ಸಿದ್ದಾಪುರ, ಸೆ. 17: ಕರಡಿಗೋಡು ಭಾಗದಲ್ಲಿ ಪ್ರವಾಹದಿಂದಾಗಿ 40 ಕ್ಕೂ ಹೆಚ್ಚು ಮನೆಗಳು ಸಂಪೂರ್ಣವಾಗಿ ಕುಸಿದಿದ್ದು, ಬಹಳಷ್ಟು ಮನೆಗಳು ವಾಸಕ್ಕೆ ಯೋಗ್ಯವಿಲ್ಲದೆ ಸಂತ್ರಸ್ತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಭಾಗದ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಕರಡಿಗೋಡು ನಿವೇಶನ ಹೋರಾಟ ಸಮಿತಿಯ ಪ್ರಮುಖರು ಸ್ಥಳೀಯ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಸಮಿತಿ ಪ್ರಮುಖ ರೆಜಿತ್ ಕುಮಾರ್ ಮಾತನಾಡಿ, ಪ್ರವಾಹದಿಂದಾಗಿ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ಹಾಗೂ ಗುಹ್ಯ ಭಾಗದಲ್ಲಿ ನೂರಾರು ಮನೆಗಳು ನೆಲಕ್ಕುರುಳಿದ್ದು, ಹಲವಾರು ಮನೆಗಳಲ್ಲಿ ಬಿರುಕು ಬಿಟ್ಟಿದೆ. ಇವರು ಸ್ವಂತ ನಿವೇಶನ ಹಾಗೂ ಸೂರು ಕಟ್ಟಿಕೊಳ್ಳಲು ಅಶಕ್ತರಾಗಿದ್ದಾರೆ. ಎಲ್ಲರೂ ಕೂಡಾ ಕೂಲಿ ಕಾರ್ಮಿಕರಾಗಿದ್ದಾರೆ. ಈ ಭಾಗದಲ್ಲಿ ಒತ್ತುವರಿ ಆಗಿರುವ ಸರಕಾರಿ ಜಾಗವನ್ನು ತೆರವುಗೊಳಿಸಿ ಸಂತ್ರಸ್ತರಿಗೆ ಶಾಶ್ವತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.ಸಮಿತಿ ಪ್ರಮುಖ ಕೃಷ್ಣ ಮಾತನಾಡಿ, ಕರಡಿಗೋಡು ಗ್ರಾಮದಲ್ಲಿ 114 ಕುಟುಂಬಗಳು ನದಿ ದಡದಲ್ಲಿ ವಾಸವಾಗಿದ್ದು, ಶಾಶ್ವತ ಸೂರು ಒದಗಿಸಿಕೊಡುವ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭರವಸೆಯನ್ನು ನೀಡಿದ್ದರು. ಆದರೆ ಭರವಸೆಯನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಈ ಭಾಗದಲ್ಲಿರುವ ಸರಕಾರಿ ಜಾಗವನ್ನು ಸರ್ವೆ ಮಾಡಿ ಸಂತ್ರಸ್ತರಿಗೆ ಹಂಚಬೇಕು ಹಾಗೂ ಪರಿಹಾರವಾಗಿ ರೂ 5 ಲಕ್ಷ ನೀಡಬೇಕೆಂದು ಒತ್ತಾಯಿಸಿದರು. ಮುಂದಿನ 6 ದಿನಗಳ ಒಳಗೆ ಸ್ಪಂದಿಸದಿದ್ದರೆ ಹೋರಾಟ ಮಾಡುವದಾಗಿ ಎಚ್ಚರಿಸಿದರು. ಈ ಸಂದರ್ಭ ನೂರಾರು ಸಂಖ್ಯೆಯಲ್ಲಿ ಸಂತ್ರಸ್ತರು ಹಾಜರಿದ್ದರು.