ಸೋಮವಾರಪೇಟೆ,ಸೆ.17: ಬೆಂಗಳೂರಿನಿಂದ ಸುಬ್ರಮಣ್ಯಕ್ಕೆ ಆಗಮಿಸಿ, ಅಲ್ಲಿಂದ ಕುಮಾರ ಪರ್ವತ-ಪುಷ್ಪಗಿರಿಗೆ ಟ್ರಕ್ಕಿಂಗ್ ತೆರಳಿ ವಾಪಸ್ ಆಗುವ ಸಂದರ್ಭ ನಾಪತ್ತೆಯಾಗಿದ್ದ ಸಂತೋಷ್ ಎಂಬವರು ಇಂದು ಸುರಕ್ಷಿತವಾಗಿ ವಾಪಸ್ ಆಗಿದ್ದಾರೆ.ಸತತ 40 ಗಂಟೆಗಳ ಕಾಲ ಕತ್ತಲು-ಬೆಳಕಿನಲ್ಲಿ ಅರಣ್ಯದೊಳಗೆ ಕಾಲ ಕಳೆದಿದ್ದ ಬೆಂಗಳೂರು ಗಾಯತ್ರಿನಗರದ ಮೂರ್ತಿ ಮತ್ತು ವೀಣಾ ದಂಪತಿ ಪುತ್ರ, ಖಾಸಗಿ ಕಂಪೆನಿಯ ಉದ್ಯೋಗಿ ಸಂತೋಷ್, ಅದೃಷ್ಟವಶಾತ್ ಯಾವದೇ ಅಪಾಯವಿಲ್ಲದಂತೆ ವಾಪಸ್ ಆಗಿದ್ದು, ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.ಬೆಂಗಳೂರಿನಿಂದ ಭಾನುವಾರ ಬೆಳಿಗ್ಗೆ ಸುಬ್ರಮಣ್ಯಕ್ಕೆ ಆಗಮಿಸಿದ 12 ಮಂದಿ ಯುವಕರ ತಂಡ, ಸುಬ್ರಮಣ್ಯದಿಂದ ಕುಮಾರಪರ್ವತ ಏರಿ, ಸೋಮವಾರಪೇಟೆ ವ್ಯಾಪ್ತಿಯ ಪುಷ್ಪಗಿರಿ ಬೆಟ್ಟದ ತುದಿ ತಲುಪಿದ್ದು, ಸಂಜೆ 4.30ರ ಸುಮಾರಿಗೆ ಸುಬ್ರಮಣ್ಯ ಕಡೆಗೆ ವಾಪಸ್ ಇಳಿಯುವ ಸಂದರ್ಭ ತಂಡದಲ್ಲಿದ್ದ ಎಂ. ಸಂತೋಷ್ ನಾಪತ್ತೆಯಾಗಿದ್ದರು.
ಪುಷ್ಪಗಿರಿಯಿಂದ ಒಂದೂವರೆ ಕಿ.ಮೀ. ಕೆಳಭಾಗಕ್ಕೆ ಇಳಿದು ಗಿರಿಗದ್ದೆ ಮೂಲಕ ಸುಬ್ರಮಣ್ಯಕ್ಕೆ ವಾಪಸ್ ಆಗುವ ಸಂದರ್ಭ ಸಂತೋಷ್ ಅವರು ತಂಡದಿಂದ ಬೇರ್ಪಟ್ಟಿದ್ದು, ನಂತರ ಸಂಪರ್ಕಕ್ಕೆ ಲಭ್ಯವಾಗಿರಲಿಲ್ಲ. ಸುಬ್ರಮಣ್ಯದಿಂದ ಗಿರಿಗದ್ದೆ ವ್ಯಾಪ್ತಿಯ 6 ಕಿ.ಮೀ. ಅರಣ್ಯ ಸುಬ್ರಮಣ್ಯಕ್ಕೆ ಸೇರಿದ್ದು, ಈ ಸ್ಥಳದಲ್ಲಿಯೇ ಸಂತೋಷ್ ನಾಪತ್ತೆಯಾಗಿದ್ದರು.
ಸಂತೋಷ್ ನಾಪತ್ತೆಯಾಗಿರುವ ಬಗ್ಗೆ ಪುಷ್ಪಗಿರಿ ಅರಣ್ಯ ಸಿಬ್ಬಂದಿಗಳಿಗೆ ಭಾನುವಾರ ಸಂಜೆ 7 ಗಂಟೆಗೆ ಮಾಹಿತಿ ನೀಡಿದ್ದು, ತಡರಾತ್ರಿ 1 ಗಂಟೆಯವರೆಗೂ ಅರಣ್ಯದಲ್ಲಿ ಹುಡುಕಾಟ
(ಮೊದಲ ಪುಟದಿಂದ) ನಡೆಸಿದರೂ ಪ್ರಯೋಜನ ವಾಗಿರಲಿಲ್ಲ. ಡಿ.ಆರ್.ಎಫ್.ಓ. ಶಶಿ ಸೇರಿದಂತೆ ಗಾರ್ಡ್ಗಳು ಪುಷ್ಪಗಿರಿ ವ್ಯಾಪ್ತಿಯಲ್ಲಿ, ಸುಬ್ರಮಣ್ಯ ಅರಣ್ಯ ಇಲಾಖಾ ಸಿಬ್ಬಂದಿಗಳು ಕುಮಾರಪರ್ವತ ವ್ಯಾಪ್ತಿಯಲ್ಲಿ ಶೋಧಕಾರ್ಯ ಕೈಗೊಂಡಿದ್ದರು.
ಸತತ 40ಗಂಟೆಗಳ ಕಾಲ ಅರಣ್ಯದಲ್ಲಿ ಸಿಲುಕಿದ್ದ ಸಂತೋಷ್ ಮಂಗಳವಾರ ಬೆಳಿಗ್ಗೆ ಕುಕ್ಕೆ ಸುಬ್ರಮಣ್ಯಕ್ಕೆ ಸುರಕ್ಷಿತವಾಗಿ ತಲುಪಿದ್ದಾರೆ. ಕುಕ್ಕೆಸುಬ್ರಮಣ್ಯ ದೇವಾಲಯಕ್ಕೆ ತೀರ್ಥದ ಉದ್ದೇಶಕ್ಕಾಗಿ ಕುಮಾರ ಪರ್ವತದಿಂದ ಪೈಪ್ಲೈನ್ ಅಳವಡಿಸಲಾಗಿದ್ದು, ಅರಣ್ಯದೊಳಗೆ ಈ ಪೈಪ್ಲೈನ್ ಗಮನಿಸಿದ ಸಂತೋಷ್, ಅದರ ಮಾರ್ಗದಲ್ಲೇ ಕೆಳಗಿಳಿದು ಬಂದಿದ್ದು, ಬೆಟ್ಟದ ತಟದಲ್ಲಿರುವ ನೂಚಿಲ ಕಲ್ಲಗುಡ್ಡ ಎಂಬಲ್ಲಿನ ಮನೆಯೊಂದಕ್ಕೆ ಸೇರಿದ್ದಾರೆ. ಸ್ಥಳೀಯರು ಉಪಚರಿಸಿದ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪುತ್ತೂರು ವಲಯದ ಡಿವೈಎಸ್ಪಿ ದಿನಕರ್ ಶೆಟ್ಟಿ, ಸುಬ್ರಮಣ್ಯ ಅರಣ್ಯ ಇಲಾಖಾಧಿಕಾರಿ ಮತ್ತು ಕೊಡಗು ಪುಷ್ಪಗಿರಿ ವನ್ಯಜೀವಿ ವಿಭಾಗದ ಡಿಆರ್ಎಫ್ಓ ಶಶಿ, ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ , ಪುಷ್ಪಗಿರಿ ವನ್ಯಜೀವಿ ವಲಯದ ಎಸಿಎಫ್ ದಯಾನಂದ್, ಆರ್.ಎಫ್.ಓ. ಶ್ರೀನಿವಾಸ್ ನಾಯಕ್ ನೇತೃತ್ವದಲ್ಲಿ 5 ತಂಡಗಳನ್ನು ರಚಿಸಿ ಶೋಧ ಕಾರ್ಯಕ್ಕೆ ಸಿದ್ಧತೆ ನಡೆಸಲಾಗಿತ್ತು. ಸಂತೋಷ್ ನಾಪತ್ತೆಯಾದ ಬಗ್ಗೆ ಸುಬ್ರಮಣ್ಯ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸತತ 40 ಗಂಟೆಗಳ ಕಾಲ ಅರಣ್ಯದಲ್ಲೇ ಕಳೆದ ಸಂತೋಷ್, ಸುರಕ್ಷಿತವಾಗಿ ವಾಪಸ್ ಆಗಿರುವದರಿಂದ ಎಲ್ಲರೂ ನಿಟ್ಟುಸಿರು ಬಿಡುವಂತಾಗಿದೆ.