ಕುಶಾಲನಗರ, ಸೆ. 18: ಶಿಕ್ಷಣ ಹಾಗೂ ಸಂಶೋಧನೆಗೆ ಪೂರಕ ಮಾಹಿತಿ ನೀಡುವಲ್ಲಿ ಗ್ರಂಥಾಲಯಗಳು ಬಹುಮುಖ್ಯ ಪಾತ್ರ ವಹಿಸುತ್ತವೆ ಎಂದು ಮಡಿಕೇರಿಯ ಎಫ್‍ಎಂಕೆ ಎಂಸಿಯ ಹಿರಿಯ ಗ್ರಂಥ ಪಾಲಕರಾದ ಡಾ.ಸಿ.ವಿಜಯಲತಾ ಹೇಳಿದರು.

ಚಿಕ್ಕಅಳುವಾರದಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರ ದಲ್ಲಿ ಗ್ರಂಥಾಲಯ ವಿಭಾಗದಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ, ಅಭಿವಿನ್ಯಾಸ ಕಾರ್ಯಕ್ರಮ ಹಾಗೂ ಶಾರದಾ ಪೂಜಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯದ ಪಿತಾಮಹರಾದ ಡಾ. ಎಸ್.ಆರ್.ರಂಗನಾಥನ್ ಅವರ ಜನ್ಮ ದಿನವನ್ನು ಭಾರತದಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ ಎಂದರು.

ಮಂಗಳೂರು ವಿಶ್ವ ವಿದ್ಯಾನಿಲಯದ ಗ್ರಂಥಾಲಯದಲ್ಲಿ ಇರುವ ಮಾಹಿತಿಯನ್ನು ವಿದ್ಯಾರ್ಥಿ ಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಇಥಿಯೋಫಿ ಯಾದಲ್ಲಿನ ಮೆಟ್ಟು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಸತೀಶ್ ಹನುಮಂತಪ್ಪ ಮಾತನಾಡಿ, 'ಇ-ಗ್ರಂಥಾಲಯ' ಪ್ರಸ್ತುತ ದಿನಗಳಲ್ಲಿ ಗ್ರಂಥಾಲಯಗಳಲ್ಲಿ ಅತಿ ಹೆಚ್ಚು ಬಳಕೆಯಲ್ಲಿದೆ.

ಪುಸ್ತಕ ಮತ್ತು ನಿಯತಕಾಲಿಕೆ ಗಳನ್ನು ಬರೆಯುವ ವಿಧಾನ ಹಾಗೂ ಅದರ ಬಳಕೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ದೇಶ ಮತ್ತು ವಿದೇಶಗಳಲ್ಲಿ ಇರುವ 'ಇ-ಗ್ರಂಥಾಲಯ' ಗಳ ವ್ಯತ್ಯಾಸ, ಅಲ್ಲಿನ ಗ್ರಂಥಾಲಯಗಳನ್ನು ವಿದ್ಯಾರ್ಥಿಗಳು ಬಳಸುವ ರೀತಿ, ವಿದ್ಯಾರ್ಥಿಗಳ ಜ್ಞಾನ, ಸಂಶೋಧನೆಗಳ ಅಪಾರ ಮಾಹಿತಿಯ ಬಗ್ಗೆ ವಿದ್ಯಾರ್ಥಿ ಗಳಿಗೆ ಅರಿವು ಮೂಡಿಸಿದರು.

ಕಾರ್ಯಕ್ರಮದಲ್ಲಿ ಸಹಾಯಕ ಗ್ರಂಥಪಾಲಕರಾದ ಕೆ. ಜೆ. ಹರೀಶ್ ಪ್ರಾಸ್ತಾವಿಕ ನುಡಿಗಳಾಡಿದರು. ಮುಂದಿನ ದಿನಗಳಲ್ಲಿ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರಲ್ಲಿಯೂ ಸಹ 'ಇ-ಗ್ರಂಥಾಲಯ' ವನ್ನು ತೆರೆಯಲು ವಿಶ್ವವಿದ್ಯಾನಿಲಯದ ಮೇಲಾಧಿಕಾರಿ ಗಳು ಈಗಾಗಲೇ ಭರವಸೆಯನ್ನು ನೀಡಿದ್ದಾರೆ. ಅದುದರಿಂದ ಆದಷ್ಟು ಬೇಗ ಕಾರ್ಯರೂಪಕ್ಕೆ ತರಲಾಗುವದು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಭಾರ ನಿರ್ದೇಶಕರಾದ ಪ್ರೊ. ಮಂಜುಳಾ ಶಾಂತರಾಮ್ ಮಾತನಾಡಿ, ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗು ವಂತಹ ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಪಟ್ಟ ವಿಭಾಗವಾರು ಪುಸ್ತಕಗಳನ್ನು ಇರಿಸಲಾಗಿದೆ. ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳು ಹೆಚ್ಚು ಕಾಲ ಓದಿನಲ್ಲಿ ತೊಡಗಿಸಿ ಕೊಳ್ಳಬೇಕು ಎಂದರು.

ಸಂಶೋಧನಾ ವಿದ್ಯಾರ್ಥಿನಿ ವರ್ಷ ಕಾರ್ಯಕ್ರಮ ನಿರೂಪಿಸಿದರು, ಸಹಾಯಕ ಗ್ರಂಥಪಾಲಕರಾದ ಕೆ.ಜೆ.ಹರೀಶ್ ಸ್ವಾಗತಿಸಿದರು, ಕಚೇರಿ ಸಹಾಯಕ ಎ.ಆರ್.ಗಣೇಶ್ ವಂದಿಸಿದರು.