ಮಡಿಕೇರಿ, ಸೆ. 18: ಮಡಿಕೇರಿ ತಾಲೂಕು ಪಂಚಾಯಿತಿ ಸಭೆಯಲ್ಲಿ ವಿದ್ಯಾರ್ಥಿ ನಿಲಯಗಳ ನಿರ್ವಹಣೆಯ ಕುರಿತು ಟೀಕೆಗಳು ವ್ಯಕ್ತಗೊಂಡ ಬೆನ್ನಲ್ಲೇ ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ ಅವರು, ದಿಢೀರ್ ಭೇಟಿ ನೀಡಿ ವಸತಿ ನಿಲಯ ವಿದ್ಯಾರ್ಥಿಗಳ ಕುಂದುಕೊರತೆ ಆಲಿಸಿದರು. ಕೊಡಗಿನ ಗಡಿ ಗ್ರಾಮಗಳಲ್ಲಿ ಇರುವ ಪೆರಾಜೆ ಹಾಗೂ ಕರಿಕೆಯ ವಿದ್ಯಾರ್ಥಿ ನಿಲಯಗಳಿಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಅವರು, ಮಕ್ಕಳಿಗೆ ಅಗತ್ಯ ಸೌಲಭ್ಯದ ಕುರಿತು ಮಾಹಿತಿ ಪಡೆದರು.ಪೆರಾಜೆಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೆಟ್ರಿಕ್‍ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ ಬೋಪಣ್ಣ, ವಸತಿ ನಿಲಯದ ಮಕ್ಕಳು ಓದುತ್ತಿರುವ ಶಾಲೆಗೂ ತೆರಳಿ ಅಲ್ಲಿನ ಶಿಕ್ಷಕರ, ಮಕ್ಕಳ ಅಭಿಪ್ರಾಯ ಪಡೆದು ಕೊಂಡರು.

ವಸತಿ ನಿಲಯದಲ್ಲಿ ಮಳೆಯ ನಡುವೆ ಸಣ್ಣ ಪುಟ್ಟ ನ್ಯೂನ್ಯತೆ ಹೊರತಾಗಿ 31 ವಿದ್ಯಾರ್ಥಿಗಳು ಕಲಿಯುತ್ತಿದ್ದು, ವ್ಯವಸ್ಥೆ ಕೂಡ ಚೆನ್ನಾಗಿದೆ ಎಂದು ಅಲ್ಲಿನ ಜ್ಯೋತಿ ಪ್ರೌಢಶಾಲೆಯ ಮುಖ್ಯೋಪಾಧ್ಯಾ ಯರು ಮಾಹಿತಿ ನೀಡಿದರು. ಸ್ಥಳೀಯ ಅಲ್ಲಿನ ಗ್ರಾ.ಪಂ. ಅಧ್ಯಕ್ಷರ ಪತಿಯೇ ಅಡುಗೆ ಸಹಾಯಕ ರಾಗಿದ್ದು; ಮಕ್ಕಳಿಗೆ ಇಲಾಖೆಯ ವೇಳಾಪಟ್ಟಿಯಂತೆ ಆಹಾರ ಇತ್ಯಾದಿ ಕಲ್ಪಿಸುತ್ತಿರುವದಾಗಿ ಮೇಲ್ವಿಚಾರಕ ಶಿವಣ್ಣ ವಿವರಿಸಿದರು.

ವಸತಿ ನಿಲಯ ಪಕ್ಕದಲ್ಲಿ ಯಾವದೇ ಆರೋಗ್ಯ ಕೇಂದ್ರ ಇಲ್ಲದ ಕಾರಣ; ದೂರದ ಸಂಪಾಜೆಗೆ ಮಕ್ಕಳನ್ನು ಕರೆದೊಯ್ದು ಆರೋಗ್ಯ ಪರೀಕ್ಷೆ ಮಾಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಮಕ್ಕಳಿಗೆ ದೈನಂದಿನ ಆಟ - ಪಾಠಗಳೊಂದಿಗೆ ಆಹಾರ, ಸ್ನಾನ, ಕಲಿಕಾ ಚಟುವಟಿಕೆ ಯತ್ತ ಹೆಚ್ಚಿನ ನಿಗಾವಹಿಸಬೇಕೆಂದು ಸ್ಥಾಯಿ ಸಮಿತಿಯ ಅಧ್ಯಕ್ಷರು ತಿಳಿ ಹೇಳಿದರು.(ಮೊದಲ ಪುಟದಿಂದ)

ಕರಿಕೆಗೆ ಭೇಟಿ : ಪೆರಾಜೆ ಅಂಗನವಾಡಿ ಕೇಂದ್ರಕ್ಕೂ ಭೇಟಿ ನೀಡಿದ ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಅಧಿಕಾರಿಗಳ ತಂಡ ಮಕ್ಕಳ ಯೋಗಕ್ಷೇಮ ವಿಚಾರಿಸಿ; ದೈನಂದಿನ ಚಟುವಟಿಕೆಯ ಮಾಹಿತಿಯನ್ನು ಅಲ್ಲಿನ ಕಾರ್ಯಕರ್ತರಿಂದ ಪಡೆಯಿತು.

ಆ ಬಳಿಕ ಕರಿಕೆಯಲ್ಲಿರುವ ಒಂದನೇ ತರಗತಿಯಿಂದ 7ನೇ ತರಗತಿವರೆಗಿನ ಪುಟ್ಟ ಮಕ್ಕಳ ವಿದ್ಯಾರ್ಥಿ ನಿಲಯಕ್ಕೆ ತೆರಳಿ ಪರಿಶೀಲಿಸಿದ ತಂಡ; ಮಕ್ಕಳು ಚಿಕ್ಕವರಿರುವ ಕಾರಣ ಹೆಚ್ಚಿನ ಕಾಳಜಿಯಿಂದ ನೋಡಿಕೊಳ್ಳಬೇಕೆಂದು ಮೇಲ್ವಿಚಾರಕರಿಗೆ ಸಲಹೆ ನೀಡಿತು. ಅಲ್ಲಿನ ರಸ್ತೆ ಸಮಸ್ಯೆ, ಮೂಲಭೂತ ಸೌಕರ್ಯಗಳ ಬಗ್ಗೆ ಜಿ.ಪಂ. ಸದಸ್ಯೆ ಕವಿತಾ ಪ್ರಭಾಕರ್ ಗಮನ ಸೆಳೆದರು.

ಅನಂತರ ಚೇರಂಬಾಣೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‍ಪೂರ್ವ ಬಾಲಕರ ವಸತಿ ನಿಲಯಕ್ಕೂ ಭೇಟಿ ನೀಡಿದ ತಂಡ; ಮಕ್ಕಳೊಂದಿಗೆ ಚರ್ಚಿಸುವ ಮೂಲಕ ಶಿಕ್ಷಣದಲ್ಲಿ ಸಾಧನೆ ತೋರುವ ದಿಸೆಯಲ್ಲಿ ಸಲಹೆ ನೀಡಿತು. ಎಲ್ಲ ವಸತಿ ನಿಲಯಗಳ ಮಕ್ಕಳಿಗೆ ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ ಈ ವೇಳೆ ಸಿಹಿ ಹಂಚಲಾಯಿತು.

ಇತ್ತೀಚಿನ ವರ್ಷಗಳಲ್ಲಿ ಸರಕಾರ ಆಯಾ ಇಲಾಖೆಗಳ ಮುಖಾಂತರ; ಹಿಂದುಳಿದ ಮತ್ತು ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ ಮಕ್ಕಳ ಕಲಿಕೆಗಾಗಿ ಸಾಕಷ್ಟು ಸವಲತ್ತು ಕಲ್ಪಿಸಿದ್ದು; ಆಗಿಂದಾಗೆ ಆಯಾ ತಾ.ಪಂ. ಹಾಗೂ ಗ್ರಾ.ಪಂ. ಪ್ರತಿನಿಧಿಗಳು ಮಕ್ಕಳ ಬಗ್ಗೆ ಕಾಳಜಿ ವಹಿಸಿ ವಸತಿ ನಿಲಯಗಳ ನ್ಯೂನ್ಯತೆ ಸರಿಪಡಿಸಬೇಕೆಂದು ಸಿ.ಕೆ. ಬೋಪಣ್ಣ ಕಿವಿಮಾತು ಹೇಳಿದರು.

ಯಾರು ಗಮನಿಸಬೇಕು?: ವಿವಿಧ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿದ ಸಿ.ಕೆ. ಬೋಪಣ್ಣ ‘ಶಕ್ತಿ’ಯೊಂದಿಗೆ ಮಾತನಾಡುತ್ತಾ ಇಂತಹ ವಸತಿ ನಿಲಯಗಳನ್ನು ಆಯ ಗ್ರಾ.ಪಂ. ಹಾಗೂ ತಾ.ಪಂ. ಪ್ರತಿನಿಧಿಗಳು ನಿಗಾವಹಿಸಿ ನೋಡಿಕೊಳ್ಳಬೇಕೆಂದು ನುಡಿದರಲ್ಲದೆ; ಸಮಸ್ಯೆಗಳನ್ನು ಸರಿಪಡಿಸುವ ಕಾಳಜಿ ಬದಲು ಟೀಕಿಸುವದು ಶೋಭೆಯಲ್ಲವೆಂದು ನೆನಪಿಸಿದರು. ಅಲ್ಲದೆ ಖುದ್ದು ಪರಿಶೀಲನೆ ಮಾಡದೆ ರಾಜಕೀಯ ಬೇಳೆ ಬೇಯಿಸಿಕೊಳ್ಳಬಾರದೆಂದು ತಾ.ಪಂ. ಪ್ರತಿನಿಧಿಗಳಿಗೆ ಕಿವಿಮಾತು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಭಾರತಿ, ಐಟಿಡಿಪಿ ಅಧಿಕಾರಿ ಶಿವಕುಮಾರ್ ಸಹಾಯಕ ನಿರ್ದೇಶಕ ಚಿಕ್ಕಬಸವಯ್ಯ ಹಾಗೂ ಇತರ ಸಿಬ್ಬಂದಿ ಹಾಜರಿದ್ದರು.