ಸೋಮವಾರಪೇಟೆ, ಸೆ. 16: ಸಹಕಾರ ಸಂಘದ ಸರ್ವ ಸದಸ್ಯರ ಸುರಕ್ಷತೆಯ ದೃಷ್ಟಿಯಿಂದ ಸದಸ್ಯರ ಸಾಲಗಳ ವಿಮಾ ನಿಧಿಗೆ ಶೇ. 41ರಷ್ಟು ಲಾಭಾಂಶ ಹಂಚಿಕೆ ಮಾಡಲಾಗಿದೆ. ಇದರಿಂದಾಗಿ ಸಾಲ ಪಡೆದ ಸದಸ್ಯರ ಕುಟುಂಬಕ್ಕೆ ಆರ್ಥಿಕ ಹೊರೆ ಕಡಿಮೆಯಾಗಲಿದೆ ಎಂದು ಸೋಮವಾರಪೇಟೆ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಬಿ.ಪಿ. ಶಿವಕುಮಾರ್ ತಿಳಿಸಿದರು. ಇಲ್ಲಿನ ಮಹಿಳಾ ಸಮಾಜ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿವಿಧೋದ್ದೇಶ ಸಹಕಾರ ಸಂಘದ 50ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಲ ಪಡೆದ ಸದಸ್ಯರು ಅಕಾಲಿಕ ಮೃತ್ಯುವಿಗೆ ಈಡಾದರೆ ವಿಮಾ ಯೋಜನೆಯಡಿ ರೂ. 1ಲಕ್ಷ ಸಾಲ ಮನ್ನಾ ಆಗಲಿದೆ. ಇದು ಕುಟುಂಬ ಸದಸ್ಯರ ಮೇಲಿನ ಆರ್ಥಿಕ ಹೊರೆಯನ್ನು ಇಳಿಸಲಿದೆ. ಈ ಯೋಜನೆಯಡಿ ಮೊತ್ತವನ್ನು 2 ಲಕ್ಷಕ್ಕೆ ಏರಿಸುವ ಬಗ್ಗೆ ಚಿಂತಿಸಲಾಗಿದೆ ಎಂದು ಶಿವಕುಮಾರ್ ಹೇಳಿದರು. ಇದರೊಂದಿಗೆ ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನಿಂದ ನೀಡಲಾಗುವ ಉತ್ತಮ ಕೃಷಿಯೇತರ ಸಹಕಾರ ಸಂಘ-ವಾರ್ಷಿಕ ಪ್ರಶಸ್ತಿಗೆ ನಮ್ಮ ಸಂಘ ಭಾಜನವಾಗಿದ್ದು, ಇದಕ್ಕೆ ಆಡಳಿತ ಮಂಡಳಿ ಮತ್ತು ಸರ್ವ ಸದಸ್ಯರ ಸಹಕಾರವೇ ಕಾರಣ ಎಂದು ಅಭಿಪ್ರಾಯಿಸಿದರು.
ಕಳೆದ ಸಾಲಿನಲ್ಲಿ 8,98,648.63 ಲಾಭಾಂಶ ಹೊಂದಿದ್ದರೆ, ಸದರಿ ಸಾಲಿನಲ್ಲಿ 21,95,699.79 ಲಾಭ ಹೊಂದಿದೆ. ಸದಸ್ಯರಿಗೆ ಶೇ. 15 ಡಿವಿಡೆಂಟ್ ನೀಡಲಾಗಿದೆ. ಸಹಕಾರ ಕ್ಷೇತ್ರದ ಉಳಿವಿಗೆ ಸದಸ್ಯರ ಸಹಕಾರ ಮುಖ್ಯವಾಗಿದ್ದು, ನಿಗದಿತ ಸಮಯದೊಳಗೆ ಸಾಲವನ್ನು ಮರುಪಾವತಿ ಮಾಡುವಂತೆ ಮನವಿ ಮಾಡಿದರು. ಸಭೆಯಲ್ಲಿದ್ದ ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಹಿರಿಯ ಸಹಕಾರಿ ಬಿ.ಡಿ. ಮಂಜುನಾಥ್ ಮಾತನಾಡಿ, ವಿವಿಧೋದ್ದೇಶ ಸಹಕಾರ ಸಂಘವು ಡಿಸಿಸಿ ಬ್ಯಾಂಕ್ನಲ್ಲಿ 1.15 ಕೋಟಿ ಸಾಲ ಪಡೆದಿದ್ದು, ಸದಸ್ಯರಿಗೂ ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡಿದೆ. ಸಾಲ ಮರುಪಾವತಿಯಾದರೆ ಡಿಸಿಸಿ ಬ್ಯಾಂಕ್ನ ಸಾಲ ಮರುಪಾವತಿಸಿ ಸದಸ್ಯರಿಗೆ ಹೆಚ್ಚಿನ ಸವಲತ್ತು ಒದಗಿಸ ಬಹುದಾಗಿದೆ. ಸದಸ್ಯರು ತಮ್ಮ ಸಾಲ ಸುಸ್ತಿಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಸಂಘದ ವತಿಯಿಂದ ಸುಂಟಿಕೊಪ್ಪದಲ್ಲಿ ನೂತನ ಶಾಖೆಯನ್ನು ತೆರೆಯಲಾಗಿದ್ದು, ಉತ್ತಮವಾಗಿ ವ್ಯವಹಾರ ನಡೆಯು ತ್ತಿದೆ. ಮುಂದಿನ ವರ್ಷದಿಂದ ಲಾಭದತ್ತ ಸಾಗುವ ವಿಶ್ವಾಸವಿದೆ ಎಂದು ಬಿ.ಡಿ. ಮಂಜುನಾಥ್ ಅಭಿಪ್ರಾಯಿಸಿದರು.
ವೇದಿಕೆಯಲ್ಲಿ ಸಹಕಾರ ಸಂಘದ ಉಪಾಧ್ಯಕ್ಷ ರಾಮ್ಪ್ರಸಾದ್, ನಿರ್ದೇಶಕರುಗಳಾದ ಬಿ.ಡಿ. ಮಂಜುನಾಥ್, ಹೆಚ್.ಕೆ. ಮಾದಪ್ಪ, ವರಲಕ್ಷ್ಮೀ ಸಿದ್ದೇಶ್ವರ್, ಎಂ. ಶ್ರೀಕಾಂತ್, ಬಿ.ಆರ್. ಮೃತ್ಯುಂಜಯ, ಶೋಭಾ ಶಿವರಾಜ್, ಎಂ.ಸಿ. ರಾಘವ, ಹೆಚ್.ಎಸ್. ವೆಂಕಪ್ಪ, ಬಿ.ಶಿವಪ್ಪ, ಕೆ.ಬಿ. ಸುರೇಶ್, ಕೆ.ಆರ್. ದಿವ್ಯ, ಪ್ರಭಾರ ವ್ಯವಸ್ಥಾಪಕ ಎಂ.ಕೆ. ಮೋಹನ್ ಅವರುಗಳು ಉಪಸ್ಥಿತರಿದ್ದರು.