ಮಡಿಕೇರಿ, ಸೆ. 18: ರಾಜ್ಯ ಸರಕಾರದ ಸಹಕಾರಿ ಸಾಲಮನ್ನಾ ಯೋಜನೆ 2018 ರಡಿಯಲ್ಲಿ ಜಿಲ್ಲೆಯ ಅರ್ಹ ರೈತ ಫಲಾನುಭವಿಗಳ ಖಾತೆಗೆ ಬಿಡುಗಡೆಯಾಗಲು ಬಾಕಿ ಉಳಿದಿದ್ದ ರೂ. 15.61 ಕೋಟಿ ಮೊತ್ತವನ್ನು ತಾ. 17 ರಂದು ರಾಜ್ಯದ ಮುಖ್ಯಮಂತ್ರಿಗಳು ಬಿಡುಗಡೆಗೊಳಿಸಿದ್ದು, ಈ ಮೊತ್ತವನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ. ಈ ಮೊತ್ತವೂ ಸೇರಿದಂತೆ ಒಟ್ಟು ರೂ. 48.25 ಕೋಟಿ ಮೊತ್ತ ಬಿಡುಗಡೆಯಾದಂತಾಗಿದೆ. ಈ ಬಗ್ಗೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ಅಧ್ಯಕ್ಷ ಬಾಂಡ್ ಗಣಪತಿ ಅವರು ಪತ್ರಿಕೆಗೆ ಮಾಹಿತಿ ಒದಗಿಸಿದ್ದಾರೆ.

ವಿವರ ಇಂತಿದೆ: ರಾಜ್ಯ ಸರಕಾರದ ‘ಸಹಕಾರಿ ಸಾಲ ಮನ್ನಾ ಯೋಜನೆ-2018’ರಡಿ ಜಿಲ್ಲೆಯ ಸಹಕಾರ ಸಂಘಗಳಲ್ಲಿ ದಿನಾಂಕ 10.7.2018ಕ್ಕೆ ಅಲ್ಪಾವಧಿ ಬೆಳೆ ಸಾಲ ಪಡೆದು ಹೊರಬಾಕಿ ಉಳಿಸಿಕೊಂಡಿದ್ದ 32,903 ರೈತರ ಗರಿಷ್ಠ ರೂ. 1.00 ಲಕ್ಷ ಸಾಲ ಮನ್ನಾ ಒಟ್ಟು ಮೊತ್ತ ರೂ. 254.81 ಕೋಟಿ ಬಿಡುಗಡೆಗೊಳಿಸಲು ಕೋರಿ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು.

ಈ ಪೈಕಿ ತಹಲ್‍ವರೆಗೆ ಸರಕಾರವು 16,673 ರೈತರ ರೂ. 116.71 ಕೋಟಿ ಮೊತ್ತವನ್ನು ಬಿಡುಗಡೆಗೊಳಿಸಲು ಅರ್ಹವೆಂದು ಪರಿಗಣಿಸಿದ್ದು, ಹಿಂದಿನ ಸರಕಾರವು ಈಗಾಗಲೇ 10,421 ರೈತರಿಗೆ ರೂ. 68.45 ಕೋಟಿ ಮೊತ್ತವನ್ನು ಬಿಡುಗಡೆಗೊಳಿಸಿ, ಅರ್ಹರೆಂದು ಪರಿಗಣಿಸಲಾಗಿದ್ದ 16,673 ರೈತರ ಪೈಕಿ 6,252 ರೈತರ ರೂ. 48.25 ಕೋಟಿ ಮೊತ್ತವನ್ನು ಬಿಡುಗಡೆಗೊಳಿಸಲು ಬಾಕಿ ಉಳಿಸಿಕೊಂಡಿತ್ತು.

ಈ ಸಂಬಂಧ ಜಿಲ್ಲೆಯ ಎಲ್ಲಾ ರೈತರ ಪರವಾಗಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷರು ಹಾಗೂ ಅಪೆಕ್ಸ್ ಬ್ಯಾಂಕಿನ ನಿರ್ದೇಶಕರೂ ಆಗಿರುವ ಕೊಡಂದೇರ ಪಿ. ಗಣಪತಿ ಅವರ ಮೂಲಕ ಸಹಕಾರ ಸಂಘಗಳ ವ್ಯಾಪ್ತಿಯ ಎಲ್ಲ 32,903 ರೈತರಿಗೂ ಸಾಲ ಮನ್ನಾ ಮೊತ್ತವನ್ನು ಬಿಡುಗಡೆಗೊಳಿಸಿಕೊಡುವಂತೆ ಸರಕಾರಕ್ಕೆ ಹಾಗೂ ಜಿಲ್ಲೆಯ ಶಾಸಕರಿಗೆ ಮನವಿ ಪತ್ರವನ್ನು ಸಲ್ಲಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಈ ಕೋರಿಕೆಯನ್ನು ವಿಶೇಷವಾಗಿ ಪರಿಗಣಿಸಿ, ರಾಜ್ಯದ ಮುಖ್ಯಮಂತ್ರಿಗಳು ಶೀಘ್ರ ಕ್ರಮವಹಿಸಿ ಸಾಲ ಮನ್ನಾಕ್ಕೆ ಅರ್ಹತೆ ಪಡೆದಿರುವ ಜಿಲ್ಲೆಯ 16,673 ರೈತರ ಪೈಕಿ ಈವರೆಗೆ ಬಿಡುಗಡೆಗೆ ಬಾಕಿ ಉಳಿಸಿಕೊಂಡಿದ್ದ 6,252 ರೈತರ ರೂ. 48.25 ಕೋಟಿ ಮೊತ್ತದಲ್ಲಿ ದಿನಾಂಕ 13.9.2019 ರಂದು 4,257 ರೈತರಿಗೆ ಸಂಬಂಧಿಸಿದ ರೂ. 32.64 ಕೋಟಿಯನ್ನು ಬಿಡುಗಡೆಗೊಳಿಸಿ ಈ ವಿಚಾರದಲ್ಲಿ ಬಾಕಿ ಮೊತ್ತ ಬಿಡುಗಡೆಗೆ ಬ್ಯಾಂಕಿನ ಅಧ್ಯಕ್ಷರು ಅಪೆಕ್ಸ್ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರೊಂದಿಗೆ ಖುದ್ದು ಸಮಾಲೋಚನೆ ನಡೆಸಿ ಜಿಲ್ಲೆಗೆ ಬಿಡುಗಡೆಗೆ ಬಾಕಿ ಇರುವ ಮೊತ್ತವನ್ನು ಬಿಡುಗಡೆಗೊಳಿಸಿಕೊಡುವಂತೆ ಒತ್ತಾಯ ಹೇರಿದ ಮೇರೆ ಇದೀಗ ತಾ. 17 ರಂದು 1,995 ರೈತರಿಗೆ ಸಂಬಂಧಿಸಿದ ರೂ. 15.61 ಕೋಟಿ ಮೊತ್ತವನ್ನು ಫಲಾನುಭವಿ ರೈತರ ಖಾತೆಗೆ ಜಮೆ ಮಾಡಲಾಗಿರುತ್ತದೆ.

ಜಿಲ್ಲೆಯಲ್ಲಿನ ಅರ್ಹ 32,903 ಫಲಾನುಭವಿಗಳ ಪೈಕಿ ಇನ್ನು ಬಿಡುಗಡೆಗೆ ಬಾಕಿ ಇರುವ 16,230 ರೈತರ ಖಾತೆಗೆ ಜಮೆ ಮಾಡಲು ಬಾಕಿ ಇರುವ ರೂ. 138.11 ಕೋಟಿ ಮೊತ್ತವನ್ನು ಸರಕಾರದ ಹಂತದಲ್ಲಿ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಬಿಡುಗಡೆಗೊಳಿಸಲು ಕ್ರಮಕೈಗೊಳ್ಳಲಾಗುವದೆಂಬ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿರುತ್ತಾರೆಂದು ಸಹಕಾರಿ ರೈತರಿಗೆ ಬ್ಯಾಂಕ್ ತಿಳಿಯಪಡಿಸಿದ್ದು, ಈ ನಿಟ್ಟಿನಲ್ಲಿ ಸಹಕರಿಸಿರುವ ಜಿಲ್ಲೆಯ ಶಾಸಕರಿಗೆ ಈ ಮೂಲಕ ಧನ್ಯವಾದಗಳನ್ನು ಸಲ್ಲಿಸುವದಾಗಿ ಮಾಹಿತಿ ನೀಡಿದೆ.