ಮಡಿಕೇರಿ, ಸೆ.18: ಜಿಲ್ಲೆಯಲ್ಲಿ ತೀವ್ರ ಅತಿವೃಷ್ಟಿಯಿಂದ ಹಾನಿಯಾದ ರಸ್ತೆ, ಸೇತುವೆ ಸೇರಿದಂತೆ ವಿವಿಧ ಕಾಮಗಾರಿಗಳು ಹಾಗೂ ಮೂಲ ಸೌಲಭ್ಯಕ್ಕಾಗಿ ಸರ್ಕಾರದಿಂದ 100 ಕೋಟಿ ರೂ. ಬಿಡುಗಡೆಗೆ ಮಂಜೂರಾತಿ ದೊರೆತಿದ್ದು, ಸಂಬಂಧಪಟ್ಟ ಅನುಷ್ಠಾನಾಧಿಕಾರಿಗಳು ಅಂದಾಜು ಪಟ್ಟಿಯನ್ನು ಕೂಡಲೇ ಸಲ್ಲಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಸಂಬಂಧ ಬುಧವಾರ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಸರ್ಕಾರದ ನಿಯಮದಂತೆ ಕಾಮಗಾರಿ ಕೈಗೊಳ್ಳಬೇಕು. ರಸ್ತೆ, ಸೇತುವೆ, ತಡೆಗೋಡೆ ನಿರ್ಮಾಣ, ಅಂಗನವಾಡಿ, ಶಾಲೆಗಳು ಮತ್ತು ಪಶು ವೈದ್ಯ ಆಸ್ಪತ್ರೆ ಕಟ್ಟಡಗಳನ್ನು ಸರಿಪಡಿಸುವದು ಹಾಗೂ ಅಯ್ಯಪ್ಪ ಬೆಟ್ಟದಲ್ಲಿ ಜಿಎಸ್‍ಐ ವರದಿಯಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಇಂಜಿನಿಯರ್‍ಗಳಿಗೆ ಸೂಚಿಸಿದರು.

ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗಿರುವ ಪ್ರದೇಶಗಳಲ್ಲಿ ಆದ್ಯತೆ ಮೇರೆ ಕಾಮಗಾರಿ ಕೆಗೆತ್ತಿಕೊಳ್ಳುವಂತೆ ಜಿಲ್ಲಾಧಿಕಾರಿ ಸಲಹೆ ನೀಡಿದರು.

ವಿವಿಧ ಕಾಮಗಾರಿಗೆ ಸಂಬಂಧಿಸಿದಂತೆ ಹೋಬಳಿವಾರು ಅಂದಾಜು ಪಟ್ಟಿ ಸಲ್ಲಿಸಬೇಕು. ಪ್ರಕೃತಿ ವಿಕೋಪ ಸಂಭವಿಸಿದ ವ್ಯಾಪ್ತಿಯಲ್ಲಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ ಮಾಹಿತಿ ಪಡೆಯುವದು. ಕಾಮಗಾರಿ ವಿವರ ಮತ್ತಿತರ ಸಂಬಂಧ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುವದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ ಮಾತನಾಡಿ ಆದ್ಯತೆ ಮೇಲೆ ಕಾಮಗಾರಿಗಳನ್ನು ಕೈಗೊಳ್ಳಬೇಕು. ನಿಯಮವನ್ನು ಪಾಲಿಸುವಂತೆ ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಲೋಕೋಪಯೋಗಿ ಇಲಾಖೆ ಎಇಇ ಸುರೇಶ್, ನಗರಾಭಿವೃದ್ಧಿ ಯೋಜನಾ ಕೋಶದ ಎಇಇ ಹೇಮಂತ್‍ಕುಮಾರ್, ಪಿಎಂಜಿಎಸ್‍ವೈ ಎಂಜಿನಿಯರ್ ಗುಂಡಪ್ಪ, ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಕಾಂತರಾಜು, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ತಮ್ಮಯ್ಯ ಪ್ರವಾಸೋದ್ಯಮ ಅಧಿಕಾರಿ ರಾಘವೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮ ಅಧಿಕಾರಿ ಅರುಂಧತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಕಾಶೀನಾಥ್ ಇತರರು ಇದ್ದರು.