಿತಿ ಅಧ್ಯಕ್ಷರಿಗೆ ಕರಗ ಸಮಿತಿಗಳು ಮನವಿ ಸಲ್ಲಿಸಿದವು. ನಾಲ್ಕು ಶಕ್ತಿ ದೇವತೆಗಳ ದೇವಾಲಯ ಸಮಿತಿ ಹಾಗೂ ಕರಗ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಪ್ರಧಾನ ಅರ್ಚಕರು ಹಾಜರಿದ್ದರು.