ಕುಶಾಲನಗರ, ಸೆ. 17: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕೊಡಗು ಜಿಲ್ಲಾ ಘಟಕದ ಸರ್ವ ಸದಸ್ಯರ ಸಭೆ ಪಿರಿಯಾಪಟ್ಟಣದಲ್ಲಿ ನಡೆಯಿತು. ಪಿರಿಯಾಪಟ್ಟಣ ರೋಟರಿ ಸಭಾಂಗಣದಲ್ಲಿ ವೇದಿಕೆಯ ಅಧ್ಯಕ್ಷÀ ಬಾನಂಗಡ ಅರುಣ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಸ್ತುತ ವರ್ಷದಲ್ಲಿ ನಡೆದ ಕಾರ್ಯಕ್ರಮಗಳ ಬಗ್ಗೆ ಹಾಗೂ ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಯಿತು. ಅರಕಲಗೂಡಿನಲ್ಲಿ ಅಕ್ಟೋಬರ್ 2 ರಂದು ವೇದಿಕೆಯ ವತಿಯಿಂದ ಗಾಂಧಿ ಜಯಂತಿ ಕಾರ್ಯಕ್ರಮ ನಡೆಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ವೇದಿಕೆಯ ರಾಜ್ಯ ಘಟಕದ ನಿರ್ಣಯಗಳು ಮತ್ತು 2018-19ನೇ ಸಾಲಿನ ಜಮಾ ಖರ್ಚುಗಳ ಬಗ್ಗೆ ಕಾರ್ಯದರ್ಶಿ ಯೋಗೀಶ್ ಅವರು ಮಾಹಿತಿ ನೀಡಿದರು. ಸಭೆಯಲ್ಲಿ 2019-21 ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆದು ಸತೀಶ್ ಹೊನ್ನವಳ್ಳಿ ಅಧ್ಯಕ್ಷರಾಗಿ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಕುಶಾಲನಗರದ ಎಂ.ಎನ್. ಚಂದ್ರಮೋಹನ್, ಮಡಿಕೇರಿಯ ಧನಂಜಯ, ಪಿರಿಯಾಪಟ್ಟಣದ ದೇವರಾಜ್ ಅವರುಗಳನ್ನು ಆಯ್ಕೆ ಮಾಡಲಾಯಿತು. ಕೋಶಾಧಿಕಾರಿಯಾಗಿ ಎ.ಟಿ.ಆರ್. ರಂಗಸ್ವಾಮಿ, ಕಾರ್ಯದರ್ಶಿಯಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕರಾದ ಯೋಗೇಶ್ ಅವರನ್ನು ನೇಮಿಸಲಾಯಿತು.
ನಿರ್ಗಮಿತ ಅಧ್ಯಕ್ಷ ಬಾನಂಗಡ ಅರುಣ್ ಮಾತನಾಡಿ, ಕಳೆದ ಎರಡು ವರ್ಷಗಳ ಕಾಲ ವೇದಿಕೆಯ ಮೂಲಕ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿರುವ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯ ಜಿಲ್ಲಾ ಸಂಸ್ಥಾಪಕ ಅಧ್ಯಕ್ಷ ಅಭಿಮನ್ಯುಕುಮಾರ್ ಉಪಸ್ಥಿತರಿದ್ದು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ನಿರ್ಗಮಿತ ಅಧ್ಯಕ್ಷ ಬಾನಂಗಡ ಅರುಣ್ ಅವರನ್ನು ವೇದಿಕೆ ಪರವಾಗಿ ನೂತನ ಅಧ್ಯಕ್ಷ ಸತೀಶ್ ಹೊನ್ನವಳ್ಳಿ ಸನ್ಮಾನಿಸಿ ಗೌರವಿಸಿದರು.
ಸಭೆಯಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆ, ಮಡಿಕೇರಿ, ವೀರಾಜಪೇಟೆ, ಹಾಸನ ಜಿಲ್ಲೆಯ ಅರಕಲಗೂಡು, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕು ವ್ಯಾಪ್ತಿಯ ಪದಾಧಿಕಾರಿಗಳು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಅಧಿಕಾರಿಗಳು ಇದ್ದರು. ಮಡಿಕೇರಿ ತಾಲೂಕು ಯೋಜನಾಧಿಕಾರಿ ಸದಾಶಿವಗೌಡ ಸ್ವಾಗತಿಸಿದರು, ಪಿರಿಯಾಪಟ್ಟಣ ತಾಲೂಕು ಯೋಜನಾಧಿಕಾರಿ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಅರಕಲಗೂಡು ತಾಲೂಕು ಯೋಜನಾಧಿಕಾರಿ ಜಯಂತಿ ವಂದಿಸಿದರು.