ಗೋಣಿಕೊಪ್ಪ ವರದಿ, ಸೆ. 18: ಹೈಸೊಡ್ಲೂರು ಗ್ರಾಮದ ಸರ್ಕಾರಿ ಜಾಗದಲ್ಲಿ ಬದುಕು ಸಾಗಿಸುತ್ತಿರುವ ನಿರಾಶ್ರಿತರಿಗೆ ಜಿಲ್ಲಾಡಳಿತ ಕೂಡಲೇ ಹಕ್ಕುಪತ್ರ ವಿತರಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ವಿಭಾಗೀಯ ಸಂಚಾಲಕ ಕೃಷ್ಣಪ್ಪ ಒತ್ತಾಯಿಸಿದ್ದಾರೆ.

ಒಂದು ಎಕರೆ ಸರ್ಕಾರಿ ಜಾಗದಲ್ಲಿ ಸುಮಾರು 74 ಕುಟುಂಬ ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಜಿಲ್ಲಾಡಳಿತ ಹಕ್ಕುಪತ್ರ ನೀಡುವ ಮೂಲಕ ಮೂಲಭೂತ ಸೌಕರ್ಯ ನೀಡಲು ಯೋಜನೆ ರೂಪಿಸುವಂತಾಗಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಸ್ಥಳೀಯ ಗ್ರಾಮ ಪಂಚಾಯಿತಿ ಇಲ್ಲಿನ 1 ಎಕರೆ ಜಾಗವನ್ನು ನಿರಾಶ್ರಿತರಿಗೆ ಕಾಯ್ದಿರಿಸಿದೆ. ಆದರೆ, ಇವರಿಗೆ ಹಕ್ಕುಪತ್ರ ವಿತರಿಸಿಲ್ಲ. ಮೂಲಭೂತ ಸೌಲಭ್ಯ ಕೂಡ ನೀಡದಿರುವದರಿಂದ ಅವರ ಬದುಕು ಶೋಚನೀಯವಾಗಿದೆ ಎಂದರು.

ಜಿಲ್ಲಾ ಸಂಚಾಲಕ ಎಚ್. ಆರ್. ಪರಶುರಾಮ್ ಮಾತನಾಡಿ, ಇಲ್ಲಿನ ನಿವಾಸಿಗಳಿಗೆ ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ವತಿಯಿಂದ ರೂ. 1.68 ಲಕ್ಷದ ಮೂಲಭೂತ ವಸ್ತುಗಳನ್ನು ನೀಡಿ ಮಾನವೀಯತೆ ಮೆರೆದಿದೆ. ಸೋಲಾರ್ ದೀಪ, ತಾತ್ಕಾಲಿಕ ಶೌಚಗೃಹ, ಹಾಸಿಗೆ ಇಂತಹವುಗಳನ್ನು ನೀಡಿರುವದರಿಂದ ಒಂದಷ್ಟು ಪ್ರಯೋಜನವಾಗಿದೆ. ನಿರಾಶ್ರತರಿಗೆ ಸ್ಪಂದಿಸುತ್ತಿರುವ ಸ್ವಾಮೀಜಿ ಬೋಧಸ್ವರೂಪ ನಂದಾಜಿ ಅವರ ಕಾರ್ಯ ಮೆಚ್ಚಿವಂತಹದ್ದು. ಇಲ್ಲಿನವರಿಗೆ ಉಚಿತ ಶಿಕ್ಷಣಕ್ಕೆ ಆಶ್ರಮದಿಂದ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಸ್ಥಳೀಯ ಪದವಿದರರಿಗೆ ಗೌರವ ಧನ ನೀಡುವ ಮೂಲಕ ಅಕ್ಷರಾಭ್ಯಾಸ ಮಾಡಲಾಗುತ್ತಿದೆ. ಆರೋಗ್ಯ ಶಿಬಿರ ನಡೆಸಲಾಗುತ್ತಿದೆ. ಆದರೆ 11 ತಿಂಗಳುಗಳಿಂದ ಇಲ್ಲಿ ನೆಲೆಸಿರು ವವರಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಕೂಡಲೇ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಸಂಘಟನಾ ಸಂಚಾಲಕ ಗಣೇಶ್, ಕರ್ಕು, ಕಾರ್ಯಕರ್ತ ಸುಬ್ರು ಇದ್ದರು.