ಮಡಿಕೇರಿ, ಸೆ. 17: ಬಿಜೆಪಿ ನೇತೃತ್ವದ ರಾಜ್ಯ ಸರಕಾರದಲ್ಲಿ ಹಿರಿಯ ಸಚಿವರಾಗಿರುವ ಕೆ.ಎಸ್.ಈಶ್ವರಪ್ಪ ಅವರು ಮುಸ್ಲಿಂ ಮತದಾರರನ್ನು ಕೀಳಾಗಿ ಕಂಡಿದ್ದಾರೆಂದು ಆರೋಪಿಸಿರುವ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕ, ಸಚಿವರು ಬಹಿರಂಗವಾಗಿ ಮುಸಲ್ಮಾನರ ಕ್ಷಮೆಯಾಚಿಸದಿದ್ದಲ್ಲಿ ಪಕ್ಷದ ವತಿಯಿಂದ ರಾಜ್ಯವ್ಯಾಪಿ ಹೋರಾಟವನ್ನು ಹಮ್ಮಿಕೊಳ್ಳುವದಾಗಿ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎ.ಕೆ.ಹ್ಯಾರಿಸ್ ಸಚಿವರಾದವರು ಒಂದು ಜಾತಿ, ಧರ್ಮ, ಪಕ್ಷಕ್ಕೆ ಸೀಮಿತವಾಗದೆ ಎಲ್ಲರೂ ಒಂದೇ ಎಂದು ಭಾವಿಸ ಬೇಕು. ಆದರೆ ಸಚಿವ ಈಶ್ವರಪ್ಪ ಅವರು ಪ್ರಚಾರಕ್ಕಾಗಿ ಎಲ್ಲವನ್ನೂ ಮೀರಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು. ಭಾರತೀಯತೆಯಲ್ಲಿ ವಿಶ್ವಾಸ ಹೊಂದಿರುವ ಮುಸಲ್ಮಾನರ ಮನಸ್ಸುಗಳಿಗೆ ಹುಳಿ ಹಿಂಡುವ ನೀಚ ರಾಜಕಾರಣಕ್ಕೆ ಕೈ ಹಾಕಿರುವ ಸಚಿವರ ಕ್ರಮ ಖಂಡನೀಯ. ಭಾರತ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲದ ಬಿಜೆಪಿ ತನ್ನ ಮುಖಂಡರುಗಳ ಮತ್ತು ಸಚಿವರುಗಳ ಮೂಲಕ ಸಮಾಜವನ್ನು ಒಡೆದು ಆಳುವ ನೀತಿಯನ್ನು ಜಾರಿಗೊಳಿಸುತ್ತಿದೆ ಎಂದು ಆರೋಪಿಸಿದರು.
ಮುಸಲ್ಮಾನರ ವಿರುದ್ಧ ಹೇಳಿಕೆ ನೀಡುವದನ್ನು ಬಿಜೆಪಿ ನಾಯಕರು ಮುಂದುವರೆಸಿದರೆ ತೀವ್ರ ರೀತಿಯ ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಹ್ಯಾರಿಸ್ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ಕೆ.ಎಸ್. ಮಹಮ್ಮದ್ ರಫೀಕ್, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಸಿ.ಇ.ಸುಬೇರ್, ಸೋಮವಾರಪೇಟೆ ಬ್ಲಾಕ್ ಅಧ್ಯಕ್ಷ ಎಂ.ಎಂ.ಶಾಹಿದ್ ಖಾನ್, ಕುಶಾಲನಗರ ಬ್ಲಾಕ್ ಅಧ್ಯಕ್ಷ ಕೆ.ಇ. ಅಬ್ದುಲ್ ರಜಾóಕ್ ಹಾಗೂ ಜಿಲ್ಲಾ ಸಂಯೋಜಕ ಎಂ.ಎ. ಖಲೀಲ್ ಬಾಷಾ ಉಪಸ್ಥಿತರಿದ್ದರು.