ಕುಶಾಲನಗರ, ಸೆ. 17: ಸರಕಾರಿ ಅಧಿಕಾರಿಯೊಬ್ಬರಿಂದ ಹಣದ ಬೇಡಿಕೆಯೊಂದಿಗೆ ಕೊಲೆ ಬೆದರಿಕೆ ಆರೋಪ ಪ್ರಕರಣದಲ್ಲಿ ಭಾಗಿಯಾದ ಸೋಮವಾರಪೇಟೆ ಲೋಕೋಪಯೋಗಿ ಕಚೇರಿಯ ನೌಕರ ಧರ್ಮಲಿಂಗಂ ಕಳೆದ ಎರಡು ದಿನಗಳಿಂದ ಕರ್ತವ್ಯಕ್ಕೆ ಗೈರು ಹಾಜರಾಗಿರುವದು ತಿಳಿದುಬಂದಿದೆ.

ಕಚೇರಿ ಅಧಿಕಾರಿಗಳ ಸಂಪರ್ಕಕ್ಕೂ ದೊರಕದ ಹಿನ್ನಲೆಯಲ್ಲಿ ನೌಕರನ ಮೇಲೆ ಶಿಸ್ತು ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಧರ್ಮಲಿಂಗಂ ಕುಶಾಲನಗರದ ಕೃಷ್ಣ ಎಂಬವನೊಂದಿಗೆ ಶಾಮೀಲಾಗಿ ತನ್ನ ಕಚೇರಿಯ ಅಧಿಕಾರಿ ರಾಮಣ್ಣಗೌಡ ಎಂಬವರಿಗೆ ಕಿರುಕುಳ ನೀಡಲು ಕುಮ್ಮಕ್ಕು ನೀಡುತ್ತಿರುವ ಬಗ್ಗೆ ದೂರಿನ ಹಿನ್ನಲೆಯಲ್ಲಿ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕಾವಲುಪಡೆ ಜಿಲ್ಲಾಧ್ಯಕ್ಷ ಎಂ. ಕೃಷ್ಣ ಎಂಬಾತನನ್ನು ಪೊಲೀಸರು ಈಗಾಗಲೆ ಬಂಧಿಸಿ ಕ್ರಮಕೈಗೊಂಡಿದ್ದು ಈ ಮಾಹಿತಿ ಬೆನ್ನಲ್ಲೇ ಧರ್ಮಲಿಂಗಂ ಕಚೇರಿಗೆ ಗೈರು ಹಾಜರಾಗುವದರೊಂದಿಗೆ ಅಧಿಕಾರಿಗಳಿಗೆ ನಾಟ್ ರೀಚೆಬಲ್ ಆಗಿರುವದು ತಿಳಿದು ಬಂದಿದೆ.