ಗೋಣಿಕೊಪ್ಪ ವರದಿ, ಸೆ. 18 ; ಮಾಜಿ ರಾಷ್ಟ್ರೀಯ ಹಾಕಿ ತೀರ್ಪುಗಾರ, ಅಂತರ್ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಅವರ ಚಿಕ್ಕಪ್ಪ ಅಮ್ಮತ್ತಿ ಗ್ರಾಮದ ಮಾಚಿಮಂಡ ಕುಮಾರ್ ಅಪ್ಪಚ್ಚು (70) ನಿಧನರಾಗಿದ್ದಾರೆ. ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

ಮೈಸೂರು ಅಪೊಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಅಂತ್ಯಕ್ರಿಯೆ ತಾ. 19ರಂದು (ಇಂದು) ಅಮ್ಮತ್ತಿಯಲ್ಲಿ ನಡೆಯಲಿದೆ.

ರಾಷ್ಟ್ರೀಯ ಹಾಕಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದ ಇವರು ಕೂರ್ಗ್ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷರಾಗಿದ್ದರು. ಕರ್ನಾಟಕ ಪ್ರೀಮಿಯರ್ ಲೀಗ್‍ನಲ್ಲಿ ಆಂಟಿ ವಿಜಿಲೆನ್ಸ್ ಟೀಂ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಕೂರ್ಗ್ ಹಾಕಿ ಅಸೋಸಿಯೇಷನ್ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ದುಡಿದಿದ್ದಾರೆ.

ಕೂರ್ಗ್ ಕ್ರಿಕೆಟ್ ಅಕಾಡೆಮಿ ಸಂಸ್ಥೆ ಮೂಲಕ ಕಿರಿಯ ಕ್ರಿಕೆಟ್ ಆಟಗಾರರಿಗೆ ರಾಷ್ಟ್ರೀಯ, ಅಂತರ್ರಾಷ್ಟ್ರೀಯ ತರಬೇತಿ ನೀಡಿ ಪ್ರೋತ್ಸಾಹಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಹಲವು ದಶಕಗಳಿಂದ ನಿರಂತರವಾಗಿ ಹಾಕಿ ಮತ್ತು ಕ್ರಿಕೆಟ್ ಕ್ರೀಡೆಗೆ ತಮ್ಮದೇ ಆದ ಕಾಣಿಕೆ ನೀಡಿದ್ದರೂ, ಹಾಕಿ, ಕ್ರಿಕೆಟ್ ಹಾಗೂ ಗಾಲ್ಫ್ ಕ್ರೀಡೆಯಲ್ಲಿ ಪರಿಣಿತರಾಗಿದ್ದರು.