ಕೂಡಿಗೆ, ಸೆ. 17: ಸಮೀಪದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನವಗ್ರಾಮ ಅಂಗನವಾಡಿ ಕೇಂದ್ರದ ಶಿಕ್ಷಕಿ ಮತ್ತು ಸಹಾಯಕಿಯರ ಕಿತ್ತಾಟದಿಂದ ಅಂಗನವಾಡಿಗೆ ಬರುವ ಮಕ್ಕಳು ಬಲಿಪಶುಗಳಾಗಿರುವ ಘಟನೆ ನಡೆದಿದೆ.
ಅಂಗನವಾಡಿ ಸಹಾಯಕಿಯಾಗಿ ಕೆ.ಎ.ಶಾಂತ ಅವರನ್ನು ನಿಯೋಜನೆ ಮಾಡಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಆದೇಶಿಸಿ, ನಿಯೋಜನಾ ಪತ್ರವನ್ನು ಕಳುಹಿಸಿದ್ದರು. ಕೂಡ್ಲೂರು ಬಳಿಯ ನವಗ್ರಾಮದಲ್ಲಿ ಅಂಗನವಾಡಿ ಕೇಂದ್ರಕ್ಕೆ ನಿಯೋಜನೆಗೊಂಡಿರುವ ಕೇಂದ್ರದ ಸಹಾಯಕಿ ಶಾಂತ ಅವರು ಸೋಮವಾರ ಬೆಳಿಗ್ಗೆ ಕರ್ತವ್ಯಕ್ಕೆ ಹೋದ ಸಂದರ್ಭ ಕೇಂದ್ರಕ್ಕೆ ಬೀಗ ಹಾಕಲಾಗಿತ್ತು. ಇದರಿಂದ ಬೇಸರಗೊಂಡ ಅಂಗನವಾಡಿ ಸಹಾಯಕಿ ಶಾಂತ ಅಧಿಕಾರಿಗಳು ಕಳುಹಿಸಿದ ಆದೇಶ ಪತ್ರವನ್ನು ಕೈಯಲ್ಲಿ ಹಿಡಿದು ಕೇಂದ್ರದ ಮುಂಭಾಗದಲ್ಲಿ ಎರಡು ದಿನ ಪ್ರತಿಭಟನೆ ನಡೆಸಿದರು.
ಆ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿ ಇಲ್ಲದ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ಬೀಗ ಹಾಕಿ ಶಿಕ್ಷಕಿ ಕಲಾವತಿ ಮೇಲಧಿಕಾರಿಗಳು ನಡೆಸಿದ ಸಭೆಗೆ ಸೋಮವಾರಪೇಟೆಗೆ ತೆರಳಿದ್ದರು. ಈ ವೇಳೆಯಲ್ಲಿ ಅಂಗನವಾಡಿಗೆ ಬಂದ ನಿಯೋಜಿತಗೊಂಡಿದ್ದ ಕೆ.ಎ.ಶಾಂತ ಅವರು ಹಿಂದಿನ ಶಿಕ್ಷಕಿಯೊಂದಿಗಿದ್ದ ವೈಮನಸ್ಯದಿಂದ ಶಿಕ್ಷಕಿಯು ಉದ್ದೇಶಪೂರ್ವಕವಾಗಿಯೇ ಕೇಂದ್ರಕ್ಕೆ ಬೀಗ ಜಡಿದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.
ಈ ಹಿಂದೆ ನವಗ್ರಾಮ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಶಾಂತ ಕೂಡ್ಲೂರು ಅಂಗನವಾಡಿ ಕೇಂದ್ರಕ್ಕೆ ವರ್ಗಾವಣೆಗೊಂಡಿದ್ದರು. ಇದೀಗ ಮತ್ತೆ ಶಾಂತ ಅವರನ್ನು ನವಗ್ರಾಮ ಅಂಗನವಾಡಿ ಕೇಂದ್ರಕ್ಕೆ ವರ್ಗಾವಣೆ ಮಾಡಿ ಅಧಿಕಾರಿಗಳು ಆದೇಶಿಸಿದ್ದಾರೆ. ಈ ಹಿಂದೆ ಈ ಅಂಗನವಾಡಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಾಗಿನಿಂದಲೂ ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿಯ ಮಧ್ಯೆ ಹೊಂದಾಣಿಕೆಯ ಕೊರತೆಯಿದೆ ಎಂದು ಜನವಲಯದಲ್ಲಿ ಕೇಳಿಬರುತ್ತಿದೆ.
ಮಂಗಳವಾರವು ಕೂಡಾ ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ ಇಬ್ಬರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈ ಸಂದರ್ಭ ಸ್ಥಳಕ್ಕೆ ಜಮಾಯಿಸಿದ ಗ್ರಾಮಸ್ಥರು ಸಹಾಯಕಿ ಶಾಂತ ಅವರು ಈ ಅಂಗನವಾಡಿಯಲ್ಲಿ ಕಾರ್ಯನಿರ್ವಹಿಸಿದರೆ, ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುವದಿಲ್ಲ ಎಂದು ಮೇಲಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಈ ಸಂದರ್ಭ ಗ್ರಾಮಸ್ಥರ ಮತ್ತು ಸಹಾಯಕಿ ಶಾಂತ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತವೂ ತಲಪಿತ್ತು. ವಿಷಯ ತಿಳಿದ ಅಧಿಕಾರಿ ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರ ಮತ್ತು ಸಹಾಯಕಿ ಅವರಿಂದ ಮಾಹಿತಿ ಪಡೆದರು. ನಂತರ ಸ್ಥಳೀಯ ಗ್ರಾಮಸ್ಥರು ಸಹಾಯಕಿಯನ್ನು ಈ ಕೇಂದ್ರಕ್ಕೆ ನೇಮಕಗೊಳಿಸಿದಲ್ಲಿ ಈಗಾಗಲೇ ಅಂಗನವಾಡಿಗೆ ಹೋಗುತ್ತಿರುವ ಹತ್ತು ಮಕ್ಕಳನ್ನು ಸಹ ನಾವು ಕಳುಹಿಸುವದಿಲ್ಲ. ಸಹಾಯಕಿಯ ನಿಯೋಜನೆಯಲ್ಲಿ ಬದಲೀ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಮಹೇಶ್ ಅವರನ್ನು ಸುದ್ದಿಗಾರರು ಮಾತನಾಡಿಸಿದಾಗ ಸಂಬಂಧಪಟ್ಟ ವಿಚಾರವನ್ನು ಜಿಲ್ಲಾ ಮಟ್ಟದ ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ವರದಿ ಕಳುಹಿಸುತ್ತೇವೆ. ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ತಾಲೂಕು ಅಧಿಕಾರಿಗಳಿಂದ ಮಾಹಿತಿ ಪಡೆದು ಗ್ರಾಮಕ್ಕೆ ಅನುಕೂಲವಾಗುವ ರೀತಿಯಲ್ಲಿ ಕ್ರಮಕೈಗೊಳ್ಳುವದಾಗಿ ತಿಳಿಸಿದರು.