*ಸಿದ್ದಾಪುರ, ಸೆ. 17: ನೆಲ್ಲಿಹುದಿಕೇರಿ ಪಬ್ಲಿಕ್ಸ್ಕೂಲ್ನಲ್ಲಿ ಇತ್ತೀಚೆಗೆ ಬಂದ ಪ್ರವಾಹದಿಂದ ಮನೆ ಹಾನಿಗೊಳಗಾದವರು ಆಗಸ್ಟ್ 8 ರಿಂದ ಸಂತ್ರಸ್ತರಾಗಿ ಸೇರಿಕೊಂಡಿದ್ದು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ತೊಂದರೆ ಯಾಗುತ್ತಿರುವದರಿಂದ ಅವರುಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ನೆಲ್ಲಿಹುದಿಕೇರಿ ಹೊಳೆಕರೆಯಲ್ಲಿ ಮನೆ ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದ 300 ಮಂದಿಯ ಮನೆ ಪ್ರವಾಹಕ್ಕೆ ಒಳಗಾಗಿದ್ದು ಉಟ್ಟ ಬಟ್ಟೆಯಲ್ಲಿಯೇ ಜಿಲ್ಲಾಡಳಿತದಿಂದ ಸಿದ್ದಪಡಿಸಲಾಗಿದ್ದ ಇಲ್ಲಿನ ಪಬ್ಲಿಕ್ ಶಾಲೆಯಲ್ಲಿ ನೆಲೆ ಕಂಡುಕೊಂಡಿದ್ದರು. ಆಗಸ್ಟ್ 8 ರಿಂದ ಕಾಳಜಿ ಕೇಂದ್ರದಲಿರುವ ಕೆಲವರು ಮಳೆ ಕಡಿಮೆಯಾದಾಗ ಪುನರ್ವಸತಿ ಕೇಂದ್ರ ತೊರೆದು ಬಾಡಿಗೆ ಮನೆಗೆ ತೆರಳಿದ್ದರು. ಉಳಿದ 200 ಮಂದಿ ಈಗಲೂ ಪಬ್ಲಿಕ್ ಸ್ಕೂಲ್ನಲ್ಲೇ ಇದ್ದಾರೆ. ಹಗಲು ಕೆಲಸಕ್ಕೆ ತೆರಳುವ ಇವರುಗಳು ರಾತ್ರಿ ಜಿಲ್ಲಾಡಳಿತದಿಂದ ಗುರುತಿಸಲಾಗಿರುವ ಸಂತ್ರಸ್ತರ ಕೇಂದ್ರಲ್ಲೇ ವಾಸವಾಗಿದ್ದಾರೆ. ಕೆಲವರು ಕೆಲಸಕ್ಕೂ ಹೋಗದೆ ಹಗಲು ಶಾಲೆ ವಠಾರದಲ್ಲೇ ಇರುತ್ತಾರೆ. ಶಾಲೆ ಮಕ್ಕಳಿಗೆ ಇದರಿಂದ ಮುಜುಗರವಾಗುತ್ತಿದ್ದು, ಪಾಠಪ್ರವಚನಕ್ಕೆ ತೊಂದರೆಯಾಗುತ್ತಿದೆ. ಸರಕಾರ ಇವರುಗಳಿಗೆ ಬೇರೆಡೆ ಜಾಗ ಗುರುತಿಸಿ ಮನೆ ನಿರ್ಮಿಸಿಕೊಡಲಿ ಅಷ್ಟರವರೆಗೆ ಸಂತ್ರಸ್ತರನ್ನು ಬೇರೆಡೆ ನೆಲೆಸಲು ಅವಕಾಶ ಕಲ್ಪಿಸಿಕೊಡಲಿ ಎಂದೂ ಸ್ಥಳೀಯರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.