ಗೋಣಿಕೊಪ್ಪ, ಸೆ. 18: ಇತಿಹಾಸ ಪ್ರಸಿದ್ಧವಾಗಿರುವ ಗೋಣಿಕೊಪ್ಪ ದಸರಾ ಈ ಬಾರಿ 41ನೇ ಹೊಸ್ತಿಲಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ದಸರಾ ಜನೋತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಜನೋತ್ಸವ ವಿಜೃಂಭಣೆಯಿಂದ ನಡೆಸಲು ಕ್ಷೇತ್ರದ ಶಾಸಕರ ವಿಶೇಷ ಕಾಳಜಿಯಿಂದ ಮುಖ್ಯಮಂತ್ರಿ ಯಡಿಯೂರಪ್ಪ 30 ಲಕ್ಷ ಅನುದಾನವನ್ನು ಮಂಜೂರು ಮಾಡಿದ್ದಾರೆ. ಕಳೆದ ಬಾರಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇತ್ತೀಚೆಗೆ ಹಿರಿಯರ ಹಾಗೂ ಕಿರಿಯರ ಸಮ್ಮುಖದಲ್ಲಿ ಮಹಾಸಭೆ ಕರೆದು ಲೆಕ್ಕಪತ್ರ ಮಂಡಿಸುವ ಮೂಲಕ ಯಶಸ್ವಿ ದಸರಾ ನಡೆಸಿಕೊಟ್ಟವರನ್ನು ನೆನಪಿಸಿಕೊಂಡು ಸಭೆ ಮುಕ್ತಾಯ ಮಾಡಿದ್ದರು. ನಂತರ ಕಾವೇರಿ ದಸರಾ ಸಮಿತಿಯ ನೂತನ ಸಾಲಿನ ಅಧ್ಯಕ್ಷರಾಗಿ ಆಯ್ಕೆಗೊಂಡ ರಾಮಕೃಷ್ಣ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ್ದರು. ಈ ಸಭೆಯಲ್ಲಿ ನೂತನ ಅಧ್ಯಕ್ಷರು ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿ ಕೆಲವೇ ದಿನಗಳಲ್ಲಿ ಮಹಾಸಭೆ ಕರೆದು ಎಲ್ಲಾ ಸಮಿತಿಗಳನ್ನು ರಚಿಸುವದಾಗಿ ಸಭೆಗೆ ಭರವಸೆ ನೀಡಿದ್ದರು. ಆದರೆ ಸಾರ್ವಜನಿಕವಾಗಿ ನಡೆಯಬೇಕಾಗಿದ್ದ ದಸರಾ ವಿವಿಧ ಸಮಿತಿಯ ಪದಾಧಿಕಾರಿಗಳ ನೇಮಕಾತಿ ಸಭೆಯು ಕೇವಲ ಪಂಚಾಯ್ತಿ ಸದಸ್ಯರಿಗೆ ಮೀಸಲಿರಿಸಿ ತಾವೇ ಮೊದಲೇ ತಯಾರಿಸಿಕೊಂಡಿದ್ದ ಸಮಿತಿಯ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದರು.

ಸಭೆಯ ವಿಚಾರವಾಗಿ ಕಾವೇರಿ ದಸರಾ ಸಮಿತಿಯಲ್ಲಿ ದುಡಿದ ಹಿರಿಯರನ್ನು ಕಡೆಗಣಿಸುವ ಮೂಲಕ ಏಕ ಪಕ್ಷೀಯವಾಗಿ ಸಮಿತಿ ರಚನೆ ಮಾಡಿರುವ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. (ಮೊದಲ ಪುಟದಿಂದ) ನೂತನ ಅಧ್ಯಕ್ಷರು ಸರ್ವ ಸಂಘ ಸಂಸ್ಥೆಯ, ದಶಮಂಟಪಗಳ ಪದಾಧಿಕಾರಿಗಳು, ಕಾವೇರಿ ದಸರಾ ಸಮಿತಿಯಲ್ಲಿ ದುಡಿದ ಹಿರಿಯರನ್ನು ಸಭೆ ಕರೆದು ಆ ಮೂಲಕ ಸಭೆಯಲ್ಲಿ ವಿವಿಧ ಸಮಿತಿಗಳ ಪದಾಧಿಕಾರಿಗಳನ್ನು ಸೂಚಿಸುವದು, ನೇಮಕ ಮಾಡುವದು, ಅನುಮೋದನೆ ಪಡೆಯುವದು, ಇಲ್ಲಿಯ ತನಕ ನಡೆದುಕೊಂಡು ಬಂದ ಪದ್ಧತಿ.

ಆದರೆ ಈ ಬಾರಿ ನೂತನ ಸಮಿತಿಯು ಇದ್ಯಾವದನ್ನು ಮಾಡದೇ ಕನಿಷ್ಟ ನಿಯಮಗಳನ್ನು ಗಾಳಿಗೆ ತೂರಿ ಕೇವಲ ಪಂಚಾಯ್ತಿ ಸದಸ್ಯರನ್ನು ಕೇಂದ್ರವಾಗಿರಿಸಿಕೊಂಡು ತಮಗೆ ಬೇಕಾದ ರೀತಿಯಲ್ಲಿ ಸಮಿತಿಗಳನ್ನು ರಚಿಸಿದ್ದಾರೆ. ಸಮಿತಿಯಲ್ಲಿ ನೆಪ ಮಾತ್ರಕ್ಕೆ ಕೆಲವರನ್ನು ಹಾಕಿಕೊಳ್ಳುವ ಮೂಲಕ ತಮಗೆ ಇಷ್ಟ ಬಂದಂತೆ ಸಮಿತಿ ರಚನೆ ಮಾಡಿದ್ದಾರೆ.

ಅನುಭವವಿಲ್ಲದ ಕೆಲವರಿಗೆ ಸಮಿತಿಯ ಜವಾಬ್ದಾರಿ ನೀಡುವ ಮೂಲಕ ಇಲ್ಲಿಯ ತನಕ ಕೆಲಸ ನಿರ್ವಹಿಸಿ ಯಶಸ್ವಿಯಾದವರನ್ನು ಮೂಲೆ ಗುಂಪು ಮಾಡಿದ್ದಾರೆ. ಸಾರ್ವಜನಿಕರ ತೆರಿಗೆ ಹಣದಿಂದ ಸರ್ಕಾರ ದೊಡ್ಡ ಮೊತ್ತದ ಹಣವನ್ನು ದಸರಾ ಜನೋತ್ಸವಕ್ಕೆ ಬಿಡುಗಡೆ ಮಾಡಿದ್ದು ಕನಿಷ್ಟ ನಿಯಮಗಳನ್ನು ಪಾಲಿಸಬೇಕಾದ ಸಮಿತಿಯು ನಿಯಮಗಳನ್ನು ಗಾಳಿಗೆ ತೂರುವ ಮೂಲಕ ತಮಗಿಷ್ಟ ಬಂದಂತೆ ನಡೆದುಕೊಂಡಿರುವದರಿಂದ ನೂತನ ಕಾವೇರಿ ದಸರಾ ಸಮಿತಿ ಆರಂಭದಲ್ಲೇ ಎಡವಿದೆ. ಆ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಇದರಿಂದ ಕೆಲವು ವರ್ಷಗಳ ಕಾಲ ಯಶಸ್ವಿಯಾಗಿ ಸಾರ್ವಜನಿಕರ ಒಡಗೂಡಿ ನಡೆದುಕೊಂಡು ಬಂದ ದಸರಾ ಜನೋತ್ಸವ ಇದೀಗ ರಾಜಕೀಯ ಪ್ರತಿಷ್ಠೆಗೆ ಸಿಲುಕಿ ತನ್ನ ವೈಭವವನ್ನು ಕಳೆದುಕೊಳ್ಳುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ. ಸರ್ವಧÀರ್ಮಿಯರು ಒಂದೆಡೆ ಸೇರಿ ಕಾರ್ಯಕ್ರಮಗಳ ರೂಪುರೇಷೆ ಸಿದ್ಧ್ದಪಡಿಸಬೇಕಾದ ಸಮಿತಿ ಕೆಲವೇ ಕೆಲವು ಮಂದಿಗೆ ಸೀಮಿತಗೊಂಡಂತಾಗಿದೆ. ಸಮಿತಿಯಲ್ಲಿರುವ ಕೆಲವರು ಏಕಪಕ್ಷೀಯವಾಗಿ ಎಲ್ಲ್ಲ ನಿರ್ಧಾರಗಳನ್ನು ತಾವೇ ಕೈಗೊಳ್ಳುವ ಮೂಲಕ ಮತ್ತೊಂದು ಸಮಿತಿ ಒತ್ತಡ ಏರುವದು ಕಂಡು ಬಂದಿದೆ. ಸಮಿತಿಯಲ್ಲಿ ಸರಿ ತಪ್ಪುಗಳನ್ನು ತಿದ್ದುವ ಅನುಭವಸ್ಥರು ಇಲ್ಲದಂತಾಗಿದೆ. ಇದ್ದರೂ ಯಾರನ್ನೂ ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳದಂತಹ ಪರಿಸ್ಥಿತಿ ಬಂದೊದಗಿದೆ.

ಪಂಚಾಯಿತಿಗೆ ಜವಾಬ್ದಾರಿ ವಹಿಸಿದಲ್ಲಿ ಮುಂದೆ ದಸರಾ ಉತ್ಸವ ಯಶಸ್ವಿಯಾಗಿ ನಡೆಯುತ್ತದೆ. ಎಂಬ ದೂರದೃಷ್ಟಿಯಿಂದ ದಿ. ಮಲ್ಲಂಡ ನಂಜಪ್ಪ ಅವರು ಮಾಡಿದ ಪ್ರಯತ್ನ ಇತ್ತೀಚೆಗೆ ರಾಜಕೀಯ ವ್ಯವಸ್ಥೆಯಿಂದ ನಾಡ ಹಬ್ಬ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ ಎಂಬ ಮಾತುಗಳು ವ್ಯಾಪಕವಾಗಿ ಕೇಳಿಬಂದಿವೆ. ವಿವಿಧ ಸಮಿತಿಗೆ ಆಯ್ಕೆ ಮಾಡಿಕೊಳ್ಳುವಾಗ ಹಿರಿತನವನ್ನು ಕಡೆಗಣಿಸಿದ್ದಾರೆ. ಸಮಿತಿ ಸದಸ್ಯರಾಗಿ ನೇಮಕಗೊಂಡಿರುವವರಿಗೆ ಇನ್ನೂ ಕೂಡ ಮಾಹಿತಿ ಸಿಕ್ಕದಂತಾಗಿದೆ. ಒಟ್ಟಿನಲ್ಲಿ ಅದ್ಧೂರಿಯಾಗಿ ನಡೆಸಬೇಕಾದ ಜನೋತ್ಸವ ಕಾರ್ಯಕ್ರಮವನ್ನು ಕೆಲವೇ ಕೆಲವು ಮಂದಿ ತಮಗೆ ಇಷ್ಟ ಬಂದಂತೆ ಸಮಿತಿಗಳನ್ನು ರಚಿಸುವ ಮೂಲಕ ನಡೆದುಕೊಳ್ಳುತ್ತಿರುವ ದಸರಾ ಸಮಿತಿಯ ಹಾದಿ ಆರಂಭದಲ್ಲೇ ಹಳಿ ತಪ್ಪಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.ಹಿರಿಯರ ಕಡೆಗಣನೆ

ಕಳೆದ ಸಾಲಿನಲ್ಲಿ ಮುಖ್ಯ ಸಮಿತಿಯಲ್ಲಿ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸಿದ ಅನುಭವವಿದೆ. ಆದರೆ ಈ ಬಾರಿ ನಡೆದ ಸಭೆಗೆ ಕನಿಷ್ಟ ಆಹ್ವಾನಿಸುವ ಪದ್ಧತಿಯನ್ನು ನೂತನ ಸಮಿತಿಯನ್ನು ಕೈ ಬಿಟ್ಟಿದೆ. ಸರ್ಕಾರ ಸಾರ್ವಜನಿಕರ ತೆರಿಗೆ ಹಣದಿಂದ ದಸರಾ ಜನೋತ್ಸವಕ್ಕೆ ಅನುದಾನ ಬಿಡುಗಡೆ ಮಾಡುತ್ತದೆ. ಆದರೆ ಸಮಿತಿಯಲ್ಲಿರುವವರು ನಾವೇ ಸ್ವಂತ ಹಣದಿಂದ ದಸರಾ ಮಾಡುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಹಿರಿಯರನ್ನು ವಿಶ್ವಾಸಕ್ಕೆ ಪಡೆಯುವಲ್ಲಿ ಎಡವತ್ತಿದ್ದಾರೆ. ಮಹಾ ಸಭೆ ಕರೆಯದೆ ಸಮಿತಿ ರಚನೆ ಮಾಡಿರುವದು ಒಳ್ಳೆಯ ಬೆಳವಣಿಗೆಯಲ್ಲ. ಕೂಡಲೇ ಕಾವೇರಿ ದಸರಾ ಸಮಿತಿಯ ಬೈಲಾ ಸಮಿತಿ ಬೈಲಾ ತಿದ್ದುಪಡಿ ಮಾಡುವ ಮೂಲಕ ವ್ಯವಸ್ಥಿತವಾಗಿ ಜನೋತ್ಸವ ನಡೆಸಲು ಮುಂದಾಗಬೇಕಿದೆ.

-ಹೆಚ್.ಆರ್. ಪರಶುರಾಮ್, ಮಾಜಿ ಉಪಾಧ್ಯಕ್ಷರು, ಕಾವೇರಿ ದಸರಾ ಸಮಿತಿ ಗೋಣಿಕೊಪ್ಪ

ದುಡಿದವರಿಗೆ ನೋವು ಉಂಟಾಗಿದೆ

ಕಾವೇರಿ ದಸರಾ ಸಮಿತಿಯಿಂದ ಪಂಚಾಯಿತಿಗೆ ದಸರಾ ಆಚರಿಸಲು ಬಿಟ್ಟುಕೊಟ್ಟ ನಂತರ ಒಂದಲ್ಲ ಒಂದು ರೀತಿಯಲ್ಲಿ ಸಮಿತಿಯು ಏಕ ಪಕ್ಷೀಯವಾಗಿ ನಡೆದುಕೊಳ್ಳುತ್ತಿದೆ. ಕಾವೇರಿ ದಸರಾ ಸಮಿತಿ ಕಟ್ಟಲು 80 ಮಂದಿ ಶ್ರಮ ಪಟ್ಟಿದ್ದಾರೆ. ಬೈಲಾ ತಿದ್ದುಪಡಿಗೆ 5 ಮಂದಿಯ ಸಮಿತಿ ರಚಿಸಲಾಗಿದೆ. ಈ ಬಗ್ಗೆ ಸಮಿತಿ ಕಾರ್ಯ ನಿರ್ವಹಿಸಿಲ್ಲ. ಈ ಬಾರಿ ಮಹಾಸಭೆಯನ್ನು ಕರೆಯದೇ ಪಂಚಾಯಿತಿಯಲ್ಲಿ ಪಂಚಾಯಿತಿ ಸದಸ್ಯರನ್ನಷ್ಟೇ ಕರೆದು ಏಕ ಪಕ್ಷೀಯವಾಗಿ ಸಮಿತಿ ರಚಿಸಿದ್ದಾರೆ. ಇದರಿಂದ ಸಹಜವಾಗಿಯೇ ಕಾವೇರಿ ದಸರಾ ಸಮಿತಿಯಲ್ಲಿ ದುಡಿದವರಿಗೆ ನೋವು ಉಂಟಾಗಿದೆ. ಜನೋತ್ಸವ ಕಾರ್ಯಕ್ರಮವು ಯಶಸ್ವಿಗೊಳ್ಳಬೇಕಾದಲ್ಲಿ ಸರ್ವ ಧರ್ಮಿಯರ ಸಮನ್ವಯತೆ ಬೇಕೆಂದು ತಿಳಿಯುವಲ್ಲಿ ಸಮಿತಿ ಎಡವಿದೆ. ಬೈಲಾ ತಿದ್ದುಪಡಿಯಿಂದಷ್ಟೇ ಇವುಗಳಿಗೆ ಪರಿಹಾರ ಕಾಣಬಹುದು.

-ಎಂ.ಪಿ. ಕೇಶವ್‍ಕಾಮತ್, ಹಿರಿಯ ಪದಾಧಿಕಾರಿಗಳು, ಕಾವೇರಿ ದಸರಾ ಸಮಿತಿ

ವರ್ತಕರ ಕಡೆಗಣನೆ

ಎಲ್ಲರನ್ನು ವಿಶ್ವಾಸಕ್ಕೆ ಪಡೆಯುವಲ್ಲಿ ಸಮಿತಿ ಎಡವಿದೆ. ವರ್ತಕರಿಂದಲೇ ಕಾವೇರಿ ದಸರಾ ಸಮಿತಿ ಹುಟ್ಟಿಕೊಂಡಿತ್ತು. ಇದರಲ್ಲಿ ದುಡಿದವರು ನೂರಾರು ಸಂಖ್ಯೆಯಲ್ಲಿದ್ದಾರೆ. ದಸರಾ ಯಶಸ್ವಿಗೆ ಇಲ್ಲಿಯ ವರ್ತಕರ ಸಹಕಾರ ಅತ್ಯಾ ಮೂಲ್ಯ ಎಂಬದನ್ನು ಸಮಿತಿ ಮರೆತಂತಿದೆ. ಸಂಘ ಸಂಸ್ಥೆಯ ಪದಾಧಿಕಾರಿ ಗಳನ್ನು ಸಭೆಗೆ ಆಹ್ವಾನಿಸುವ ಕನಿಷ್ಟ ಆಲೋಚನೆಯು ಈ ಸಮಿತಿಗೆ ಇದ್ದಂತಿಲ್ಲ. ಸಮಿತಿ ರಚನೆಯ ಬಗ್ಗೆ ಯಾರಿಗೂ ಅರಿವಿಲ್ಲ. ಇದರಿಂದ ಏಕ ಪಕ್ಷೀಯವಾಗಿ ದಸರಾ ನಡೆಯಲಿದೆ ಎಂದು ಭಾಸವಾಗುತ್ತಿದೆ.

-ಕಡೇಮಾಡ ಸುನಿಲ್ ಮಾದಪ್ಪ, ಅಧ್ಯಕ್ಷರು, ಚೇಂಬರ್ ಆಫ್ ಕಾಮರ್ಸ್

ರಾಜಕೀಯ ಬಣ್ಣ ಇರಬಾರದು

ಪಂಚಾಯ್ತಿಗೆ ದಸರಾ ಉಸ್ತುವಾರಿ ವಹಿಸಿದ ನಂತರ ಸಹಜವಾಗಿಯೇ ದಸರಾಕ್ಕೆ ರಾಜಕೀಯ ಬಣ್ಣ ಬೆರೆತಿದೆ. ಜನೋತ್ಸವವನ್ನು ರಾಜಕೀಯವಾಗಿ ನಡೆಸಲು ಮುಕ್ತ ಮನಸ್ಸಿರಬೇಕು. ಬೈಲಾ ತಿದ್ದುಪಡಿಯಿಂದ ಸಮಸ್ಯೆಗೆ ಪರಿಹಾರ ಸಿಗಬಹುದು ಆ ನಿಟ್ಟಿನಲ್ಲಿ ಸಮಿತಿ ತನ್ನ ಕೆಲಸ ಬೇಗನೇ ಮಾಡಬೇಕು.

-ಪೊನ್ನಿಮಾಡ ಸುರೇಶ್,

ಮಾಜಿ ಅಧ್ಯಕ್ಷರು, ದಸರಾ ನಾಡ ಹಬ್ಬ ಸಮಿತಿ

ಮಹಿಳಾ ದಸರಾ ಕಳೆದ 5 ವರ್ಷದಿಂದ ಯಶಸ್ವಿಯಾಗಿ ನಡೆಯುತ್ತಿದೆ. ಪಂಚಾಯಿತಿ ಹೊರತುಪಡಿಸಿ ಕಾರ್ಯಕ್ರಮವನ್ನು ಆರಂಭ ಮಾಡಿದ್ದೇವೆ. ಸಾರ್ವಜನಿಕರ ಸಹಕಾರದಿಂದ ಉತ್ತಮವಾಗಿ ಮಹಿಳಾ ದಸರಾ ನಡೆದಿತ್ತು. ಇತ್ತೀಚಿನ ಎರಡು ವರ್ಷಗಳಲ್ಲಿ ಕಾವೇರಿ ದಸರಾ ಸಮಿತಿ ಸಹಕಾರ ನೀಡಿದೆ. ಸಮಿತಿಯು ಕಾವೇರಿ ದಸರಾ ಸಮಿತಿಯ ಅಧೀನದಲ್ಲಿ ಕಾರ್ಯನಿರ್ವಹಿಸಬೇಕು ಎಂಬ ನಿರೀಕ್ಷೆ, ಒತ್ತಡ ಸರಿಯಲ್ಲ. ಪಂಚಾಯಿತಿ ಸದಸ್ಯರನ್ನು ಹೊರತುಪಡಿಸಿ ಅಧ್ಯಕ್ಷ ಸ್ಥಾನವನ್ನು ನೀಡುವ ಮೂಲಕ ವಿಸ್ತಾರವಾಗಿ ಆಲೋಚಿಸಿ ಕಾರ್ಯಕ್ರಮ ಮಾಡಿದ್ದೇವೆ. ಇದು ಯಶಸ್ವಿಗೆ ಮೂಲ ಕಾರಣ. ದಶಮಂಟಪಗಳು ಸಮಿತಿಯ ಅಧೀನದಲ್ಲಿ ಎಂದೂ ನಡೆದಿಲ್ಲ. ಸಮಿತಿಯು ಕಾರ್ಯಕ್ರಮಕ್ಕೆ ಆರ್ಥಿಕ ಸಹಕಾರ ನೀಡಿದ ಮಾತ್ರಕ್ಕೆ ಎಲ್ಲವೂ ಸಮಿತಿಯ ತೀರ್ಮಾನದಂತೆ ನಡೆಸಬೇಕೆಂದಿಲ್ಲ. ಇದು ಜನೋತ್ಸವ ಕಾರ್ಯಕ್ರಮ. ಸ್ಥಾಪಕ ಸಮಿತಿಯನ್ನು ನಿರ್ಲಕ್ಷ್ಯ ಮಾಡಿ ಮಹಿಳಾ ದಸರಾ ನಡೆಸಿದರೆ ಮುಂದೆ ಹೋರಾಟದ ಮೂಲಕ ಮಹಿಳೆಯರು ಉತ್ತರ ನೀಡುತ್ತಾರೆ. ಸಮಿತಿಗೆ ಬರುವ ಅನುದಾನವು ಸರ್ಕಾರದ್ದೇ ಹೊರತು ಯಾರ ಕಿಸೆಯಿಂದ ನೀಡುವ ಹಣವಲ್ಲ. ಒಂದಾಗಿ ಸಾಗುವ ಮಹಿಳಾ ದಸರಾವನ್ನು ಒಡೆದು ಆಳುವ ನೀತಿ ಅನುಸರಿಸುತ್ತಿರುವದು ಸಮಿತಿಗೆ ಶೋಭೆ ತರುವಂತಹದಲ್ಲ. ಮಹಿಳಾ ದಸರಾವನ್ನು ಮಹಿಳೆಯರ ವಿವೇಚನೆಗೆ ಬಿಡಬೇಕು ಇದರಲ್ಲಿ ಸಮಿತಿ ಮಧ್ಯ ಪ್ರವೇಶಿಸಿ ಮಹಿಳೆಯರ ಹಕ್ಕನ್ನು ಕಸಿದುಕೊಳ್ಳಬಾರದು.

-ಕುಲ್ಲೇಟೀರ ಪ್ರವೀಮೊಣ್ಣಪ್ಪ, ಸ್ಥಾಪಕ ಅಧ್ಯಕ್ಷರು,

ಮಹಿಳಾ ದಸರಾ ಸಮಿತಿ

ಮಹಿಳಾ ದಸರಾದಲ್ಲಿ ಹಸ್ತಕ್ಷೇಪ

ಕಾವೇರಿ ದಸರಾ ಸಮಿತಿಯು ಕರೆದ ಸಭೆಗೆ ಭಾಗವಹಿಸಿದ್ದೆ. ಮಹಿಳಾ ದಸರಾ ಕುರಿತು ಪ್ರಸ್ತಾಪವಾದಾಗ ಮಹಿಳಾ ದಸರಾ ಸಮಿತಿಯ ಸಭೆ ಕರೆದು ಅಲ್ಲಿ ಒಮ್ಮತ್ತದ ಅಧ್ಯಕ್ಷರನ್ನು ನೇಮಕಗೊಳಿಸುವದಾಗಿ ಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡಿದರೂ ಸಮಿತಿಯು ನಮ್ಮ ಪ್ರಸ್ತಾಪಕ್ಕೆ ಗೌರವ ನೀಡಲಿಲ್ಲ. ಏಕ ಪಕ್ಷೀಯವಾಗಿ ನಡೆದುಕೊಳ್ಳುವ ಮೂಲಕ ಮಹಿಳಾ ದಸರಾದಲ್ಲಿ ಹಸ್ತಕ್ಷೇಪ ಮಾಡಿದೆ. ಈ ಹಿಂದೆ ಮಾಡಿಕೊಂಡು ಬಂದಂತಹ ಸಮಿತಿಯನ್ನು ನಿರ್ಲಕ್ಷ್ಯ ಮಾಡಿದೆ. ಇದರಿಂದ ಮನಸ್ಸಿಗೆ ನೋವಾಗಿದೆ. ಇದು ಉತ್ತಮ ಬೆಳವಣಿಗೆ ಅಲ್ಲ. ಮಹಿಳಾ ದಸರಾ ಸಮಿತಿಯಲ್ಲಿ ಯಾರೂ ಬೇಕಾದರೂ ಅಧ್ಯಕ್ಷರಾಗಬಹುದು. ಆದರೆ ಸಭೆಯಲ್ಲಿ ಸರ್ವ ಸದಸ್ಯರು ತೆಗೆದುಕೊಂಡ ನಿರ್ಧಾರಗಳೇ ಅಂತಿಮವಾಗಬೇಕು.

-ಎಂ. ಮಂಜುಳ, ಅಧ್ಯಕ್ಷರು ಮಹಿಳಾ ದಸರಾ ಸಮಿತಿ