ಕುಶಾಲನಗರ, ಸೆ. 17: ಕುಶಾಲನಗರದ ನಾಡಪ್ರಭು ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸ್ಥಳೀಯ ಎಪಿಸಿಎಂಎಸ್ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಸಂಘದ ಕಾರ್ಯವ್ಯಾಪ್ತಿಯನ್ನು ತಾಲೂಕು ವ್ಯಾಪ್ತಿಗೆ ವಿಸ್ತ್ತರಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು. ಗ್ರಾಮೀಣ ಪ್ರದೇಶದ ಇಬ್ಬರು ಸದಸ್ಯರಿಗೆ ನಿರ್ದೇಶಕ ಸ್ಥಾನ ನೀಡುವ ಮೂಲಕ ಪ್ರಾತಿನಿಧ್ಯ ಕಲ್ಪಿಸಬೇಕು. ಇದಕ್ಕೆ ಸಹಕಾರ ಸಂಘಗಳ ನಿಯಮಗಳಲ್ಲಿಯೂ ಅವಕಾಶವಿದೆ ಎಂದು ಸದಸ್ಯ ವಿ.ಪಿ.ಶಶಿಧರ್ ಸಲಹೆ ನೀಡಿದರು.
ಸಂಘದ ಅಧ್ಯಕ್ಷ ರಂಗಸ್ವಾಮಿ ಮಾತನಾಡಿ, 2018-19ನೇ ಸಾಲಿನಲ್ಲಿ ಸಂಘ ರೂ. 9.12 ಕೋಟಿ ವಾಹಿವಾಟು ನಡೆಸಿದ್ದು, ರೂ. 9.76 ಲಕ್ಷ ನಿವ್ವಳ ಲಾಭಗಳಿಸಿ ಅಭಿವೃದ್ಧಿಯಲ್ಲಿ ಸಾಗುತ್ತಿದೆ. ಸದಸ್ಯರಿಗೆ ನೀಡಲಾಗುವ ಡಿವಿಡೆಂಡ್ ಅನ್ನು ಸಂಘಕ್ಕೆ ಸ್ವಂತ ಕಟ್ಟಡ ಹೊಂದುವ ಉದ್ದೇಶದಿಂದ ಕಟ್ಟಡ ನಿಧಿಗೆ ವರ್ಗಾಯಿಸಲು ಸದಸ್ಯರ ಅನುಮತಿ ಕೋರಿದರು. ವ್ಯಾಪಾರ ಅಭಿವೃದ್ಧಿ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಸದಸ್ಯರು ಮತ್ತು ಅವರ ಕುಟುಂಬ ವರ್ಗವನ್ನು ಸರ್ಕಾರಿ ಯಶಸ್ವಿನಿ ವಿಮೆ ಯೋಜನೆಗೆ ಅಳವಡಿಸ ಲಾಗುವದು ಎಂದು ಹೇಳಿದರು.
ನಾಡಪ್ರಭು ಪತ್ತಿನ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ಹೆಚ್.ಆರ್.ಪಿ. ಕಾಲೋನಿಯಲ್ಲಿ 2.5 ಸೆಂಟ್ ಜಾಗವನ್ನು ಉದಾರವಾಗಿ ನೀಡಿದ ದಾನಿ ನಾಗೇಶ್ ದಂಪತಿಗಳನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಸಂಘದ ಉಪಾಧ್ಯಕ್ಷ ಹೆಚ್.ಎನ್. ರಾಮಚಂದ್ರ, ನಿರ್ದೇಶಕರಾದ ಎಂ.ಕೆ. ದಿನೇಶ್, ಬಿ.ಎ. ನಾಗೇಗೌಡ, ಜಿ.ಬಿ. ಜಗದೀಶ್, ಸತೀಶ್ ಗೌಡ, ಎಂ.ಕೆ. ಮಂಜುನಾಥ್, ಎಂ.ಡಿ. ರಮೇಶ್, ಕಸ್ತೂರಿ ಮಹೇಶ್, ಕಾನೂನು ಸಲಹೆಗಾರ ನಂದಕುಮಾರ್, ಕಾರ್ಯನಿರ್ವಹಣಾಧಿಕಾರಿ ಕೆ.ಕೆ. ಸುನೀತಾ ಉಪಸ್ಥಿತರಿದ್ದರು.