ಕುಶಾಲನಗರ, ಸೆ 16: ಗ್ರಾಹಕರಿಗೆ ಉತ್ತಮ ಸೇವೆ ಕಲ್ಪಿಸುವದರೊಂದಿಗೆ ಭಾರತ್ ಸಂಚಾರ್ ನಿಗಮ ಸಂಸ್ಥೆಯ ಉಳಿವಿಗೆ ಶ್ರಮಿಸುವದು ನೌಕರರ ಆದ್ಯ ಕರ್ತವ್ಯವಾಗಿದೆ ಎಂದು ನ್ಯಾಷನಲ್ ಫೆಡರೇಷನ್ ಆಫ್ ಟೆಲಿಕಾಂ ಎಂಪ್ಲಾಯೀಸ್‍ನ ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಎ. ರಾಜಶೇಖರಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ನೌಕರರ ಸಂಘಟನೆಗಳ ಮಾನ್ಯತೆಗಾಗಿ ನಡೆಯ ಲಿರುವ 8ನೇ ಸದಸ್ಯತ್ವ ಪರಿಶೀಲನೆ ಚುನಾವಣೆ ಹಿನ್ನೆಲೆ ಯಲ್ಲಿ ಕುಶಾಲನಗರದಲ್ಲಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿ ದರು. ಹಲವು ಕಾರಣಗಳಿಂದ ಬಿಎಸ್‍ಎನ್‍ಎಲ್ ಸಂಸ್ಥೆ ತನ್ನ ಅಸ್ತಿತ್ವ ವನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ ಎದುರಾಗಿದ್ದು ಎನ್‍ಎಫ್‍ಟಿಇ ಸಂಘಟನೆ ಬಿಎಸ್‍ಎನ್‍ಎಲ್ ಸಂಸ್ಥೆಯ ಉಳಿವಿಗಾಗಿ ಕಳೆದ ಹಲವು ವರ್ಷಗಳಿಂದ ಶ್ರಮಿಸುತ್ತಿದೆ. ತಮ್ಮ ನೌಕರರ ಶ್ರೇಯೋಭಿವೃದ್ಧಿ ಯೊಂದಿಗೆ ದೇಶದ ಹಿತ ಕಾಪಾಡು ವದು ಸಂಘಟನೆಯ ಪ್ರಮುಖ ಗುರಿ ಯಾಗಿದೆ ಎಂದ ಅವರು, ಇತ್ತೀಚಿನ ದಿನಗಳಲ್ಲಿ ನೌಕರರಿಗೆ ವೇತನ ಪಾವತಿಸಲು ವಿಳಂಬವಾಗುತ್ತಿರುವ ಧೋರಣೆಯನ್ನು ಖಂಡಿಸಿದರು.

ಬಿಎಸ್‍ಎನ್‍ಎಲ್ ನೌಕರರ ನೂತನ ವೇತನ ಆಯೋಗದ ವರದಿ ಅನುಷ್ಠಾನಗೊಳಿಸುವದು, 60 ರಿಂದ 58 ವರ್ಷಗಳಿಗೆ ನೌಕರರ ನಿವೃತ್ತಿ ವಯಸ್ಸು ಇಳಿಕೆಗೆ ವಿರೋಧ, ಕಡ್ಡಾಯ ಸ್ವಯಂ ನಿವೃತ್ತಿ ಯೋಜನೆ ಕೈಬಿಡುವಂತೆ ಆಗ್ರಹಿಸುವದು ಸೇರಿದಂತೆ ಹಲವು ಬೇಡಿಕೆಗಳನ್ನು ಎನ್‍ಎಫ್‍ಟಿಇ ಸಂಘಟನೆ ಸಂಸ್ಥೆಯ ಮುಂದಿಟ್ಟಿದೆ ಎಂದು ತಿಳಿಸಿದರು.

ಈ ಸಂದರ್ಭ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಖಲೀಲ್‍ಅಹ್ಮದ್, ಖಜಾಂಚಿ ಕೆ. ಎಸ್. ಕಾಂತರಾಜು, ಮಾಜಿ ಜಿಲ್ಲಾ ಕಾರ್ಯದರ್ಶಿ ವಿ. ಕೃಷ್ಣ ಇದ್ದರು.