ಸಿದ್ದಾಪುರ, ಸೆ. 17: ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ನದಿ ದಡದ ನಿವಾಸಿಗಳು ಹಾಗೂ ಅರಣ್ಯದಂಚಿನ ಆದಿವಾಸಿ ಕುಟುಂಬಗಳು ಮನೆ ಆಸ್ತಿ ಪಾಸ್ತಿ ಹಾಗೂ ಕೂಲಿ ಕೆಲಸ ಮಾಡಲು ಸಾಧ್ಯವಾಗದೆ ಆಹಾರಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣ ಆಗಿರುವದನ್ನು ಮನಗಂಡು ಬಯಲು ಸೀಮೆಯ ಯುವಶಕ್ತಿ ಸಂಘಟನೆಯ ಸಹಕಾರದಿಂದ ನಮ್ಮ ಕೊಡಗು ತಂಡದ ನೇತೃತ್ವದಲ್ಲಿ ನಂಜರಾಯ ಪಟ್ಟಣ, ನೆಲ್ಯಹುದಿಕೇರಿ, ಕರಡಿಗೋಡು ಹಾಗೂ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಡ್ಡಳ್ಳಿ, ಗೇಟ್ ಹಾಡಿ ಭಾಗದಲ್ಲಿರುವ ಆದಿವಾಸಿ ಕುಟುಂಬಗಳಿಗೆ ಅವಶ್ಯಕತೆಗೆ ಬೇಕಾಗಿರುವ ಆಹಾರ ಪದಾರ್ಥಗಳು ಹಾಗೂ ಸಾಮಗ್ರಿಗಳ ಕಿಟ್ಟುಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ನಮ್ಮ ಕೊಡಗು ತಂಡದ ಅಧ್ಯಕ್ಷ ನೌಶಾದ್ ಜನ್ನತ್ ಮಾತನಾಡಿ ನೆರೆ ಪೀಡಿತ ಸೀಮಿತ ಪ್ರದೇಶಗಳಿಗೆ ಈಗಾಗಲೇ ನಮ್ಮ ತಂಡದ ನೇತೃತ್ವದಲ್ಲಿ ಸುಮಾರು ಎರಡು ಸಾವಿರ ಕುಟುಂಬಗಳಿಗೆ ಸುಮಾರು ಇಪ್ಪತ್ತು ಲಕ್ಷ ಮೌಲ್ಯದ ಆಹಾರ ಸಾಮಗ್ರಿಗಳನ್ನು ವಿವಿಧ ಸಂಘಟನೆಗಳ ಸಹಯೋಗದಲ್ಲಿ ತಂಡವೂ ವಿತರಿಸಿದ್ದು, ಅತಿಯಾದ ಮಳೆಯಿಂದಾಗಿ ದಿಡ್ಡಳ್ಳಿಯ ಆದಿವಾಸಿ ಕುಟುಂಬಗಳು ಸುಮಾರು ಎರಡು ತಿಂಗಳುಗಳಿಂದ ಕೂಲಿ ಕೆಲಸವಿಲ್ಲದೇ ಆಹಾರ ಪದಾರ್ಥಗಳಿಗೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿರುವದನ್ನು ಅರಿತು ಗೇಟ್ ಹಾಡಿ, ದಿಡ್ಡಳ್ಳಿಯ ನಿರಾಶ್ರಿತರಿಗೆ ಒಂದು ವಾರಕ್ಕೆ ಬೇಕಾದ ದವಸ ಧಾನ್ಯಗಳನ್ನು ಹಾಗೂ ಸಾಮಗ್ರಿಗಳ ಕಿಟ್ಗಳನ್ನು ವಿತರಿಸಲಾಗಿದೆ ಎಂದರು.
ಬಯಲುಸೀಮೆಯ ರಾಜ್ಯಾಧ್ಯಕ್ಷ ಶಿವಪ್ರಕಾಶ್ ರೆಡ್ಡಿ ಮಾತನಾಡಿ 2018ರÀಲ್ಲಿ ಕೊಡಗಿನಲ್ಲಿ ನಡೆದ ಪ್ರಾಕೃತಿಕ ವಿಕೋಪದ ದಿನದಿಂದಲೂ ಯುವಶಕ್ತಿ ತಂಡವೂ ಕೊಡಗಿನ ಹೆಸರಾಂತ ಸಂಘಟನೆಯಾದ ನಮ್ಮ ಕೊಡಗು ತಂಡದ ಬೆನ್ನಿಗೆ ನಿಂತಿದ್ದು, ಕಳೆದ ಬಾರಿ ನಿರಾಶ್ರಿತ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸುಮಾರು ಹತ್ತು ಲಕ್ಷ ರೂಪಾಯಿಗಳನ್ನು ವಿದ್ಯಾರ್ಥಿ ವೇತನವನ್ನಾಗಿ ನೀಡಿದ್ದು, ನದಿ ದಡ ಸಂತ್ರಸ್ತ ಹಾಗೂ ದಿಡ್ಡಳ್ಳಿಯ ಆದಿವಾಸಿಗಳಿಗೆ ಚಿಂತಾಮಣಿ, ಕೋಲಾರ, ಚಿಕ್ಕಬಳ್ಳಾಪುರ ಜನರ ಸಹಕಾರದಿಂದ ಆಹಾರ ಸಾಮಗ್ರಿ ಒದಗಿಸಿರುವದು ಸಂತಸ ತಂದಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷರಾದ ವಿಜಯ್ ಭಾವ ರೆಡ್ಡಿ, ದಾನಿಗಳಾದ ರಮಾನಂದ್ ಶೆಟ್ಟಿ, ಸುಬ್ಬಾರೆಡ್ಡಿ, ಪದಾಧಿಕಾರಿಗಳಾದ ಬಾಬು ರೆಡ್ಡಿ, ಪ್ರತಾಪ್ ರೆಡ್ಡಿ, ಸುಬ್ರಮಣ್ಯ, ರಾಘವೇಂದ್ರ ಹಾಗೂ ನಮ್ಮ ಕೊಡಗು ತಂಡದ ಅಜಿತ್ ಕೊಟ್ಟಕೇರಿಯನ, ಉಮೇಶ್ ಗೌಡ, ಲೋಹಿತ್, ಬಶೀರ್, ರೋಷನ್, ಕರಡಿಗೋಡು ಕೃಷ್ಣಾ, ಚೆನ್ನಯ್ಯನ ಕೋಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗಾಯತ್ರಿ, ದಿಡ್ಡಳ್ಳಿಯ ಆದಿವಾಸಿ ಮುಖಂಡ ಜೆ.ಕೆ. ಅಪ್ಪಾಜಿ, ಮಾಲ್ದಾರೆ ಗ್ರಾಮ ಪಂಚಾಯಿತಿ ಸದಸ್ಯೆ ಇಂದಿರಾ ಸೇರಿದಂತೆ ಮತ್ತಿತರರು ಹಾಜರಿದ್ದರು.