ಸೋಮವಾರಪೇಟೆ,ಸೆ.17: ಕಳೆದ ವರ್ಷದ ಮಹಾಮಳೆಗೆ ಭೂಕುಸಿತ ದಿಂದ ಸಂಪೂರ್ಣ ನಾಶವಾಗಿದ್ದ ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿಯ ಹಾಲೇರಿ ಬಳಿಯಲ್ಲಿ ಮತ್ತೆ ರಸ್ತೆ ಕುಸಿಯುವ ಭೀತಿ ಎದುರಾಗಿದೆ.
ಹಾಲೇರಿ ಬಳಿಯ ಸಿಂಕೋನ ತೋಟದ ತಿರುವಿನಲ್ಲಿ ಗುಡ್ಡವನ್ನು ಕೊರೆದು ನೂತನ ರಸ್ತೆ ನಿರ್ಮಿಸ ಲಾಗಿದೆ. ಕೆಲ ತಿಂಗಳುಗಳ ಕಾಲ ನಡೆದ ಅಹೋರಾತ್ರಿ ಕಾಮಗಾರಿಯ ಮೂಲಕ ರಸ್ತೆಯನ್ನು ಮರು ನಿರ್ಮಿಸ ಲಾಗಿದ್ದು, ಡಾಂಬರು ಹಾಕುವ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಆದರೆ ರಸ್ತೆಯ ಒಂದು ಭಾಗದಲ್ಲಿ ಇಳಿಜಾರಿದ್ದು, ಪ್ರಸಕ್ತ ವರ್ಷ ಈವರೆಗೆ ಸುರಿದ ಮಳೆಗೆ ಮಣ್ಣು ಕೊಚ್ಚಿಕೊಂಡು ಪಾತಾಳ ಸೇರಿದೆ. ಸಾವಿರಾರು ಲೋಡ್‍ನಷ್ಟು ಮಣ್ಣು ಈಗಾಗಲೇ ಮಳೆಯ ಕೊರೆತಕ್ಕೆ ಸಿಲುಕಿ ಜಾರಿದ್ದು, ನೂತನವಾಗಿ ನಿರ್ಮಿಸಲಾಗಿರುವ ರಸ್ತೆಗೂ ಕಂಟಕ ತಂದೊಡ್ಡಿದೆ.
ಇಲಾಖೆಯಿಂದ ಈಗಾಗಲೇ ಮಣ್ಣು ಕೊರೆತ ಆಗದಂತೆ ಟಾರ್ಪಲ್, ಎಂ.ಸ್ಯಾಂಡ್ ಮೂಟೆಗಳನ್ನು ಹಾಕಲಾಗಿದ್ದರೂ ಸಹ ಭಾರೀ ಮಳೆಯಾದರೆ ಮತ್ತೆ ಮಣ್ಣು ಕುಸಿಯುವ ಭೀತಿ ಇದ್ದೇ ಇದೆ ಎಂದು ಸ್ಥಳೀಯರಾದ ರಮೇಶ್ ತಿಳಿಸಿದ್ದಾರೆ.
ಕಳೆದ ವರ್ಷದ ಭೂಕುಸಿತದಿಂದ ಕಣ್ಮರೆಯಾಗಿದ್ದ ರಸ್ತೆಯನ್ನು ಕೆಲ ತಿಂಗಳುಗಳಲ್ಲೇ ಮರುನಿರ್ಮಾಣ ಮಾಡುವ ಮೂಲಕ ಲೋಕೋಪಂ iÉೂೀಗಿ ಇಲಾಖೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದರೂ, ತಳಭಾಗದಲ್ಲಿ ತಡೆಗೋಡೆ ನಿರ್ಮಿಸದ ಹಿನ್ನೆಲೆ ಇಂತಹ ಸಮಸ್ಯೆ ಉದ್ಭವಗೊಂಡಿದೆ.
ರಸ್ತೆಯ ಎಡಭಾಗದಲ್ಲಿರುವ ಕಂದಕಕ್ಕೆ ತಡೆಗೋಡೆ ನಿರ್ಮಿಸದ ಹೊರತು ಈ ರಸ್ತೆಗೆ ಭವಿಷ್ಯ ಇರುವದಿಲ್ಲ. ಲಕ್ಷಾಂತರ ವೆಚ್ಚದಲ್ಲಿ ಕೈಗೊಂಡ ಕಾಮಗಾರಿ ಮಳೆಗೆ ಆಹುತಿಯಾಗುವ ಮೊದಲು ತಡೆಗೋಡೆ ನಿರ್ಮಿಸಲು ಕ್ರಮಕೈಗೊಳ್ಳಬೇಕೆಂದು ಖಾಸಗಿ ಬಸ್ ಚಾಲಕರಾದ ಪ್ರಸನ್ನ, ಪ್ರಸಾದ್, ಮಧು ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.