ಮಡಿಕೇರಿ, ಸೆ. 16: ಸಮಾಜ ಕಲ್ಯಾಣ ಇಲಾಖೆಯಲ್ಲಿನ ಸೌಲಭ್ಯ ಗಳನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ; ಇಲಾಖೆ ಸಿಬ್ಬಂದಿಗಳ ನಿರ್ಲಕ್ಷ್ಯ ಕಾಣುತ್ತಿದೆ ಎಂದು ತಾಲೂಕು ಪಂಚಾಯಿತಿ ಸದಸ್ಯರುಗಳು ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ಇಂದು ಎದುರಾಯಿತು.ತಾಲೂಕು ಪಂಚಾಯತ್ ಅಧ್ಯಕ್ಷೆ ತೆಕ್ಕಡೆ ಶೋಭ ಮೋಹನ್ ಅಧ್ಯಕ್ಷತೆಯಲ್ಲಿ ನಡೆದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯ ನಾಗೇಶ್ ಕುಂದಲ್ಪಾಡಿ ವಿಷಯ ಪ್ರಸ್ತಾಪಿಸಿದರು. ಸಮಾಜ ಕಲ್ಯಾಣ ಇಲಾಖೆಗೆ ಸರಕಾರದಿಂದ ಎಲ್ಲಾ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ಕಲ್ಪಿಸಲಾಗುತ್ತದೆ. ಆದರೆ ಇಲ್ಲಿನ ಸಿಬ್ಬಂದಿಗಳು ಮಾತ್ರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ವಸತಿ ನಿಲಯಗಳಲ್ಲಿ ಸಿಬ್ಬಂದಿ ಕೊರತೆ, ವಿದ್ಯುತ್ ಅವ್ಯವಸ್ಥೆ, ಖಾಯಂ ಮೇಲ್ವಿಚಾರಕರು ಇಲ್ಲದೆ ಸಮಸ್ಯೆಗಳನ್ನು ವಸತಿ ನಿಲಯಗಳು ಎದುರಿಸು ವಂತಾಗಿದೆ. ವಸತಿ ನಿಲಯಗಳು ಅವ್ಯವಸ್ಥೆಯಿಂದ ನಡೆಯಬಾರದು. ಅದು ವ್ಯವಸ್ಥಿತವಾಗಿ ಕಟ್ಟುನಿಟ್ಟಿನ ಚೌಕಟ್ಟಿನೊಳಗೆ ನಡೆಯುವಂತಾಗ ಬೇಕು ಎಂದು ಸಭೆಯ ಗಮನಕ್ಕೆ ತಂದರು.

ಪೆರಾಜೆ ವಸತಿ ನಿಲಯದಲ್ಲಿ ಜನರೇಟರ್, ಸೋಲಾರ್ ಹಾಗೂ ಕರೆಂಟ್ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಬೆಳಕಿನ ವ್ಯವಸ್ಥೆ ಮಾತ್ರ ಇಲ್ಲದಿರುವದು ವಿಪರ್ಯಾಸ. ಜನರೇಟರ್ ದುರಸ್ತಿಯಲ್ಲಿದೆ. ಯುಪಿಎಸ್ ಕೆಲಸ ನಿರ್ವಹಿಸುತ್ತಿಲ್ಲ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ ಅವರು, ಶೀಘ್ರದಲ್ಲಿ ಇಲ್ಲಿನ ವಿದ್ಯುತ್

(ಮೊದಲ ಪುಟದಿಂದ) ಪೂರೈಸುವ ಕ್ರಮವಾಗಲಿ, ಇಲ್ಲ ಮಕ್ಕಳನ್ನು ಮನೆಗೆ ಕಳುಹಿಸಿ ಅಧಿಕಾರಿಗಳೇ ಈ ವಸತಿ ನಿಲಯದಲ್ಲಿ ತಂಗುವ ವ್ಯವಸ್ಥೆ ಮಾಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಾತ್ರವಲ್ಲದೆ ವಸತಿ ನಿಲಯಗಳಿಗೆ ಜನರೇಟರ್ ಪೂರೈಕೆ ಮಾಡಿರುವವರ ಮೇಲೆ ಕ್ರಿಮಿನಲ್ ಕೇಸ್ ಹಾಕಿ ಎಂದು ತಾ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರನ್ನು ಒತ್ತಾಯಿಸಿದರು.

ವಸತಿ ನಿಲಯಗಳಲ್ಲಿ ಮೇಲ್ವಿಚಾರಕರನ್ನು ಬೇರೆ ಕೆಲಸಗಳಿಗೆ ನೇಮಿಸುವ ಕೆಲಸವಾಗುತ್ತದೆ. ಇಂತಹ ಪ್ರಕ್ರಿಯೆಯಿಂದ ವಸತಿ ನಿಲಯಗಳು ಕಟ್ಟುನಿಟ್ಟಾಗಿ ನಡೆಯಲು ಸಾಧ್ಯವಿಲ್ಲ. ಆದ್ದರಿಂದ ಮೇಲ್ವಿಚಾರಕರನ್ನು ಬೇರೆ ಕಚೇರಿಯ ಕೆಲಸಗಳಿಗೆ ನಿಯೋಜಿಸ ಬಾರದು ಎಂದು ಆಗ್ರಹಿಸಿದರು.

ಪ್ರಕೃತಿ ವಿಕೋಪದಿಂದ ಪರಂಬು ಪೈಸಾರಿಯಲ್ಲಿ 117 ಮನೆಗಳಿಗೆ ಹಾನಿಯಾಗಿದೆ. ಕಾಲೋನಿಯಲ್ಲಿದ್ದ 20 ಮನೆಗಳಿಗೂ ತೀವ್ರ ತೊಂದರೆಯಾಗಿದೆ. ಇವರಿಗೆ ಶಶ್ವಾತ ಪರಿಹಾರವಾಗಬೇಕು ಎಂದು ಸದಸ್ಯ ಅಪ್ರು ರವೀಂದ್ರ ಒತ್ತಾಯಿಸಿದರು. ತಾ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ ಪಿ, ಈಗಾಗಲೇ ಈ ಸ್ಥಳಗಳಿಗೆ ಜಿಲ್ಲಾಧಿಕಾರಿ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಾಸಕ್ಕೆ ಯೋಗ್ಯವಲ್ಲ ಎಂದು ತಿಳಿಸಿದೆ. ಮಾತ್ರವಲ್ಲದೆ ಇವರನ್ನು ಬೇರೆಡೆಗೆ ಸ್ಥಳಾಂತರಿಸಲು ಜಿಲ್ಲಾಡಳಿತ ಕ್ರಮ ವಹಿಸಿದೆ ಎಂದರು.

ಈ ಸಂದರ್ಭ ಮಾತನಾಡಿದ ಸದಸ್ಯ ನಾಗೇಶ್ ಕುಂದಲ್ಪಾಡಿ, ಮನೆಯನ್ನು ಸ್ಥಳಾಂತರಿಸುವ ಸಂದರ್ಭ ಸಂತ್ರಸ್ತರಿಗೆ ಕನಿಷ್ಟ ಹತ್ತು ಎಕರೆ ನೀಡುವಂತೆ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.

ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಮಾತನಾಡಿ, ಹಲವು ಶಾಲೆಗಳಿಗೆ ಆರ್‍ಟಿಸಿ ಸಮಸ್ಯೆ ಕಾಡುತ್ತಿದೆ. ಸಾಕಷ್ಟು ವರ್ಷಗಳಿಂದ ಈ ಸಮಸ್ಯೆ ಬಗೆಹರಿಸಲು ಶ್ರಮ ವಹಿಸಲಾಗುತ್ತಿದೆ ಎಂದರು. ಈ ಸಂದರ್ಭ ಮಾತನಾಡಿದ ಮಡಿಕೇರಿ ತಹಶೀಲ್ದಾರ್ ಪಿ.ಎಸ್. ಮಹೇಶ್, ಕಂದಾಯ ಇಲಾಖೆ ಕೂಡ ಈ ನಿಟ್ಟಿನಲ್ಲಿ ಕ್ರಮವಹಿಸುತ್ತಿದೆ ಎಂದರು. ಸಭೆಗೆ ಹಾಜಾರಾಗುವ ಎಲ್ಲ ಕಂದಾಯ ಅಧಿಕಾರಿಗಳು ಕೆಲಸ ಮಾಡುವದಾಗಿ ಹೇಳುತ್ತಾರೆ. ಆದರೆ ಯಾರೂ ಸೂಕ್ತ ಕ್ರಮ ವಹಿಸುವದಿಲ್ಲ ಎಂದು ಸದಸ್ಯ ದಬ್ಬಡ್ಕ ಶ್ರೀಧರ್ ಅಸಮಾಧಾನ ಹೊರಹಾಕಿದರು.

ಭಾಗಮಂಡಲ ಸಮೀಪದ ಚೆರಂಡೇಟಿ ಹಾಗೂ ಕೋಪಟ್ಟಿ ಶಾಲೆ ವಿಕೋಪದ ಸಂದರ್ಭ ಹಾನಿಗೀಡಾಗಿದೆ. ಆದರೆ ಒಮ್ಮೆಯೂ ಕ್ಷೇತ್ರ ಶಿಕ್ಷಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಎಂದು ದೂರಿದರು. ಸದ್ಯ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಎರಡು ತಿಂಗಳಿನಿಂದ ನೋಡಲ್ ಆಧಿಕಾರಿಯಾಗಿ ಕೆಲಸ ನಿರ್ವಹಿಸಬೇಕಾದ ಹೊಣೆ ಇರುವದರಿಂದ ಈ ವ್ಯಾಪ್ತಿಯ ಶಾಲೆಗೆ ಭೇಟಿ ನೀಡಲು ಸಾಧ್ಯವಾಗಿಲ್ಲ ಎಂದು ಶಿಕ್ಷಣಾಧಿಕಾರಿ ಸಮಜಾಯಿಷಿಕೆ ನೀಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಕಾರ್ಯನಿರ್ವಾಹಕ ಅಧಿಕಾರಿ ವಿಕೋಪದಿಂದ ತೊಂದರೆಗೆ ಒಳಗಾದ 72 ಶಾಲೆಗಳ ಪಟ್ಟಿ ತಯಾರಿಸಲಾಗಿದೆ, ಶೀಘ್ರದಲ್ಲಿಯೇ ಸಮಸ್ಯೆ ಬಗೆಹರಿಸುವದಾಗಿ ಹೇಳಿದರು.

ಸದಸ್ಯೆ ಉಮಾಪ್ರಭು ಕಿರುಂದಾಡು ಶಾಲೆಗೆ ಸೆ. 7 ರಂದು ಭೇಟಿ ನೀಡಿದ್ದೇವು. ಶಾಲೆಗೆ ಬೀಗ ಹಾಕಿತ್ತು. ಇದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು. ಈ ಬಗ್ಗೆ ಪರಿಶೀಲನೆ ನಡೆಸಲು ಶಿಕ್ಷಣಾಧಿಕಾರಿಗೆ ಕಾರ್ಯನಿರ್ವಾಹಕ ಅಧಿಕಾರಿ ಸೂಚಿಸಿದರು.

ಕೃಷಿ ಇಲಾಖೆಯ ಅಧಿಕಾರಿ ವಿಕೋಪದಿಂದ ಉಂಟಾದ ಪ್ರದೇಶದಲ್ಲಿ ಸರ್ವೇ ಕಾರ್ಯ ಪೂರ್ಣಗೊಂಡಿದೆ. ಇದಲ್ಲದೇ ನಾನಾ ಯೋಜನೆ ಮೂಲಕ ಸೌಲಭ್ಯವನ್ನು ಕೃಷಿಕರಿಗೆ ತಲಪಿಸಲು ಕ್ರಮ ವಹಿಸಲಾಗುತ್ತಿದೆ ಎಂದರು.

ತೋಟಗಾರಿಕೆ ಇಲಾಖೆಯ ಅಧಿಕಾರಿ ಕೃಷಿಕರಿಗೆ ಈ ಬಾರಿ ಗಿಡಗಳನ್ನು ವಿತರಿಸಲಾಗುತ್ತಿದೆ. ಇದರೊಂದಿಗೆ ಶಾಲೆಗಳಿಗೆ, ಕಚೇರಿಗಳಿಗೆ ಅಲಂಕಾರಿಕ ಗಿಡಗಳನ್ನು ಪೂರೈಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಮೀನುಗಾರಿಕೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಆಯುಷ್, ಅಕ್ಷರ ದಾಸೋಹ, ಆಹಾರ, ಆರೋಗ್ಯ, ಸಾಮಾಜಿಕ ಅರಣ್ಯ, ಸಹಕಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಯೋಜನೆಯ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ತಾ.ಪಂ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೊಡಪಾಲು ಗಣಪತಿ, ತಾ.ಪಂ. ಸದಸ್ಯರು, ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.