ಸಿದ್ದಾಪುರ, ಸೆ. 16: ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಕುಂಬಾರಗುಂಡಿ ಹಾಗೂ ಬೆಟ್ಟದ ಕಾಡು ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ನೆಲ್ಯಹುದಿಕೇರಿ ಬೆಟ್ಟದ ಕಾಡು ಹಾಗೂ ಬರಡಿಯಲ್ಲಿರುವ ಸರಕಾರಿ ಜಾಗವನ್ನು ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಸರ್ವೆ ಕಾರ್ಯ ನಡೆಸಿದರು.

ಈ ಬಾರಿಯ ಪ್ರವಾಹದಿಂದಾಗಿ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಾರು ಮನೆಗಳು ಕುಸಿದುಬಿದ್ದಿತ್ತು. ಮನೆ ಕಳೆದುಕೊಂಡವರು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಶಾಶ್ವತ ಸೂರು ಸಿಗುವವರೆಗೂ ಪರಿಹಾರ ಕೇಂದ್ರವನ್ನು ಬಿಟ್ಟು ತೆರಳುವದಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿಗಳು ಆದೇಶ ನೀಡಿ ಪುನರ್ವಸತಿ ಕಲ್ಪಿಸಿಕೊಡುವಂತೆ ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಹಾಗೂ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ನೆಲ್ಯಹುದಿಕೇರಿ ಗ್ರಾಮಗಳಲ್ಲಿ ಇರುವ ಪೈಸಾರಿ ಜಾಗಗಳನ್ನು ಪರಿಶೀಲನೆ ನಡೆಸಿದರು. ವಾಸಕ್ಕೆ ಯೋಗ್ಯವಾಗಿರುವ ಜಾಗವೆಂದು ಗುರುತಿಸಿದ್ದಾರೆ. ಇದೀಗ ಜಿಲ್ಲಾಡಳಿತದ ವತಿಯಿಂದ ಕಂದಾಯ ಇಲಾಖೆ ಗುರುತಿಸಿದ್ದ ಬೆಟ್ಟದ ಕಾಡು ಹಾಗೂ ಬರಡಿ ಭಾಗದಲ್ಲಿ ಸರ್ವೆ ಕಾರ್ಯ ನಡೆಸಲಾಗುತ್ತಿದೆ. ಜಿಲ್ಲಾಡಳಿತ ತ್ವರಿತ ಗತಿಯಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವಲ್ಲಿ ಶ್ರಮವಹಿಸುತ್ತಿದೆ. ಆದರೆ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿರುವ ಸಂತ್ರಸ್ತರು ತಮಗೆ ಯಾವಾಗ ಶಾಶ್ವತ ಸೂರು ಸಿಗಬಹುದೆಂದು ಚಿಂತಾಕ್ರಾಂತರಾಗಿದ್ದಾರೆ.

ನದಿ ತೀರದವರ ಅಳಲು

ಕರಡಿಗೋಡಿನ ನದಿತೀರದ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಬೇಕೆಂದು ಸಂತ್ರಸ್ತರು ಆಗ್ರಹಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರಡಿ ಗೋಡಿನ ಸಂತ್ರಸ್ತ ಎಂ.ಎ. ಕೃಷ್ಣ ಈ ಬಾರಿಯ ಪ್ರವಾಹದಿಂದಾಗಿ ಕರಡಿ ಗೋಡಿನ ನೂರಾರು ಮನೆಗಳು ಹಾನಿಯಾಗಿರುತ್ತವೆ. 40ಕ್ಕೂ ಅಧಿಕ ಮನೆಗಳು ಕುಸಿದಿವೆ, ಕಳೆದುಕೊಂಡವರು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಆದರೆ ಜಿಲ್ಲಾಡಳಿತ ಈವರೆಗೂ ಶಾಶ್ವತ ಸೂರು ಒದಗಿಸಿ ಕೊಡದೆ ನಿರ್ಲಕ್ಷ ವಹಿಸುತ್ತಿದೆ ಎಂದು ಆರೋಪಿಸಿದರು. ಕಳೆದ ವರ್ಷ ಪ್ರವಾಹದಿಂದಾಗಿ ಕರಡಿಗೋಡಿನ ನದಿ ತೀರದಲ್ಲಿ ಸಮಸ್ಯೆಗಳು ಎದುರಾಗಿತ್ತು.

ಈ ಸಂದರ್ಭದಲ್ಲಿ ನದಿ ತೀರದ ನಿವಾಸಿಗಳು ತಮಗೆ ಪುನರ್ವಸತಿ ಕಲ್ಪಿಸಿಕೊಡುವಂತೆ ಪಂಚಾಯಿತಿ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಲಾಗಿತ್ತು. ಆದರೆ ಈವರೆಗೂ ಜಿಲ್ಲಾಡಳಿತ ಶಾಶ್ವತ ಸೂರು ಒದಗಿಸಿ ಕೊಡದೆ ನಿರ್ಲಕ್ಷ ವಹಿಸುತ್ತಿದೆ ಎಂದು ಆರೋಪಿಸಿದರು. ಕರಡಿಗೋಡಿನ ನದಿತೀರದಲ್ಲಿ 120ಕ್ಕೂ ಅಧಿಕ ಮನೆಗಳಿದ್ದು ಇದೀಗ ಪ್ರವಾಹದಿಂದಾಗಿ ಅತಂತ್ರ ಸ್ಥಿತಿಯಲ್ಲಿದ್ದಾರೆ; ಆದರೆ ಜಿಲ್ಲಾಡಳಿತ ಶಾಶ್ವತ ಸೂರು ಒದಗಿಸಿಕೊಡುವಲ್ಲಿ ಆಸಕ್ತಿ ವಹಿಸುತ್ತಿಲ್ಲ ಎಂದು ದೂರಿದರು. ಕೂಡಲೇ ಜಿಲ್ಲಾಡಳಿತ ಕರಡಿಗೋಡಿನ ನದಿತೀರದ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಬೇಕೆಂದು ಒತ್ತಾಯಿಸಿದರು. ತಪ್ಪಿದಲ್ಲಿ ಪ್ರತಿಭಟನೆ ನಡೆಸಲಾಗುವದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ಹೂವಮ್ಮ, ಸಂತ್ರಸ್ತರಾದ ಆರೋಗ್ಯಮ್ಮ, ಸುನಿಲ್, ನಾರಾಯಣ ಶ್ರೀನಿವಾಸ್ ಇತರರು ಹಾಜರಿದ್ದರು.