ಗೋಣಿಕೊಪ್ಪಲು, ಸೆ. 16: ಸಂಘದ 963 ಸದಸ್ಯರ ವಾರ್ಷಿಕ ವಹಿವಾಟಿನಿಂದ ಹಾತೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ 2017-18ನೇ ಸಾಲಿನಲ್ಲಿ 28 ಲಕ್ಷದ 98 ಸಾವಿರ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೊಡೆಂದೇರ ಬಾಂಡ್ ಗಣಪತಿ ಮಾಹಿತಿ ನೀಡಿದ್ದಾರೆ.

ಹಾತೂರು ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆದ 42ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ಸಹಕಾರ ಸಂಘದ ಮೂಲಕ ಸದಸ್ಯರಿಗೆ ವಿವಿಧ ಯೋಜನೆಗಳ ಅನುಕೂಲಗಳನ್ನು ಕಲ್ಪಿಸುವ ಚಿಂತನೆ ಆಡಳಿತಮಂಡಳಿ ಯದ್ದಾಗಿದೆ. ಮನೆ ಕಟ್ಟಲು, ಮನೆ ದುರಸ್ತಿ ಮಾಡಲು ಸಾಲ ನೀಡುವ ಕಾರ್ಯಕ್ರಮಕ್ಕೆ ಮುಂದಾಗಿದ್ದೇವೆ. ಸಂಘದ ಅಭಿವೃದ್ದಿಗೆ ಪೂರಕವಾಗಿ ನಿರ್ವಹಿಸಬೇಕಾದ ವ್ಯವಸ್ಥೆಗಾಗಿ ಮಂಗಳೂರು ಭಾಗದ ಸಹಕಾರ ಸಂಘಗಳ ಕಾರ್ಯವೈಖರಿಗಳ ಬಗ್ಗೆ ಅಧ್ಯಯನ ನಡೆಸಿ ಅಲ್ಲಿನ ಸದಸ್ಯರಿಗೆ ಸಂಘವು ನೀಡುವ ಸೌಲಭ್ಯಗಳನ್ನು ನಮ್ಮ ಸಂಘದ ಸದಸ್ಯರಿಗೆ ನೀಡುವ ಮೂಲಕ ಸಂಘದ ಮತ್ತು ಸದಸ್ಯರ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಿಸಲಾಗುವದು ಎಂದು ತಿಳಿಸಿದರು.

ಕಳೆದ ಬಾರಿ ಲಾಭದಲ್ಲಿ ಸದಸ್ಯರಿಗೆ ಶೇ. 15 ಡಿವಿಡೆಂಟ್ ಫಂಡ್ ಬಂದಿದೆ. ಅದರಲ್ಲಿ ಶೇ. 3 ಡಿವಿಡೆಂಟ್ ಫಂಡನ್ನು ಸಂಘದ ಕಟ್ಟಡ ನಿರ್ಮಾಣದ ಅಭಿವೃದ್ಧಿಗೆ ಸದಸ್ಯರು ನೀಡಬೇಕೆಂದು ಈ ಸಂದರ್ಭ ಮನವಿ ಸಲ್ಲಿಸಿದರು. ಸಂಘದ ಉತ್ತಮ ಸೇವೆಗಾಗಿ ಸಹಕಾರ ಸಂಘದಿಂದ ಪ್ರಥಮ ಸ್ಥಾನವನ್ನು ಹಾತೂರು ಕೃಷಿ ಪತ್ತಿನ ಸಹಕಾರ ಸಂಘ ಪಡೆದುಕೊಂಡಿದೆ. ಇದಕ್ಕೆ ಸರ್ವ ಸದಸ್ಯರ ಸಂಘದಲ್ಲಿ ನಡೆಸುತ್ತಿ ರುವ ವ್ಯವಹಾರಗಳ ಕಾರಣ ಎಂದರು.

ಇದೇ ಸಂದರ್ಭ ಹಾತೂರು ಶಾಲೆಯ ಅಭಿವೃದ್ದಿಗಾಗಿ ಶೇ. 2 ಡಿವಿಡೆಂಟ್ ಫಂಡನ್ನು ನೀಡಬೇಕೆಂದು ಸದಸ್ಯರಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯ ಗೋಪಾಲಕೃಷ್ಣ ಅವರು ಸಭೆಯಲ್ಲಿ ಮನವಿ ಸಲ್ಲಿಸಿ ಅಧ್ಯಕ್ಷರಲ್ಲಿ ಬೇಡಿಕೆ ಇಟ್ಟರು. ಇದಕ್ಕೆ ಪೂರಕವಾಗಿ ಸರ್ವ ಸದಸ್ಯರು 2% ಡಿವಿಡೆಂಟ್ ಫಂಡನ್ನು ಶಾಲಾ ಅಭಿವೃದ್ಧಿಗಾಗಿ ಬಳಸಲು ಒಪ್ಪಿಗೆ ಸೂಚಿಸಿದರು.

ಜಿಲ್ಲಾ ಡಿ.ಸಿ.ಸಿ. ಬ್ಯಾಂಕಿನ ಅಧ್ಯಕ್ಷರಾಗಿ ಆಯ್ಕೆಯಾದ ಕೊಡೆಂದೇರ ಬಾಂಡ್ ಗಣಪತಿಯವರನ್ನು ಹಾತೂರು ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ ಸನ್ಮಾನಿಸ ಲಾಯಿತು. ಸಂಘದ ವತಿಯಿಂದ ಅತೀ ಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳಿಗೆ ಬಹುಮಾನ ವಿತರಿಸ ಲಾಯಿತು. ಏಳನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಕಾಡೇಮಾಡ ಕೆ. ಸುಬ್ರಮಣಿಯವರ ಪುತ್ರ ಸೃಜನ್ ಅಯ್ಯಪ್ಪ ಪ್ರಥಮ ಬಹುಮಾನ, ವಿ.ಎನ್. ರಂಜನ್ ಅವರ ಪುತ್ರ ವಿ.ಆರ್. ತೇಜಸ್ವಿ ದ್ವಿತೀಯ ಬಹುಮಾನ ಮತ್ತು ತೃತೀಯ ಬಹುಮಾನವನ್ನು ಚೋಂದುವಂಡ ಎ. ದೇವಯ್ಯ ಅವರ ಪುತ್ರಿ ಸಿ.ಡಿ ಐಶ್ವರ್ಯ ಪಡೆದುಕೊಂಡರು.

10ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ಕೇಳಪಂಡ ರಾಕೇಶ್ ಅಪ್ಪಯ್ಯ ಅವರ ಪುತ್ರಿ ತಾನೀಯಾ ದೇಚಮ್ಮ ಪ್ರಥಮ ಬಹುಮಾನವನ್ನು ಪಡೆದರು. ದ್ವಿತೀಯ ಬಹುಮಾನವನ್ನು ಕೇಳಪಂಡ ಟಿ. ಪೂವಯ್ಯ ನವರ ಪುತ್ರಿ ಪ್ರೇಕ್ಷ ಬೋಜಮ್ಮ ಪದೆದುಕೊಂಡರು. ದ್ವಿತೀಯ ಪಿಯುಸಿಯಲ್ಲಿ ಹೆಚ್.ಡಿ. ಜಗನ್ನಾಥ್ ಅವರ ಪುತ್ರ ಹೆಚ್.ಜೆ. ಸಂಜನ್ ಪ್ರಥಮ, ಬಿ.ಯು ದೇವೆಂದ್ರ ಅವರ ಪುತ್ರಿ ಬಿ.ಡಿ. ಗೌರಮ್ಮ ದ್ವಿತೀಯ, ಮುರುವಂಡ ಎಂ. ಮಾದಯ್ಯನವರ ಪುತ್ರ ಎಂ.ಎಂ. ಜಗತ್ ತೃತೀಯ ಬಹುಮಾನವನ್ನು ನೀಡಲಾಯಿತು. ಪದವಿ ತರಗತಿಯಲ್ಲಿ ಕೇಳಪಂಡ ಕೆ. ಚಿಟ್ಟಿಯಪ್ಪ ಅವರ ಪುತ್ರಿ ಕೆ.ಸಿ. ನವ್ಯ ಪ್ರಥಮ, ಮುಕ್ಕಾಟೀರ ಎಂ. ಪೂವಯ್ಯ ಅವರ ಪುತ್ರಿ ಅಕ್ಷತಾ ಬೋಪಯ್ಯ ದ್ವಿತೀಯ ಹಾಗೂ ಬಿ.ಡಿ. ಸೋಮಣ್ಣ ಅವರ ಪುತ್ರಿ ಬಿ.ಎಸ್. ಲಿಖಿತ ಇವರುಗಳಿಗೆ ತೃತೀಯ ಬಹುಮಾನವನ್ನು ನೀಡಲಾಯಿತು.

ಈ ಸಂದರ್ಭ ಆಡಳಿತ ಮಂಡಳಿ ಉಪಾಧ್ಯಕ್ಷ ಎಸ್.ಕೆ. ಮಂದಣ್ಣ, ನಿರ್ದೇಶಕರುಗಳಾದ ಸಿ.ಎಸ್. ಬೋಪಣ್ಣ, ಹೆಚ್.ಡಿ. ಶ್ರೀನಿವಾಸ್, ಯು.ಟಿ. ಅಯ್ಯಪ್ಪ, ಕೆ.ಬಿ. ಉತ್ತಪ್ಪ, ಪಿ.ಡಿ. ದಿನೇಶ್, ಬಿ.ಎಂ. ದುಗ್ಗಪ್ಪ, ಕೆ.ವಿ. ಮುತ್ತಣ್ಣ, ಸಿ.ಜೆ. ರೂಪ, ಕೆ.ಎಂ. ಕಾವೇರಮ್ಮ, ಗೋಣಿಕೊಪ್ಪಲು ಡಿ.ಸಿ.ಸಿ. ಬ್ಯಾಂಕಿನ ಮೇಲ್ವಿಚಾರಕಿ ಬಿ.ವಿ. ಭಾರತಿ, ಹಾತೂರು ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಎಂ ಪ್ರದೀಪ್, ಗೋಣಿಕೊಪ್ಪಲು ಶಾಖೆಯ ವ್ಯವಸ್ಥಾಪಕ ದೇವಯ್ಯ ಉಪಸ್ಥಿತರಿದ್ದರು.