*ಗೋಣಿಕೊಪ್ಪಲು, ಸೆ. 17: ದೇಶಕ್ಕಾಗಿ ಪಕ್ಷ ಎಂಬದನ್ನು ನೆನಪಿನಲ್ಲಿಟ್ಟು ಪಕ್ಷದ ಬಲವರ್ಧನೆಗೆ ಕಾರ್ಯಕರ್ತರು ಸಂಘಟಿತರಾಗ ಬೇಕು. ಬೂತ್ ಮಟ್ಟದಲ್ಲಿ ಪಕ್ಷಕ್ಕೆ ಹೆಚ್ಚಿನ ಸದಸ್ಯರನ್ನು ನೋಂದಾಯಿಸ ಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಭಾಜಪ ಕಾರ್ಯಕರ್ತರಿಗೆ ಕರೆ ನೀಡಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ವೀರಾಜಪೇಟೆ ತಾಲೂಕು ಬಿಜೆಪಿ ಮಂಡಳ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಕ್ಷ ಸಂಘಟಿತ ವಾಗಲು ಹೆಚ್ಚಿನ ಸದಸ್ಯರ ಸೇರ್ಪಡೆ ಅಗತ್ಯವಿದೆ. ದೇಶ ಕಟ್ಟಲು ಪ್ರತಿಯೊಬ್ಬ ಕಾರ್ಯಕರ್ತನು ಪಕ್ಷದ ಸಂಘಟನೆಗೆ ಮುಂದಾಗಬೇಕು. ಮೋದಿಯವರ 69ನೇ ಹುಟ್ಟು ಹಬ್ಬದ ಆಚರಣೆಯ ದಿನದಂದೇ ಪ್ರತಿಯೊಬ್ಬ ಕಾರ್ಯ ಕರ್ತನು ಸದಸ್ಯತ್ವ ಅಭಿಯಾನದ ಮೂಲಕ ಪಕ್ಷದ ಬಲವರ್ಧನೆಗೆ ಮುಂದಾಗಬೇಕು ಎಂದು ಹೇಳಿದರು.

ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸಿಕೊಂಡು ಪಕ್ಷದಲ್ಲಿ ಕೌಟುಂಬಿಕ ವಾತಾವರಣವಾಗಿ ನಿರ್ಮಿಸಿದರೆ ಪಕ್ಷ ಸದೃಢÀವಾಗುತ್ತದೆ. ಇದು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನ ಜವಬ್ದಾರಿ ಎಂದು ಶಿಕ್ಷಕರ ಕ್ಷೇತ್ರದ ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದರು.

ಸದಸ್ಯತ್ವ ಅಭಿಯಾನದ ಜಿಲ್ಲಾ ಉಸ್ತುವಾರಿ ಶಾಂತೆಯಂಡ ರವಿಕುಶಾಲಪ್ಪ ಮಾತನಾಡಿ ರಾಜ್ಯದಲ್ಲಿ ನೂತನವಾಗಿ ಸುಮಾರು 53 ಲಕ್ಷಕ್ಕೂ ಹೆಚ್ಚು ಸದಸ್ಯರು ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದಾರೆ. ಜಿಲ್ಲೆಯಲ್ಲಿ ಅಭಿಯಾನದ ಮೂಲಕ 43 ಸಾವಿರ ಸದಸ್ಯರು ಸೇರ್ಪಡೆಗೊಂಡಿದ್ದು, ಅಭಿಯಾನ ಕಾರ್ಯ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.

ಸದಸ್ಯತ್ವ ಅಭಿಯಾನ ಜಿಲ್ಲಾ ಸಂಚಾಲಕ ನಾಪಂಡ ರವಿಕಾಳಪ್ಪ ಮಾತನಾಡಿ ಮುಂದಿನ ಚುನಾವಣೆಗೆ ಸದಸ್ಯತ್ವ ಅಭಿಯಾನದಿಂದ ಪರಿಣಾಮ ಬೀರಲಿದೆ. ಹೆಚ್ಚಿನ ಸದಸ್ಯರು ಹೊಂದಿದಂತೆ ಪಕ್ಷವೂ ಬಲಗೊಳ್ಳುತ್ತದೆ ಎಂದರು.

ತಾಲೂಕು ಬಿಜೆಪಿ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ಮಾತನಾಡಿ ಸದಸ್ಯತ್ವ ಅಭಿಯಾನವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಪ್ರತಿಯೊಬ್ಬ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ತಮಗೆ ನೀಡಿರುವ ಪುಸ್ತಕದಲ್ಲಿ ಯಾವದೇ ಲೋಪವಿಲ್ಲದಂತೆ ಸದಸ್ಯರ ಹೆಸರು ಮತ್ತು ದೂರವಾಣಿ ಸಂಖ್ಯೆಗಳನ್ನು ನಮೂದಿಸಿ ಪುಸ್ತಕಗಳನ್ನು ಶೀಘ್ರವೇ ಹಿಂದಿರುಗಿಸಿ ಎಂದು ಸೂಚಿಸಿದರು.

ವೇದಿಕೆಯಲ್ಲಿ ರಾಜ್ಯ ಬಿಜೆಪಿ ಸದಸ್ಯೆ ರೀನಾ ಪ್ರಕಾಶ್, ತಾಲೂಕು ಸದಸ್ಯತ್ವ ಅಭಿಯಾನದ ಸಂಚಾಲಕರುಗಳಾದ ನೆಲ್ಲೀರ ಚಲನ್, ಗುಮ್ಮಟ್ಟೀರ ಕಿಲನ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಮಂಡೇಪಂಡ ಸುಜಾ ಕುಶಾಲಪ್ಪ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಯಮುನಾ ಚಂಗಪ್ಪ, ತಾಲೂಕು ಕಾರ್ಯದರ್ಶಿ ಲಾಲಾ ಭೀಮಯ್ಯ ಉಪಸ್ಥಿತರಿದ್ದರು.