ಸೋಮವಾರಪೇಟೆ, ಸೆ. 16: ಕಳೆದ 2018ರ ಆಗಸ್ಟ್‍ನಲ್ಲಿ ಸಂಭವಿಸಿದ ಭೂಕುಸಿತ ಸಂಭವಿಸಿದ ಮಾದಾಪುರ ಪಟ್ಟಣದ ಗುಡ್ಡ ಪ್ರದೇಶದಲ್ಲಿ ಟಾ ಟಾ ಕಾಫಿ ಸಂಸ್ಥೆಯ ಜಂಬೂರು ಎಸ್ಟೇಟ್ ವತಿಯಿಂದ ವೆಟಿವೆರ್ ಹುಲ್ಲು ನಾಟಿ ಮಾಡಲಾಯಿತು. ಮಣ್ಣಿನ ಸವೆಕಳಿ-ಕೊರೆತವನ್ನು ತಡೆಗಟ್ಟುವ ನಿಟ್ಟಿನಲ್ಲಿ ವೆಟಿವೆರ್ ಹುಲ್ಲುಗಳು ಪರಿಣಾಮಕಾರಿಯಾಗಿದ್ದು, ಈ ಹಿನ್ನೆಲೆ ಗುಡ್ಡ ಕುಸಿದಿರುವ ಪ್ರದೇಶದಲ್ಲಿ ಹುಲ್ಲುಗಳನ್ನು ನಾಟಿ ಮಾಡಲಾಗುತ್ತಿದೆ ಎಂದು ಜಂಬೂರು ಎಸ್ಟೇಟ್‍ನ ಪ್ರಧಾನ ವ್ಯವಸ್ಥಾಪಕ ದಿಲೀಪ್‍ಕುಮಾರ್ ಸಿಂಗ್ ತಿಳಿಸಿದರು. ಕಳೆದ ಸಾಲಿನ ಭೂಕುಸಿತದಿಂದ ಭಾರಿ ಪ್ರಮಾಣದಲ್ಲಿ ಮಣ್ಣು ಜರುಗಿದ್ದು, ನಂತರ ಜೆಸಿಬಿ ಯಂತ್ರಗಳ ಮೂಲಕ ಮಣ್ಣನ್ನು ತೆರವುಗೊಳಿಸಲಾಗಿತ್ತು. ಪ್ರಸಕ್ತ ವರ್ಷದ ಮಳೆಗೆ ಗುಡ್ಡದಲ್ಲಿ ಮಣ್ಣಿನ ಕೊರೆತ ಉಂಟಾಗಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಸ್ಟೇಟ್‍ನ ಕಾರ್ಮಿಕರು ವೆಟಿವೆರ್ ಹುಲ್ಲನ್ನು ನೆಟ್ಟರು. ಸಹಾಯಕ ವ್ಯವಸ್ಥಾಪಕ ಅಮಿತ್ ಪೊನ್ನಣ್ಣ, ಸಿಬ್ಬಂದಿಗಳಾದ ಹೆಚ್.ಬಿ. ಮಧು, ಬಿದ್ದಪ್ಪ, ಎಂ.ಎನ್. ಸುರೇಶ್, ಪಿ.ಬಿ. ಅಪ್ಪಣ್ಣ, ಪೃಥ್ವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.