ಸಿದ್ದಾಪುರ, ಸೆ. 16: ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ಹಾಗೂ ಗುಹ್ಯ ಗ್ರಾಮದ ಸಂತ್ರಸ್ತರಿಗೆ ಶಾಶ್ವತ ನಿವೇಶನವನ್ನು ಒದಗಿಸಬೇಕೆಂದು ಒತ್ತಾಯಿಸಿ ಸಿಪಿಐಎಂ ಪಕ್ಷದ ಕಾರ್ಯಕರ್ತರು ಸಿದ್ದಾಪುರದಲ್ಲಿ ಪ್ರತಿಭಟನೆ ನಡೆಸಿದರು.

ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ಗ್ರಾಮ ಪಂಚಾಯಿತಿ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ಜಿಲ್ಲಾಡಳಿತ ಹಾಗೂ ಗ್ರಾಮ ಪಂಚಾಯಿತಿ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ಗ್ರಾಮ ಸಮಿತಿ ಕಾರ್ಯದರ್ಶಿ ಎನ್.ಡಿ ಕುಟ್ಟಪ್ಪ ಮಾತನಾಡಿ, ಸಮೀಪದ ಎರಡು ಬೃಹತ್ ಖಾಸಗಿ ಸಂಸ್ಥೆ ಸೇರಿದಂತೆ ವಿವಿಧ ತೋಟಗಳ ಭೂ ಮಾಲೀಕರ ಬಳಿ ಬೇಕಾದಷ್ಟು ಸರಕಾರಿ ಭೂಮಿ ಇದ್ದು, ಇದನ್ನು ತೆರವುಗೊಳಿಸಬೇಕಾದ ಗ್ರಾಮ ಪಂಚಾಯಿತಿ ಕೈ ಕಟ್ಟಿ ಕುಳಿತಿದೆ ಎಂದು ದೂರಿದರು.

ಪಕ್ಷದ ಮುಖಂಡ ದುರ್ಗಾಪ್ರಸಾದ್ ಮಾತನಾಡಿ, ಶಾಶ್ವತ ಪರಿಹಾರ ನೀಡಿದರೆ ನದಿ ದಡದಿಂದ ತೆರಳುವದಾಗಿ ಕಳೆದ ವರ್ಷವೆ ಕರಡಿಗೋಡು ಭಾಗದ ನಿವಾಸಿಗಳು ಲಿಖಿತ ರೂಪದಲ್ಲಿ ತಿಳಿಸಿದ್ದರೂ ಸ್ಥಳೀಯ ಗ್ರಾಮ ಪಂಚಾಯಿತಿ ಯಾವದೇ ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವ ಪರಿಣಾಮ ಇದೀಗ ಮತ್ತೊಮ್ಮೆ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಶ್ರೀಮಂತರಿಂದ ಕೂಡಲೇ ತೆರವುಗೊಳಿಸಲು ಗ್ರಾಮ ಪಂಚಾಯಿತಿ ಮುಂದಾಗಬೇಕೆಂದು ಆಗ್ರಹಿಸಿದರು.

ಪಕ್ಷದ ಮುಖಂಡ ರಮೇಶ್ ಮಾತನಾಡಿ, ಕಳೆದ ಬಾರಿಯ ಗ್ರಾಮ ಸಭೆಯಲ್ಲಿ ಸಿದ್ದಾಪುರ ವ್ಯಾಪ್ತಿಯ ಪೈಸಾರಿ ಜಾಗದ ಬಗ್ಗೆ ಗ್ರಾಮ ಪಂಚಾಯಿತಿಗೆ ಮಾಹಿತಿಯನ್ನು ನೀಡಿದ್ದರು ಇದುವರೆಗೂ ಯಾವದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಮುಂದಿನ 10 ದಿನದೊಳಗೆ ಸೂಕ್ತ ಸ್ಪಂದನೆ ದೊರೆಯದಿದ್ದರೆ ಅಹೋರಾತ್ರಿ ಪ್ರತಿಭಟನೆ ನಡೆಸುವದಾಗಿ ಎಚ್ಚರಿಸಿದರು. ಬಳಿಕ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಪತ್ರವನ್ನು ನೀಡಿದರು.

ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ಮಾಹಿತಿ ನೀಡಿದರೂ ಮನವಿ ಪತ್ರ ಸ್ವೀಕರಿಸಲು ಬರಲಿಲ್ಲವೆಂದು ಅಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಪ್ರಮುಖರಾದ ಕೃಷ್ಣ, ಬೈಜು, ಸಿ.ಯು. ಮುಸ್ತಫ, ಸೈನುದ್ದೀನ್, ಅನಿಲ್ ಸೇರಿದಂತೆ ಮತ್ತಿತರರು ಇದ್ದರು.