ಮಡಿಕೇರಿ, ಸೆ. 17: ಮಡಿಕೇರಿ ಕೊಡವ ಸಮಾಜದ ವತಿಯಿಂದ ‘ಕೈಲ್ಪೊಳ್ದ್’ ಹಬ್ಬದ ಅಂಗವಾಗಿ ಸಂತೋಷ ಕೂಟ ಕಾರ್ಯಕ್ರಮ ಭಾನುವಾರದಂದು ನಗರದ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಿತು. ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷವೂ ವಿಜೃಂಭಣೆಯ ಆಚರಣೆಯ ಬದಲಾಗಿ ಸರಳ ರೀತಿಯಲ್ಲಿ ಕಾರ್ಯಕ್ರಮವನ್ನು ಆಚರಿಸಲಾಯಿತು.
ಬೆಳಿಗ್ಗೆ ಸಮಾಜದ ನಿರ್ದೇಶಕರಾದ ಹಿರಿಯರಾದ ಬೊಟ್ಟೋಳಂಡ ಕಾಶಿ ಅಚ್ಚಯ್ಯ ಅವರ ಮುಂದಾಳತ್ವದಲ್ಲಿ ಆಯುಧಗಳಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಭಾಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷರಾಗಿರುವ ವಕೀಲ ಮುಕ್ಕಾಟಿರ ಟಿ. ನಾಣಯ್ಯ ಅವರು ಪಾಲ್ಗೊಂಡಿದ್ದರು.
ಈ ಸಂದರ್ಭ ಮಾತನಾಡಿದ ಅವರು ಕೊಡವ ಜನಾಂಗದಲ್ಲಿ ಯುವಕರು ನಿರ್ದಿಷ್ಟ ಗುರಿ ಇಟ್ಟುಕೊಂಡು ಸಾಧನೆಗೆ ಮುಂದಾಗಬೇಕು. ಯಾವದೇ ಕಾರಣಕ್ಕೂ ಆಯಾ ಕ್ಷೇತ್ರದಲ್ಲಿ ಹಿಂಜರಿಕೆ ಇರಬಾರದು ಎಂದರು. ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾಗಿರುವ ಜಸ್ಟೀಸ್ ಅಜ್ಜಿಕುಟ್ಟೀರ ಎಸ್. ಬೋಪಣ್ಣ ಅವರು ಯುವ ಜನಾಂಗಕ್ಕೆ ಮಾದರಿ ವ್ಯಕ್ತಿಯಾಗಿದ್ದಾರೆ ಎಂದ ಅವರು, ಕೊಡವ ಜನಾಂಗಕ್ಕೆ ಬುಡಕಟ್ಟು ಪ್ರಾತಿನಿಧ್ಯ ಸಿಗಲೇಬೇಕಾಗಿದೆ. ಇದರೊಂದಿಗೆ ಕೋವಿ ಹಕ್ಕಿನ ಉಳಿಕೆಗಾಗಿ ಎಲ್ಲಾ ಪ್ರಯತ್ನವೂ ನಡೆಯುತ್ತಿದೆ. ಬೆಂಗಳೂರು ಸಮಾಜವು ಈ ಎಲ್ಲಾ ಬೇಡಿಕೆಗಳ ಪರವಾಗಿ ಇರುತ್ತದೆ ಎಂದು ತಿಳಿಸಿದರು.
ಈ ಸಂದರ್ಭ ಮಡಿಕೇರಿಯ ಹಿರಿಯ ವೈದ್ಯರಾದ ಡಾ. ಅಜ್ಜಮಾಡ ಗಣಪತಿ, ಅಂತರ್ರಾಷ್ಟ್ರೀಯ ಕಬಡ್ಡಿ ಆಟಗಾರ ಹೊಟ್ಟೆಯಂಡ ಸಚಿನ್ ಪೂವಯ್ಯ ಹಾಗೂ ವಕೀಲ ಎಂ.ಟಿ. ನಾಣಯ್ಯ ಅವರುಗಳನ್ನು ಸಮಾಜದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಮಡಿಕೇರಿ ಸಮಾಜದ ಅಧ್ಯಕ್ಷ ಕೊಂಗಂಡ ಎಸ್. ದೇವಯ್ಯ ಅವರು ಈ ಬಾರಿಯೂ ಸಂತೋಷ ಕೂಟವನ್ನು ಸರಳವಾಗಿ ಆಚರಿಸುತ್ತಿರುವದರ ಕುರಿತು ವಿವರಿಸಿದರು.
ವೇದಿಕೆಯಲ್ಲಿ ಸಮಾಜದ ಕಾರ್ಯದರ್ಶಿ ಅರೆಯಡ ರಮೇಶ್, ನೂತನ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಚೋವಂಡ ಡಿ. ಕಾಳಪ್ಪ, ಜಂಟಿ ಕಾರ್ಯದರ್ಶಿ ಮಾದೇಟಿರ ಪಿ. ಬೆಳ್ಯಪ್ಪ ಸೇರಿದಂತೆ ಆಡಳಿತ ಮಂಡಳಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಉಳ್ಳಿಯಡ ಸಚಿನಾ ಗಂಗಮ್ಮ ಪ್ರಾರ್ಥಿಸಿ, ಚೋವಂಡ ಡಿ. ಕಾಳಪ್ಪ ಸ್ವಾಗತಿಸಿದರು. ಮಾದೇಟಿರ ಬೆಳ್ಯಪ್ಪ ನಿರೂಪಿಸಿ, ವಂದಿಸಿದರು.