ಶ್ರೀಮಂಗಲ, ಸೆ. 16 : ನರಿಯಂದಡ ಗ್ರಾ.ಪಂ. ವ್ಯಾಪ್ತಿಯ ಕರಡ ಗ್ರಾಮದ ಮಲೆತಿರಿಕೆ ಬೆಟ್ಟದಲ್ಲಿ ಸುಮಾರು 60ಎಕರೆ ಜಾಗ ಖರೀದಿಸಿ ಪ್ರವಾಸೋಧ್ಯಮಕ್ಕಾಗಿ ಕಾಮಗಾರಿ ನಡೆಸಲು ಮುಂದಾಗಿದ್ದು, ಗ್ರಾಮದಲ್ಲಿ ಯಾವದೇ ರೆಸಾರ್ಟ್ ಹಾಗೂ ಪ್ರವಾಸೋದ್ಯಮದ ಹೆಸರಿನಲ್ಲಿ ಟ್ರಕ್ಕಿಂಗ್ ಇತ್ಯಾದಿ ಉದ್ಧೇಶಗಳಿಗೆ ಜಿಲ್ಲಾಡಳಿತ ಅವಕಾಶ ನೀಡಬಾರದೆಂದು ಕರಡ ಗ್ರಾಮಸ್ಥರು ಹಾಗೂ ಕೊಡಗು ವನ್ಯಜೀವಿ ಸಂಘದ ಮಾಜಿ ಅಧ್ಯಕ್ಷರು ಒತ್ತಾಯಿಸಿದ್ದಾರೆ.

ಪೊನ್ನಂಪೇಟೆಯಲ್ಲಿ ಪೂರ್ವ ಭಾವಿ ಸಭೆ ನಡೆಸಿದ ಗ್ರಾಮಸ್ಥರು ಮುಂಬಯಿ ಮೂಲದ ಸಂಸ್ಥೆ ಗ್ರಾಮದಲ್ಲಿ 60ಕ್ಕೂ ಅಧಿಕ ಎಕರೆ ಜಾಗ ಖರೀದಿಸಿದ್ದು, ಈ ಜಾಗದ ಕಾಡು ಗಳನ್ನು ಕಡಿದು ಮರದ ರೆಂಬೆಗಳನ್ನು ಕಡಿದು ಮೈದಾನ ಮಾಡಲಾಗಿದೆ. ಅಲ್ಲಿ ಇರುವ ಕಾರ್ಮಿಕರ ಮಾಹಿತಿಯಂತೆ ಈ ಜಾಗದಲ್ಲಿ ರೆಸಾರ್ಟ್ ಹಾಗೂ ಇತರ ಪ್ರವಾಸೋದ್ಯಮದ ಕಾಮಗಾರಿಯನ್ನು ಆರಂಭಿಸುವ ಬಗ್ಗೆ ತಿಳಿದುಬಂದಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು. ಜಿಲ್ಲಾಡಳಿತ ಇಂತಹ ಯಾವದೇ ಯೋಜನೆಗೆ ಅವಕಾಶ ನೀಡದಂತೆ ಕರಡ ಗ್ರಾಮಸ್ಥರಾದ ಬೇಪಡಿಯಂಡ ಬಿದ್ದಪ್ಪ, ಐತಿಚಂಡ ಭೀಮಯ್ಯ, ಬೇಪಡಿಯಂಡ ಅರುಣ, ಬಲ್ಲಚಂಡ ರಾಯ್‍ಬೋಪಣ್ಣ ಮತ್ತು ಕೊಡಗು ವನ್ಯಜೀವಿ ಸಂಘದ ಮಾಜಿ ಅಧ್ಯಕ್ಷ, ಕರ್ನಲ್ ಸಿ.ಪಿ.ಮುತ್ತಣ್ಣರವರು ಒತ್ತಾಯಿಸಿದರು.