ಕುಶಾಲನಗರ, ಸೆ. 17: ಮುಳ್ಳುಸೋಗೆ ಗ್ರಾ.ಪಂ. ವ್ಯಾಪ್ತಿಯ ಗೊಂದಿಬಸವನಹಳ್ಳಿ ಗ್ರಾಮದಲ್ಲಿರುವ ಬೋವಿ ಜನಾಂಗದವರಿಗೆ ಕಲ್ಲು ಗಣಿಗಾರಿಕೆ ನಡೆಸಲು ಜಿಲ್ಲಾಡಳಿತ ಅನುಮತಿ ಕಲ್ಪಿಸಬೇಕೆಂದು ಗ್ರಾಪಂ ಸದಸ್ಯ ಡಿ.ಎಸ್. ಹರೀಶ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾರಂಗಿ ಜಲಾಶಯ ನಿರ್ಮಾಣ ಸಂದರ್ಭ ಕಲ್ಲು ಕೆಲಸಕ್ಕೆ ಆಗಮಿಸಿದ ಕುಟುಂಬಗಳು ನಂತರ ಶಾಶ್ವತವಾಗಿ ಗೊಂದಿಬಸವನಹಳ್ಳಿಯಲ್ಲಿ ನೆಲೆ ಕಂಡುಕೊಂಡಿದ್ದಾರೆ. ಕಲ್ಲು ಗಣಿಗಾರಿಕೆಯನ್ನು ಮೂಲ ಕಸುಬಾಗಿಸಿಕೊಂಡಿರುವ 200 ಬೋವಿ ಜನಾಂಗ ಕುಟುಂಬಗಳು 60 ರ ದಶಕದಿಂದ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಕಳೆದ ಕೆಲವು ವರ್ಷಗಳಿಂದ ಗಣಿಗಾರಿಕೆ ನಿಷೇಧಿಸಲಾಗಿದೆ. ಇದರಿಂದಾಗಿ ಬೇರೆ ಕಸುಬು ಗೊತ್ತಿಲ್ಲದ ಈ ಕುಟುಂಬಗಳು ಬೀದಿಗೆ ಬಂದಿವೆ. ಕೂಡಲೇ ಈ ಜನಾಂಗದವರಿಗೆ ತಾಲೂಕು ವ್ಯಾಪ್ತಿಯಲ್ಲಿ ಸೂಕ್ತ ಪ್ರದೇಶ ಗುರುತಿಸಿ ಗಣಿಗಾರಿಕೆ ನಡೆಸಲು ಜಿಲ್ಲಾಡಳಿತ ನಿಯಮಾನುಸಾರ ಅನುಮತಿ ಕಲ್ಪಿಸಬೇಕಿದೆ ಎಂದು ಆಗ್ರಹಿಸಿದರು. ಈ ಸಂದರ್ಭ ಗ್ರಾಮದ ಯುವಕರಾದ ಚಂದ್ರು, ಗಣೇಶ್, ರವಿ, ರಾಜೇಂದ್ರ, ಸಂತೋಷ್ ಇದ್ದರು.