ಗೋಣಿಕೊಪ್ಪಲು, ಸೆ. 18: ದೇಶದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನಾಚರಣೆ ಪ್ರಯುಕ್ತ ವೀರಾಜಪೇಟೆ ತಾಲೂಕು ಸೇವಾ ಸಪ್ತಾಹದ ಸಂಚಾಲಕ ಹಾಗೂ ತಾಲೂಕು ಪಂಚಾಯ್ತಿ ಉಪಾಧ್ಯಕ್ಷ ನೆಲ್ಲಿರ ಚಲನ್ ಮುಂದಾಳತ್ವದಲ್ಲಿ ಗೋಣಿಕೊಪ್ಪಲುವಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರ ನಡೆಯಿತು.
ತಾಲೂಕಿನ ವಿವಿಧ ಭಾಗದಿಂದ ನೂರಾರು ಬಿಜೆಪಿ ಕಾರ್ಯಕರ್ತರು ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದರು. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮವನ್ನು ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಎಂ.ಎಲ್.ಸಿ. ಗಣೇಶ್ ಕಾರ್ಣಿಕ್ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೆ.ಜಿ. ಬೋಪಯ್ಯ ದೇಶದ ಪ್ರಧಾನಿ ತಮ್ಮ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳದೆ ಸೇವಾ ಸಪ್ತಾಹದ ಮೂಲಕ ಆಚರಿಸಲು ತೀರ್ಮಾನಿಸಿರುವದರಿಂದ ದೇಶದಲ್ಲೆಡೆ ಸೇವಾ ಕಾರ್ಯಕ್ರಮಗಳಾದ ಸ್ವಚ್ಛತಾ ಕಾರ್ಯಕ್ರಮ, ರಕ್ತದಾನ ಶಿಬಿರ, ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮುಂತಾದ ಕಾರ್ಯಕ್ರಮಗಳು ನಡೆಯುತ್ತಿವೆ. ಇದರಂತೆ ತಾಲೂಕು ಮಟ್ಟದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದ ಅವರು; ರಕ್ತದಾನ ಮಾಡುವದರಿಂದ ಪ್ರತಿ ವ್ಯಕ್ತಿಯು ಸದೃಢವಾಗಿರುತ್ತಾನೆ. ರಕ್ತದಾನ ಮಹಾದಾನ ಎಲ್ಲರು ರಕ್ತದಾನ ಮಾಡುವಂತೆ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಎಂಎಲ್‍ಸಿ ಗಣೇಶ್ ಕಾರ್ಣಿಕ್ ಮಾತನಾಡಿ ಪ್ರಧಾನಿ ಮೋದಿಯವರ ಭವ್ಯ ಭಾರತ ನಿರ್ಮಾಣದ ಕನಸು ನನಸಾಗಬೇಕು; ಆ ನಿಟ್ಟಿನಲ್ಲಿ ಮೋದಿ ಕೆಲಸ ನಿರ್ವಹಿಸುತ್ತಿದ್ದಾರೆ. ಎಂದರು. ತಾಲೂಕು ಪಂಚಾಯ್ತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ, ಜಿ.ಪಂ. ಸದಸ್ಯರಾದ ಅಪ್ಪಡೇರಂಡ ಭವ್ಯ, ಮೂಕೊಂಡ ಶಶಿ ಸುಬ್ರಮಣಿ, ತಾಲೂಕು ಪಂಚಾಯ್ತಿ ಸದಸ್ಯ ಜಯ ಪೂವಯ್ಯ, ಆರ್‍ಎಂಸಿ ಅಧ್ಯಕ್ಷ ವಿನು ಚಂಗಪ್ಪ, ಉಪಾಧ್ಯಕ್ಷ ಸುಬ್ರಮಣಿ, ಸದಸ್ಯ ಕಿಲನ್ ಗಣಪತಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ, ಬಿಜೆಪಿ ತಾಲೂಕು ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ಬಿಜೆಪಿ ಮುಖಂಡರಾದ ಪಟ್ರಪಂಡ ರಘು ನಾಣಯ್ಯ, ಗಿರೀಶ್ ಗಣಪತಿ, ಇ.ಸಿ. ಜೀವನ್. ಲಾಲಾ ಪೂಣಚ್ಚ, ನರಸಿಂಹ, ಚಂದ್ರಶೇಖರ್, ಚೆಪ್ಪುಡೀರ ಮಾಚು, ಕಂಬಿಯಂಡ ಗಣೇಶ್, ತಿತಿಮತಿ ಗ್ರಾ.ಪಂ. ಸದಸ್ಯ ಸಿದ್ದರಾಜು, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು, ಬಾಲಕೃಷ್ಣ ರೈ, ಜಿಲ್ಲಾ ಆಸ್ಪತ್ರೆಯ ಬ್ಲಡ್ ಬ್ಯಾಂಕ್‍ನ ವೈದ್ಯಾಧಿಕಾರಿ ಕರುಂಬಯ್ಯ, ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್, ಗೋಣಿಕೊಪ್ಪ ವೈದ್ಯಾಧಿಕಾರಿ ಡಾ.ಗ್ರೀಷ್ಮ, ಡಾ.ಸುರೇಶ್ ಸೇರಿದಂತೆ ಆನೇಕರು ಭಾಗವಹಿಸಿದ್ದರು. ಕಾರ್ಯಕ್ರಮದ ಆಯೋಜಕರಾದ ವೀರಾಜಪೇಟೆ ತಾಲೂಕು ಸೇವಾ ಸಪ್ತಾಹದ ಸಂಚಾಲಕ ನೆಲ್ಲಿರ ಚಲನ್ ಸ್ವಾಗತಿಸಿ, ವಂದಿಸಿದರು.
ಭಾಗಮಂಡಲ: ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬದ ಪ್ರಯುಕ್ತ ಮಡಿಕೇರಿ ತಾಲೂಕು ಸೇವಾ ಸಪ್ತಾಹ ಕಾರ್ಯಕ್ರಮವನ್ನ ಭಾಗಮಂಡಲ ಸರ್ಕಾರಿ ಪ್ರಾಥಮಿಕ ಅರೋಗ್ಯ ಕೇಂದ್ರದ ಮುಂಭಾಗ ಸ್ವಚ್ಛತಾ ಕಾರ್ಯ ಮಾಡುವ ಮೂಲಕ ಆಚರಿಸಲಾಯಿತು. ಈ ಸಂದರ್ಭ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ. ಹರೀಶ್, ಜಿಲ್ಲಾ ಸೇವಾ ಸಪ್ತಾಹದ ಸಂಚಾಲಕ ಮಹೇಶ್ ಜೈನಿ . ತಾಲೂಕು ಅಧ್ಯಕ್ಷ ತಳೂರ್ ಕಿಶೋರ್‍ಕುಮಾರ್, ಮಡಿಕೇರಿ ತಾಲೂಕು ಸಂಚಾಲಕ ಅಶ್ವಿನ್, ಸಹ ಸಂಚಾಲಕ ಭೀಮಯ್ಯ, ಜಿಲ್ಲಾ ಸಹ ಸಂಚಾಲಕಿ ಅನಿತಾ ಪೂವಯ್ಯ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕಾಳನ ರವಿ, ಮುಂತಾದವರಿದ್ದರು.
ನಾಪೋಕ್ಲು: ಮೋದಿ ಹುಟ್ಟು ಹಬ್ಬದ ಪ್ರಯುಕ್ತ ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ರೋಗಿಗಳಿಗೆ ಹಣ್ಣುಹಂಪಲುಗಳನ್ನು ವಿತರಿಸಲಾಯಿತು.