ಸೋಮವಾರಪೇಟೆ,ಸೆ.16: ಬೆಂಗಳೂರಿನಿಂದ ಸುಬ್ರಮಣ್ಯಕ್ಕೆ ಆಗಮಿಸಿ, ಅಲ್ಲಿಂದ ಕುಮಾರಪರ್ವತ-ಪುಷ್ಪಗಿರಿಗೆ ಟ್ರಕ್ಕಿಂಗ್ ತೆರಳಿ ವಾಪಸ್ ಆಗುವ ಸಂದರ್ಭ ಯುವಕನೋರ್ವ ನಾಪತ್ತೆಯಾಗಿರುವ ಘಟನೆ ನಿನ್ನೆ ಜರುಗಿದ್ದು, ಇಂದೂ ಕೂಡ ಹುಡುಕಾಟ ಮುಂದುವರೆದಿದೆ.ಬೆಂಗಳೂರಿನಿಂದ ನಿನ್ನೆ ಬೆಳಿಗ್ಗೆ ಸುಬ್ರಮಣ್ಯಕ್ಕೆ ಆಗಮಿಸಿದ 12 ಮಂದಿ ಯುವಕರ ತಂಡ, ಸುಬ್ರಮಣ್ಯದಿಂದ ಕುಮಾರಪರ್ವತ ಏರಿ, ಸೋಮವಾರಪೇಟೆ ವ್ಯಾಪ್ತಿಯ ಪುಷ್ಪಗಿರಿ ಬೆಟ್ಟದ ತುದಿ ತಲುಪಿದ್ದು, ಸಂಜೆ 4.30ರ ಸುಮಾರಿಗೆ ಸುಬ್ರಮಣ್ಯ ಕಡೆಗೆ ವಾಪಸ್ ಇಳಿಯುವ ಸಂದರ್ಭ ತಂಡದಲ್ಲಿದ್ದ ಬೆಂಗಳೂರಿನ ಗಾಯತ್ರಿನಗರದ ನಿವಾಸಿ ಮೂರ್ತಿ ಮತ್ತು ವೀಣಾ ದಂಪತಿಯ ಪುತ್ರ ಎಂ. ಸಂತೋಷ್ ಎಂಬಾತ ನಾಪತ್ತೆಯಾಗಿದ್ದಾನೆ.ಪುಷ್ಪಗಿರಿಯಿಂದ ಒಂದೂವರೆ ಕಿ.ಮೀ. ಕೆಳಭಾಗಕ್ಕೆ ಇಳಿದು ಗಿರಿಗದ್ದೆ ಮೂಲಕ ಸುಬ್ರಮಣ್ಯಕ್ಕೆ ವಾಪಸ್ ಆಗುವ ಸಂದರ್ಭ ಸಂತೋಷ್ ನಾಪತ್ತೆಯಾಗಿದ್ದಾನೆ. ಗಿರಿಗದ್ದೆಯಲ್ಲಿರುವ ಭಟ್ಟರ ಮನೆಯಿಂದ ಮುಂದೆ ಸಾಗುವ ಸಂದರ್ಭ ತಂಡದಲ್ಲಿದ್ದ ಎಲ್ಲರೂ ಮುಂದೆ ತೆರಳಿದ್ದು, ಸಂತೋಷ್ ಮಾತ್ರ ತಂಡದಿಂದ ಹಿಂದೆ ಉಳಿದಿದ್ದ ಎನ್ನಲಾಗಿದೆ. (ಮೊದಲ ಪುಟದಿಂದ) ಗಿರಿಗದ್ದೆಯಲ್ಲಿರುವ ಭಟ್ಟರ ಮನೆಯಿಂದ ಮುಂದೆ ಸಾಗುವ ಸಂದರ್ಭ ತಂಡದಲ್ಲಿದ್ದ ಎಲ್ಲರೂ ಮುಂದೆ ತೆರಳಿದ್ದು, ಸಂತೋಷ್ ಮಾತ್ರ ತಂಡದಿಂದ ಹಿಂದೆ ಉಳಿದಿದ್ದ ಎನ್ನಲಾಗಿದೆ. ಗಿರಿಗದ್ದೆಯಲ್ಲಿ ‘ರಿಟರ್ನ್ ಚೆಕ್ಕಿಂಗ್’ ಆಗಿದ್ದು, ವಾಪಸ್ ಗಾರ್ಡ್ ಜತೆ ಕೆಳಕ್ಕೆ ಇಳಿದಿದ್ದಾರೆ. ಸುಬ್ರಮಣ್ಯದಿಂದ ಗಿರಿಗದ್ದೆಗೆ 6 ಕಿ.ಮೀ. ಅರಣ್ಯ ಸುಬ್ರಮಣ್ಯಕ್ಕೆ ಸೇರಿದ್ದು, ಈ ಸ್ಥಳದಲ್ಲಿಯೇ ಸಂತೋಷ್ ನಾಪತ್ತೆಯಾಗಿರುದಾಗಿ ಹೇಳಲಾಗಿದೆ.

ಸಂತೋಷ್ ನಾಪತ್ತೆಯಾಗಿರುವ ಬಗ್ಗೆ ಪುಷ್ಪಗಿರಿ ಅರಣ್ಯ ಸಿಬ್ಬಂದಿಗಳಿಗೆ ಸಂಜೆ 7 ಗಂಟೆಗೆ ಮಾಹಿತಿ ನೀಡಿದ್ದು, ತಡರಾತ್ರಿ 1 ಗಂಟೆಯವರೆಗೂ ಅರಣ್ಯದಲ್ಲಿ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಡಿ.ಆರ್.ಎಫ್.ಓ. ಶಶಿ ಸೇರಿದಂತೆ ಗಾರ್ಡ್‍ಗಳು ಇಂದು ಬೆಳಗ್ಗಿನಿಂದ ಸಂಜೆಯವರೆಗೂ ಅರಣ್ಯದಲ್ಲಿ ಹುಡುಕಾಟ ನಡೆಸಿದ್ದು, ಸಂತೊಷ್ ಬಗ್ಗೆ ಯಾವದೇ ಸುಳಿವು ಲಭಿಸಿಲ್ಲ. ತಾ.17ರಂದು(ಇಂದು)ಕೂಡ ಪುಷ್ಪಗಿರಿ ವನ್ಯಜೀವಿ ವಿಭಾಗದ ಸಿಬ್ಬಂದಿಗಳು ಹಾಗೂ ಸುಬ್ರಮಣ್ಯ ಅರಣ್ಯ ಇಲಾಖಾ ಸಿಬ್ಬಂದಿಗಳು ಅರಣ್ಯದಲ್ಲಿ ಶೋಧಕಾರ್ಯ ಕೈಗೊಳ್ಳಲಿರುವದಾಗಿ ಡಿಆರ್‍ಎಫ್‍ಓ ಶಶಿ ತಿಳಿಸಿದ್ದಾರೆ.

ಸುಬ್ರಮಣ್ಯದಿಂದ ಕುಮಾರಪರ್ವತಕ್ಕೆ ತೆರಳುವ 6 ಕಿ.ಮೀ. ಅರಣ್ಯ ಪ್ರದೇಶದಲ್ಲಿ ಯಾವದೇ ಭದ್ರತೆಯಿಲ್ಲ. ಇದರೊಂದಿಗೆ ಯಾವದೇ ನಿರ್ಬಂಧವೂ ಇಲ್ಲ. ಅಲ್ಲಿನ ಗಾರ್ಡ್‍ಗಳು ಟ್ರಕ್ಕಿಂಗ್‍ಗೆ ಬರುವವರ ಬಗ್ಗೆ ಹೆಚ್ಚಿನ ನಿಗಾವಹಿಸುತ್ತಿಲ್ಲ. ಅರಣ್ಯ ಪ್ರದೇಶದ ಅಪಾಯಕಾರಿ ಸ್ಥಿತಿಗಳನ್ನು ವಿವರಿಸಿ, ಎಚ್ಚರಿಸುವ ಕೆಲಸವನ್ನೂ ಮಾಡುತ್ತಿಲ್ಲ ಎಂದು ಸಾರ್ವಜನಿಕರ ಅಭಿಪ್ರಾಯ ವ್ಯಕ್ತವಾಗಿದೆ.