ಗೋಣಿಕೊಪ್ಪ ವರದಿ, ಸೆ. 17: ಕನ್ನಡಕ್ಕೆ ಕೊಡವ ಭಾಷಾ ಸಾಹಿತ್ಯ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದ್ದು, ಕೊಡವ ಭಾಷೆಯ ‘ಪಟ್ಟೋಲೆ ಪಳಮೆ’ ಕೃತಿ ದೇಶದ ಪ್ರಥಮ ಕನ್ನಡ ಸಾಹಿತ್ಯ, ಜಾನಪದ ಸಂಗ್ರಹ ಕೃತಿಯಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಅಡ್ಡಂಡ ಕಾರ್ಯಪ್ಪ ಬಣ್ಣಿಸಿದರು.

ಪೊನ್ನಂಪೇಟೆ ಸಾಮಥ್ರ್ಯಸೌಧ ಸಭಾಂಗಣದಲ್ಲಿ ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನೂತನ ಘಟಕ ಉದ್ಘಾಟನೆ ಮತ್ತು ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಭಾಷೆ, ಸಾಹಿತ್ಯಕ್ಕೆ ಕೊಡಗು ಜಿಲ್ಲೆ ಕಾಣಿಕೆ ಹಿಂದಿನಿಂದಲೂ ನೀಡಿದೆ. ಕನ್ನಡ ಲಿಪಿ ಬಳಕೆ ಮಾಡಿಕೊಂಡು ಕನ್ನಡವನ್ನು ಪೋಷಣೆ ಮಾಡುತ್ತಿದೆ. 1934 ರಲ್ಲಿ ಮೊದಲ ಬಾರಿಗೆ ಗರಕೀಯ ಎಂಬ ಕನ್ನಡ ಹಾಡು ದೇಶದಲ್ಲಿಯೇ ಮೊದಲ ಲಿಖಿತ ಜಾನಪದ ಸಾಹಿತ್ಯ ಕೃತಿ ಎಂದು ಬಿಂಬಿಸಲ್ಪಟ್ಟು ಎಲ್ಲಾರೂ ನಂಬುವಂತೆ ಆಗಿತ್ತು. ಆದರೆ, 1924 ರಲ್ಲಿ ಕೊಡವ ಭಾಷೆಯಲ್ಲಿ ನಡಿಕೇರಿಯಂಡ ಚಿಣ್ಣಪ್ಪ ಅವರು ಜಾನಪದ ಹಾಡು, ನಾಟಕ, ಸಂಸ್ಕøತಿ, ಆಚಾರ-ವಿಚಾರಗಳನ್ನು ಒಂದು ಗೂಡಿಸಿ ಪುಸ್ತಕ ರೂಪದಲ್ಲಿ ಹೊರ ತಂದಿರುವ ‘ಪಟ್ಟೋಲೆ ಪಳಮೆ’ ಎಂಬ ಕೃತಿ ದೇಶದ ಪ್ರಥಮ ಕನ್ನಡ ಸಾಹಿತ್ಯ, ಜಾನಪದ ಸಂಗ್ರಹ ಕೃತಿಯಾಗಿದೆ. ಗರಕೀಯ ಹಾಡು ಕೃತಿಗಿಂತಲೂ 10 ವರ್ಷದ ಹಿಂದೆಯೇ ಪಟ್ಟೋಲೆ ಪಳಮೆ ಸಾಹಿತ್ಯ ಕೃತಿಯಾಗಿ ಹೊರ ಬಂದಿದೆ. ಇದು ಕನ್ನಡ ಭಾಷೆಗೆ ಕೊಡಗು ನೀಡಿರುವ ದೊಡ್ಡ ಕೊಡುಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಹಿತ್ಯ ಹಿನ್ನೆಲೆ ಇಲ್ಲದ ಕನ್ನಡ ಭಾಷಾ ಪ್ರೇಮಿಗಳು ಕೂಡ ಕನ್ನಡ ಸಾಹಿತ್ಯ ಪರಿಷತ್ತು ಮೂಲಕ ತೊಡಗಿಕೊಂಡಿರುವದರಿಂದ ಕನ್ನಡ ಬೆಳವಣಿಗೆ ಹೆಚ್ಚಾಗುತ್ತಿದೆ. ಸರ್ಕಾರವು ಕನ್ನಡ ಸಾಹಿತ್ಯ ಪರಿಷತ್ತು ಬದಲಾಗಿ ‘ಕನ್ನಡ ನುಡಿ ಪರಿಷತ್ತು’ ಎಂದು ಮರು ನಾಮಕರಣ ಮಾಡಬೇಕು ಎಂದು ಈ ಸಂದರ್ಭ ಅವರು ಒತ್ತಾಯಿಸಿದರು.

ಪೊನ್ನಂಪೇಟೆ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ ಮಾತನಾಡಿ, ಕನ್ನಡ ಭಾಷೆ ಅಪಾಯದ ಮಟ್ಟ ಮೀರಿರುವದು ಬೇಸರದ ಸಂಗತಿಯಾಗಿದೆ. ಒಂದು ದೇಶ, ಒಂದು ಭಾಷೆ ಎಂದು ಹಿಂದಿ ಭಾಷೆಯನ್ನು ಹೇರುತ್ತಿರುವದು ಸರಿಯಾದ ನಡೆಯಲ್ಲ. ಇದನ್ನು ಪ್ರತೀ ಕನ್ನಡಿಗರು ವಿರೋಧಿಸಬೇಕಿದೆ ಎಂದು ಕರೆಯಿತ್ತರು.

ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ಸಾಹಿತ್ಯ ಪರಿಷತ್ತು ಘಟಕ ಉದ್ಘಾಟಿಸುವ ಮೂಲಕ ಸರ್ಕಾರ ವನ್ನು ಚುರುಕುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ಹೇಳಿದರು. ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಡಾ. ಕೆ. ಎನ್. ಚಂದ್ರಶೇಖರ್ ಅವರು ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಅವರಿಂದ ಧ್ವಜ ಸ್ವೀಕರಿಸುವ ಮೂಲಕ ಅಧಿಕಾರ ಪಡೆದುಕೊಂಡರು. ಈ ಸಂದರ್ಭ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ, ತಾಲೂಕು ಹೋರಾಟದಲ್ಲಿ ಪಾಲ್ಗೊಂಡ ಪ್ರಮುಖರಿಗೆ ಸಾಂಕೇತಿಕ ಸನ್ಮಾನ ನಡೆಯಿತು.

ನೂತನ ಪದಾಧಿಕಾರಿಗಳಿಗೆ ಕನ್ನಡದ ಶಾಲು ಹೊದಿಸುವ ಮೂಲಕ ಗಣ್ಯರು ಅಧಿಕಾರ ನೀಡಿದರು. ಅಧ್ಯಕ್ಷ ಡಾ. ಕೆ. ಎನ್. ಚಂದ್ರಶೇಖರ್, ಗೌ. ಕಾರ್ಯದರ್ಶಿ ಸುಮಿ ಸುಬ್ಬಯ್ಯ, ಶೀಲಾ ಬೋಪಣ್ಣ, ನಿರ್ದೇಶಕರಾದ ಟಿ. ಎಸ್. ಹೇಮಾವತಿ, ಡಾ. ಆನಂದ ಕಾರ್ಲ, ಡಾ. ಜಡೇಯ ಗೌಡ, ಅನಂತಕೃಷ್ಣ, ಪ್ರಮೋದ್‍ಕಾಮತ್, ಕಾಡ್ಯಮಾಡ ಪ್ರಕಾಶ್ ಮೊಣ್ಣಪ್ಪ, ಸಣ್ಣುವಂಡ ಕಿಶೋರ್ ನಾಚಪ್ಪ, ನೂರೇರ ರತಿ ಅಚ್ಚಪ್ಪ ಅಧಿಕಾರ ಪಡೆದುಕೊಂಡರು.

ಗೌರವ : ಪೊನ್ನಂಪೇಟೆ ತಾಲೂಕು ಹೋರಾಟದಲ್ಲಿ ಪಾಲ್ಗೊಂಡ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರನ್ನು ಈ ಸಂದರ್ಭ ಸಾಂಕೇತಿಕವಾಗಿ ಸನ್ಮಾನಿಸಲಾಯಿತು. ಪೊನ್ನಂಪೇಟೆ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ, ಪ್ರಮುಖರಾದ ಮೂಕಳೇರ ಕುಶಾಲಪ್ಪ, ಪೊಕ್ಕಳಿಚಂಡ ಪೂಣಚ್ಚ, ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಆಲೀರ ಎರ್ಮುಹಾಜಿ, ಸೆಲ್ವರಾಜ್ ಪಿಳ್ಳೈ, ಕಾಳಿಮಾಡ ಮೋಟಯ್ಯ, ಅಡ್ಡಂಡ ಕಾರ್ಯಪ್ಪ, ಚೆಪ್ಪುಡೀರ ಪೊನ್ನಪ್ಪ ಸನ್ಮಾನ ಸ್ವೀಕರಿಸಿದರು.

ಈ ಸಂದರ್ಭ ಹಿರಿಯರಾದ ಡಾ. ಶಿವಪ್ಪ, ಗೋಣಿಕೊಪ್ಪ ರೋಟರಿ ಕ್ಲಬ್ ಅಧ್ಯಕ್ಷ ಕಾಡ್ಯಮಾಡ ನೆವೀನ್, ಖಜಾಂಜಿ ಅಜ್ಜಿಕುಟ್ಟೀರ ಚಂಗಪ್ಪ, ಪೊನ್ನಂಪೇಟೆ ಹೋಬಳಿ ಮಾಜಿ ಅಧ್ಯಕ್ಷ ಬಿ. ಎನ್. ಪ್ರಕಾಶ್, ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೂಕಳೇರ ಸಮಿತಾ ಗಣೇಶ್, ಪ್ರಮುಖರಾದ ದಾದು ಪೂವಯ್ಯ, ಅನಿತಾ ಕಾರ್ಯಪ್ಪ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಡಾ. ಶಿವಪ್ಪ ಅವರು ಭಾರತ ಜನನಿಯ ತನುಜಾತೆ ಗೀತೆ ಮೂಲಕ ಪ್ರಾರ್ಥಿಸಿದರು. ಸುಮಿ ಸುಬ್ಬಯ್ಯ ವಂದಿಸಿ, ಶೀಲಾ ಬೋಪಣ್ಣ ನಿರೂಪಿಸಿ, ಅನಂತಕೃಷ್ಣ ಸ್ವಾಗತಿಸಿದರು. -ಸುದ್ದಿಪುತ್ರ