*ಗೋಣಿಕೊಪ್ಪಲು, ಸೆ. 16: ಪರಿಶಿಷ್ಟ ವರ್ಗ ಮತ್ತು ಕಲ್ಯಾಣ ಇಲಾಖೆ ಅಧೀನದಲ್ಲಿರುವ ತಾಲೂಕಿನ 6 ವಸತಿ ನಿಲಯ ಹಾಗೂ ಶಾಲೆಗಳಿಗೆ ಸೂಕ್ತ ಸೌಕರ್ಯ ಗಳಿಲ್ಲ ಮತ್ತು ಮೇಲ್ವಿಚಾರಕರು ಹಾಗೂ ಕಾವಲುಗಾರರು ಇಲ್ಲ. ಹೀಗಾಗಿ ವಿದ್ಯಾರ್ಥಿಗಳಲ್ಲಿ ಅವ್ಯಕ್ತ ಭಯ ಕಾಡುತ್ತಿದ್ದು, ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೂ ತೊಡಕ್ಕಾಗಿ ಪರಿಣಮಿ ಸಿದೆ.

ವಿದ್ಯಾರ್ಥಿ ನಿಲಯವನ್ನು ನಿರ್ವಹಿಸಬೇಕಾದ ಮೇಲ್ವಿಚಾರಕರ ಕೊರತೆ ವಿದ್ಯಾರ್ಥಿಗಳಿಗೆ ಸೂಕ್ತ ಭದ್ರತೆ ಒದಗಿಸಲು ಸಾಧ್ಯವಾಗುತ್ತಿಲ್ಲ. ರಾತ್ರಿ ಸಮಯದಲ್ಲಿ ವಸತಿ ನಿಲಯಗಳಲ್ಲಿ ಕಾವಲುಗಾರರು ಇಲ್ಲದೇ ಇರುವದ ರಿಂದ ನಿಲಯಗಳ ಆವರಣದೊಳಗೆ ರಾತ್ರಿ ಸಮಯದಲ್ಲಿ ಕಿಡಿಗೇಡಿಗಳು ಪ್ರವೇಶಿಸಿ ಉಪಟಳ ನೀಡುತ್ತಿದ್ದಾರೆ. ಹೀಗಾಗಿ ಬಹುತೇಕ ಮಕ್ಕಳು ವಸತಿ ನಿಲಯದಲ್ಲಿ ವಾಸ್ತವ್ಯ ಹೂಡಲು ಅಂಜುತ್ತಿದ್ದಾರೆ. ಸೂಕ್ತ ಭದ್ರತೆ ವ್ಯವಸ್ಥೆ ಇಲ್ಲದೇ ಇರುವುದು ವಿದ್ಯಾರ್ಥಿಗಳಲ್ಲಿ ಈ ಮನಸ್ಥಿತಿ ಕಾಡಲು ಕಾರಣ ವಾಗಿದೆ.

6 ವಸತಿ ನಿಲಯಗಳಿಗೆ ಒಬ್ಬರೇ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿಯಮ ಪ್ರಕಾರ ಪ್ರತಿ ವಸತಿ ಶಾಲೆಗೂ ಒಬ್ಬ ಮೇಲ್ವಿಚಾರಕ ಕಾರ್ಯನಿರ್ವಹಿಸ ಬೇಕು. ಅವರು ರಾತ್ರಿ ಸಮಯದಲ್ಲೂ ನಿಲಯದಲ್ಲೇ ಉಳಿದು ಮಕ್ಕಳ ಭದ್ರತೆ ಬಗ್ಗೆ ಗಮನ ಹರಿಸಬೇಕು ಆದರೆ ಮೇಲ್ವಿಚಾರಕರ ನೇಮಕಾತಿ ಸರ್ಕಾರದ ಮಟ್ಟದಲ್ಲಿ ನಡೆಯದೇ ಇರುವುದರಿಂದ ಸಮಸ್ಯೆ ಕಾಡುತ್ತಿದೆ. ರಾಜ್ಯದಲ್ಲಿ ಶೇ. 50ರಷ್ಟು ಮೇಲ್ವಿಚಾರಕರ ಕೊರತೆ ಇದೆ. ಬಹಳಷ್ಟು ಮಂದಿ ನಿವೃತ್ತಿ ಪಡೆದು ಕೊಂಡಿದ್ದು, ಕೆಲವರು ನಿವೃತ್ತಿ ಅಂಚಿನಲ್ಲೂ ಇದ್ದಾರೆ. ಹೀಗಾಗಿ ಖಾಲಿ ಇರುವ ಹುದ್ದೆಗೆ ನೇಮಕಾತಿ ನಡೆಯದೇ ಇರುವುದರಿಂದ ಸಮಸ್ಯೆ ಎದುರಾಗಿದೆ. ಇದರೊಂದಿಗೆ ಕೆಲವರು ಬಿ.ಎ, ಬಿ.ಎಡ್ ವ್ಯಾಸಂಗ ಮಾಡಿದವರು ಅರ್ಜಿ ಸಲ್ಲಿಸಿ ನೇಮಕಗೊಳ್ಳುತ್ತಾರಾದರೂ ಕೆಲಸದ ಒತ್ತಡದಿಂದ ಈ ವೃತ್ತಿಯಿಂದ ನಿರ್ಗಮಿಸುತ್ತಿದ್ದಾರೆ. ಹೀಗಾಗಿ ಮೇಲ್ವಿಚಾರಕರ ಹುದ್ದೆಯ ಸಮಸ್ಯೆ ಎದುರಾಗಲು ಮುಖ್ಯ ಕಾರಣವಾಗಿದೆ ಎಂದು ಅಧಿಕಾರಿಯೊಬ್ಬರು ಹೇಳು ತ್ತಾರೆ. ತಾಲೂಕಿನಲ್ಲಿ ಇಲಾಖೆಯ ಅಧೀನದಲ್ಲಿ 6 ವಸತಿ ನಿಲಯ ನಿರ್ವಹಿಸುತ್ತಿದೆ. ಕುಟ್ಟ ಗ್ರಾಮದಲ್ಲಿ ಎರಡು, ತಿತಿಮತಿಯಲ್ಲಿ ಎರಡು, ಪಾಲಿಬೆಟ್ಟ ಒಂದು, ಕಾರ್ಮಾಡು ಒಂದು ಹೀಗೆ ಬಾಲಕ ಹಾಗೂ ಬಾಲಕಿಯರ ವಸತಿ ನಿಲಯಗಳಿವೆ. ಕುಟ್ಟ ಹೊರತುಪಡಿಸಿ ಉಳಿದ 5 ವಸತಿ ನಿಲಯಗಳಿಗೆ ಮೇಲ್ವಿಚಾರ ಕರೂ ಇಲ್ಲ, ಕಾವಲುಗಾರರು ಇಲ್ಲ. ಹೀಗಾಗಿ ಅಭದ್ರತೆಯಲ್ಲಿ ವಿದ್ಯಾರ್ಥಿ ಗಳಿದ್ದಾರೆ.

ಕುಟ್ಟ ವಸತಿ ನಿಲಯದಲ್ಲಿರುವ ಒರ್ವ ಮೇಲ್ವಿಚಾರಕ ಲಿಂಗರಾಜು ಅವರೇ 5 ವಸತಿ ಶಾಲೆಯ ಮೇಲ್ವಿಚಾರಣೆಯನ್ನು ನಿರ್ವಹಿಸ ಬೇಕಾಗಿದೆ. ಆದರೆ ಈತ ಒಮ್ಮೆಯೂ ನೆಪ ಮಾತ್ರಕ್ಕೆ ವಸತಿ ಶಾಲೆಗಳತ್ತ ಹೆಜ್ಜೆ ಹಾಕಿಲ್ಲ. ಹೀಗಾಗಿ ವಿದ್ಯಾರ್ಥಿ ಗಳ ಸಮಸ್ಯೆಯನ್ನು ಆಲಿಸುವವರೇ ಇಲ್ಲ. ಪರಿಶಿಷ್ಟ ಕಲ್ಯಾಣ ಇಲಾಖೆಯ ಅಧಿಕಾರಿಯು ಈ ಬಗ್ಗೆ ನಿರ್ಲಕ್ಷ್ಯ ತಾಳಿರುವುದು ವಿದ್ಯಾರ್ಥಿಗಳ ಅಧ್ಯಯನದ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ. ಸರ್ಕಾರ ವಸತಿ ನಿಲಯಗಳಿಗೆ ಹತ್ತು ಹಲವು ಯೋಜನೆಗಳ ಮೂಲಕ ನೂರಾರು ಸೌಕರ್ಯಗಳನ್ನು ಒದಗಿಸುತ್ತಿದೆ. ಆದರೆ ಅದನ್ನು ವಿದ್ಯಾರ್ಥಿಗಳೆಡೆಗೆ ತಲುಪಿಸುವ ಕಾರ್ಯ ನಿರ್ವಹಿಸ ಬೇಕಾದ ಮೇಲ್ವಿಚಾರಕರೇ ಇಲ್ಲ. ಬಹುತೇಕ ನಿಲಯಗಳಲ್ಲಿ ಅಡಿಗೆ ಸಿಬ್ಬಂದಿಗಳೇ ನಿಲಯದ ಮೇಲ್ವಿ ಚಾರಣೆ ನಡೆಸುತ್ತಿದ್ದಾರೆ. ರಾತ್ರಿ ಸಮಯದಲ್ಲಿ ಬಾಲಕಿಯರ ವಸತಿ ನಿಲಯದಲ್ಲಿ ಪುರುಷ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಸ್ಥಳೀಯರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಈ ವಿಚಾರವಾಗಿ ತಾ.ಪಂ. ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾ.ಪಂ. ಸದಸ್ಯೆ ಆಶಾ ಜೇಮ್ಸ್ ಅಧಿಕಾರಿಯ ವಿರುದ್ದ ಕಿಡಿಕಾರಿದ್ದು, ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.

- ಎನ್.ಎನ್. ದಿನೇಶ್