ಗೋಣಿಕೊಪ್ಪ ವರದಿ, ಸೆ. 16: ದಸರಾ ಸಾಂಸ್ಕøತಿಕ ವೇದಿಕೆ ನಿರ್ಮಿಸಲು ಪಾರದರ್ಶಕವಾಗಿ ನಡೆದುಕೊಳ್ಳಬೇಕು ಎಂದು ಕಾವೇರಿ ದಸರಾ ಸಮಿತಿ ಗೌರವ ಅಧ್ಯಕ್ಷ ಶಾಸಕ ಕೆ.ಜಿ. ಬೋಪಯ್ಯ ಸೂಚನೆ ನೀಡಿದರು.ಇಲ್ಲಿನ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ದಸರಾ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಸಾಂಸ್ಕøತಿಕ ವೇದಿಕೆ ನಿರ್ಮಿಸಲು ಟೆಂಡರ್ ಮೂಲಕವೇ ಮುಂದುವರಿಯಬೇಕು. ಪಾರದರ್ಶಕವಾಗಿ ನಿಯಮ ಪಾಲಿಸ ಬೇಕು ಎಂದು ಖಡಕ್ ಸೂಚನೆ ನೀಡಿದರು.ದಸರಾ ಆರಂಭಕ್ಕೂ ಮುನ್ನವೇ ಸರ್ಕಾರದ ಅನುದಾನ ದೊರೆಯುವ ಸಾಧ್ಯತೆ ಹೆಚ್ಚಿದೆ. ಅಚ್ಚುಕಟ್ಟಾಗಿ ದಸರಾ ಆಚರಣೆ ನಡೆಯಬೇಕಿದೆ. ವೀರಾಜ ಪೇಟೆ ತಾಲೂಕಿನಲ್ಲಿ ನೆರೆಯಿಂದ ಹೆಚ್ಚು ತೊಂದರೆ, ಸಾವು-ನೋವು ಉಂಟಾಗಿದೆ. ಇದರಿಂದಾಗಿ ಹೆಚ್ಚು ವಿಜೃಂಭಣೆ ಮಾಡದೆ, ಕಲೆ, ಸಾಂಸ್ಕøತಿಕ ಚಟುವಟಿಕೆಗೆ ಹೆಚ್ಚು ಒತ್ತು ನೀಡಬೇಕು ಎಂದು ತಿಳಿಸಿದರು.(ಮೊದಲ ಪುಟದಿಂದ) ತೇರು ಫಲಿತಾಂಶದಲ್ಲಿ ಹೆಚ್ಚು ಗೊಂದಲ, ವಿರೋಧ ಎದುರಿಸುವ ಪರಿಸ್ಥಿತಿ ಎದುರಾಗುತ್ತಿರುವದರಿಂದ ಮಂಟಪ ಸಮಿತಿಗಳು ಒಪ್ಪುವ ಒಬ್ಬ ಅಭ್ಯರ್ಥಿಯನ್ನು ತೀರ್ಪುಗಾರರ ತಂಡದಲ್ಲಿ ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸಿದರು.
ಮಹಿಳಾ ದಸರಾ ಸಮಿತಿಗೆ ಹೊಸದಾಗಿ ಆಯ್ಕೆ ನಡೆದಿರುವ ವ್ಯವಸ್ಥೆ ಸರಿಯಿಲ್ಲ ಎಂದು ಕಳೆದ ಬಾರಿಯ ಮಹಿಳಾ ದಸರಾ ಸಮಿತಿ ಮಂಜುಳಾ ಆರೋಪಿಸಿದರು. ಗೋಣಿಕೊಪ್ಪದ ಮಹಿಳೆಯರನ್ನು ಒಡೆಯುವ ಪ್ರಯತ್ನ ಮಾಡಬೇಡಿ ಎಂದು ಶಾಸಕರಿಗೆ ಮಂಜುಳ ಮನವಿ ಮಾಡಿಕೊಂಡರು. ನಾವು ಸಭೆ ನಡೆಸಿ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಆದರೆ, ಇಲ್ಲಿ ಕಾವೇರಿ ದಸರಾ ಸಮಿತಿಯೇ ಪ್ರತ್ಯೇಕವಾಗಿ ಆಯ್ಕೆ ಮಾಡಿಕೊಂಡಿರುವ ನಿಯಮ ಸರಿಯಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಬೋಪಯ್ಯ, ಎಲ್ಲರೂ ಸೇರಿಕೊಂಡು ಆಯ್ಕೆ ಮಾಡಿಕೊಳ್ಳಿ. ಉತ್ತಮವಾಗಿ ದಸರಾ ಆಚರಣೆ ನಡೆಯಲು ಅವಕಾಶ ಮಾಡಿಕೊಡಬೇಕು ಎಂದರು.
ಸಭೆಯಲ್ಲಿ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕೆ.ಜಿ. ರಾಮಕೃಷ್ಣ, ನಿರ್ಗಮಿತ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ. ಬೋಪಣ್ಣ ಉಪಸ್ಥಿತರಿದ್ದರು.