ಮಡಿಕೇರಿ, ಸೆ.16: “ಎಲ್ಲರ ಸಹಕಾರ ಪಡೆದು ಕೆಲಸ ಮಾಡುವೆ, ಮಳೆ ಸಂತ್ರಸ್ತರ ಪುನರ್ವಸತಿಗೆ ಆದ್ಯತೆ ನೀಡುವೆ”- ಹೀಗೆಂದು ಮುಕ್ತ ನುಡಿಯಾಡಿದವರು ರಾಜ್ಯದ ವಸತಿ ಸಚಿವ ವಿ. ಸೋಮಣ್ಣ ಅವರು. ಇಂದು ಅವರು ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಹಾಗೂ ಕೊಡಗು ಜಿಲ್ಲೆಯ ಅಧಿಕ ಪ್ರಬಾರ ಸಚಿವರಾಗಿ ಮುಖ್ಯಮಂತ್ರಿಯವರಿಂದ ನೇಮಕಗೊಂಡ ಬಳಿಕ “ಶಕ್ತಿ” ಯೊಂದಿಗೆ ಮಾತನಾಡಿದರು.ನಾನು ಇದೀಗ ಮೈಸೂರು ದಸರಾ ಜವಾಬ್ದಾರಿಕೆ ವಹಿಸಿಕೊಂಡಿ ದ್ದೇನೆ. ದಸರಾ ದಿನವಾದ ಅ. 8 ರಂದು ಅದರ ಹೊಣೆ ಮುಗಿದ ಬಳಿಕ ಕೊಡಗು ಜಿಲ್ಲೆಗೆ ಬರುತ್ತೇನೆ. ನನಗೆ ಆತ್ಮೀಯರಾಗಿರುವ ಯಂ.ಸಿ.ನಾಣಯ್ಯ ಅವರಿದ್ದಾರೆ. ಅದೇ ರೀತಿ ಇಬ್ಬರು ಶಾಸಕ ಮಿತ್ರರಾದ ಕೆ.ಜಿ.ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಇದ್ದಾರೆ. ವಿಧಾನ ಪರಿಷತ್ ಸದಸ್ಯರುಗಳಾದ ಸುನಿಲ್ ಸುಬ್ರಮಣಿ ಹಾಗೂ ವೀಣಾ ಅಚ್ಚಯ್ಯ ಹಾಗೂ ಸಂಸದರಾದ ಪ್ರತಾಪ್ ಸಿಂಹ ಅವರಿದ್ದಾರೆ. ಅಲ್ಲದೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು ಮತ್ತಿತರ ಪ್ರಮುಖರನ್ನೂ ಒಳಗೊಂಡು ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ. ಈ ಹಿಂದೆ ಕುಮಾರಸ್ವಾಮಿಯವರು ಪರಿಹಾರ ಕಾರ್ಯಗಳನ್ನು ನಡೆಸುವದಾಗಿ ಮಾತಿನಲ್ಲಿ ಮಾತ್ರ ಹೇಳಿದ್ದರು. ಆದರೆ, ನಾನು ನೈಜವಾಗಿ ಆಗಬೇಕಾದ ಕೆಲಸಗಳನ್ನು ಕೇವಲ ಮಾತಿನಲ್ಲಿ ಅಲ್ಲ, ಕೃತಿಯಲ್ಲಿ ಪ್ರಾಯೋಗಿಕವಾಗಿ ಕಾರ್ಯಗತಗೊಳಿಸಲು ಶ್ರಮಿಸುತ್ತೇನೆ ಎಂದು ಸಚಿವ ಸೋಮಣ್ಣ ಮೊಬೈಲ್ ಮೂಲಕ ಜಿಲ್ಲೆಯ ಜನರಿಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.