ಕೂಡಿಗೆ, ಸೆ. 17: ಹಾರಂಗಿ ಉಪಠಾಣೆಯ ಪೇದೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು, ಈ ಬಗ್ಗೆ ಸಂಬಂಧಪಟ್ಟವರು ಕ್ರಮಕೈಗೊಳ್ಳ ಬೇಕು ಎಂದು ಹಾರಂಗಿ ಗ್ರಾಮಸ್ಥರು ಆಗ್ರಸಿದ್ದಾರೆ.

ಹಾರಂಗಿಯ ಉಪಠಾಣೆ ಬಳಿ ಜಮಾಯಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಹಾರಂಗಿ ಗ್ರಾಮಸ್ಥರು, ಕೆಲವು ದಿನಗಳ ಹಿಂದೆ ಹಾರಂಗಿಯ ಉಪಠಾಣೆಯ ಮುಖ್ಯ ಪೇದೆಯ ಬಗ್ಗೆ ಸುಳ್ಳು ಮಾಹಿತಿಯನ್ನು ಹಬ್ಬಿಸುತ್ತಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ಸಂದರ್ಭ ಮಾತನಾಡಿದ ಸ್ಥಳೀಯ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಮಂಜು, ವೈಯಕ್ತಿಕ ದ್ವೇಷ ಸಾಧನೆಗಾಗಿ ಸ್ಥಳೀಯ ಪೇದೆಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಹಾರಂಗಿಯ ಮುಖ್ಯ ಪೇದೆಯನ್ನು ತೇಜೋವಧೆ ಮಾಡಿದ್ದಾರೆ. ಪೇದೆಯು ಪ್ರಾಮಾಣಿಕತೆ ಯಿಂದ ಹಾಗೂ ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಈ ವ್ಯಾಪ್ತಿಯಲ್ಲಿ ಅಪರಾಧಗಳ ಸಂಖ್ಯೆ ಕೂಡಾ ಕಡಿಮೆಯಾಗಿದೆ. ಆದ್ದರಿಂದ ಪೊಲೀಸ್ ವರಿಷ್ಠಾಧಿಕಾರಿಗಳು ಆರೋಪಗಳಿಗೆ ಗಮನಹರಿಸದೇ ಪೇದೆಯನ್ನು ಹಾರಂಗಿ ಉಪಠಾಣೆ ಯಲ್ಲಿ ಕಾರ್ಯನಿರ್ವ ಹಿಸಲು ಅನುವು ಮಾಡಿಕೊಡಬೇಕು ಎಂದರು.

ಕೂಡುಮಂಗಳೂರು ಗ್ರಾ.ಪಂ ಸದಸ್ಯ ಶ್ರೀನಿವಾಸ್ ಮಾತನಾಡಿ, ಕರ್ತವ್ಯ ನಿಷ್ಠೆಯಿಂದ ಕಾರ್ಯನಿರ್ವ ಹಿಸುತ್ತಿರುವ ಹಾರಂಗಿ ಉಪಠಾಣೆಯ ಬಗ್ಗೆ ಇಲ್ಲಿನ ಕೆಲವು ಕಿಡಿಗೇಡಿಗಳು ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸಿದ್ದು, ಇವರ ವಿರುದ್ಧ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕ್ರಮಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಗ್ರಾಮಸ್ಥರು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಚ್ಚರಿಸಿದರು.

ಈ ಸಂದರ್ಭ ಗ್ರಾಮಸ್ಥರಾದ ಅಪ್ಪಾಜಿ, ಮಂಜು, ರಘು, ರಜಾಕ್, ಬಾಬು, ಸಂತೋಷ್, ರವಿ ಹಾಗೂ ಎಡವನಾಡು, ರಾಮನಹಳ್ಳಿ ಹಾಗೂ ಅತ್ತೂರು ವ್ಯಾಪ್ತಿಯ ಗ್ರಾಮಸ್ಥರು ಹಾಜರಿದ್ದರು.