ಗೋಣಿಕೊಪ್ಪಲು, ಸೆ. 18: ಕಾನೂರು ನಂ.2783ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಇದರ 76 ನೇ ವಾರ್ಷಿಕ ಮಹಾಸಭೆ ತಾ.20 ರಂದು ಸಂಘದ ಅಮೃತ ಮಹೋತ್ಸವ ಸಭಾಂಗಣದಲ್ಲಿ ನಡೆಯಲಿದ್ದು, 2018-19ನೇ ಸಾಲಿನಲ್ಲಿ

ವಿವಿಧ ವಹಿವಾಟುಗಳ ಮೂಲಕ ರೂ. 65,38,928 ಲಕ್ಷ ಲಾಭಗಳಿಸಿರು ವದಾಗಿ ಸಂಘದ ಅಧ್ಯಕ್ಷ ಅಳಮೇಂಗಡ ವಿವೇಕ್ ತಿಳಿಸಿದ್ದಾರೆ.

ಸಹಕಾರ ಸಂಘದ ಆಡಳಿತ ಕಚೇರಿಯಲ್ಲಿ ಇಂದು ನಡೆದ ನಿರ್ದೇಶಕರ ಸಭೆಯಲ್ಲಿ ಮಾಹಿತಿ ನೀಡಿದ ಅವರು, 1937 ರಲ್ಲಿ ಸಂಘ ಸ್ಥಾಪನೆಯಾಗಿದ್ದು, ಇಂದಿಗೆ 82ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. 50ನೇ ವರ್ಷದ ಸುವರ್ಣ ಮಹೋತ್ಸವ ಹಾಗೂ 75 ನೇ ವರ್ಷದ ಅಮೃತ ಮಹೋತ್ಸವವನ್ನು ಈಗಾಗಲೇ ಆಚರಿಸಲಾಗಿದ್ದು, 2009 ರಿಂದ 2019 ರವರೆಗೆ ಆಡಿಟ್‍ನಲ್ಲಿ ಸತತ ‘ಎ’ ತರಗತಿಯನ್ನು ಹೊಂದಿದ್ದು, ನಿರಂತರವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವದಾಗಿ ಹೇಳಿದರು.

ಸಂಘದಲ್ಲಿ 1490 ಸದಸ್ಯರಿದ್ದು, ಪಾಲು ಬಂಡವಾಳ ರೂ. 1,38,74,850 ಇದ್ದು,ಸಂಘದಲ್ಲಿ ದಿನಾಂಕ 31.8.2019ಕ್ಕೆ ಸಂಚಯ ಠೇವಣಿ, ನಿರಖು ಠೇವಣಿ, ಪಿಗ್ಮಿ ಠೇವಣಿ ಮತ್ತು ಸಿಬ್ಬಂದಿ ಠೇವಣಿ ಸೇರಿ ಒಟ್ಟು ರೂ. 4,45,35,608 ಮೊತ್ತ ಸಂಗ್ರಹವಾಗಿದೆ.

ಸಂಘದಲ್ಲಿ ಕ್ಷೇಮನಿಧಿ ರೂ.2,51,71,786, ಜಿಲ್ಲಾ ಬ್ಯಾಂಕ್‍ನಲ್ಲಿ ರೂ.2.54 ಕೋಟಿ ಕ್ಷೇಮ ನಿಧಿ, ಕಾಫಿ ತೋಟದ ಬಂಡವಾಳ ಮತ್ತು ಅಭಿವೃದ್ಧಿ ನಿಧಿ ರೂ.1.30 ಕೋಟಿ ಇರುವದಾಗಿ ವಿವರಿಸಿದರು.

ಸಂಘದ ಕಟ್ಟಡ ನಿಧಿ ಹಾಗೂ ಇತರೆ ನಿಧಿಗಳು ರೂ.1.64 ಕೋಟಿ ಇದ್ದು, ಸಂಘವು ಸದಸ್ಯರಿಗೆ ಫಸಲು ಮತ್ತು ಕೆ.ಸಿ.ಸಿ.ಸಾಲದ ರೂಪದಲ್ಲಿ ರೂ. 7,84,56,000( ಒಟ್ಟು 481 ಮಂದಿ ಸದಸ್ಯರು), ಜಾಮೀನು ಸಾಲ 112 ಸದಸ್ಯರಿಗೆ ರೂ. 10,53,000 ಪಿಗ್ಮಿ ಠೇವಣಿ ಸಾಲ ರೂ. 12,69,000 ಹಾಗೂ ಸ್ವಸಹಾಯ ಗುಂಪುಗಳಿಗೆ ರೂ. 5,00,000 ಸಾಲವನ್ನು ವಿಸ್ತರಿಸಲಾಗಿದೆ ಎಂದು ಮಾಹಿತಿ ನೀಡಿದರು. ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ ರೂ.2.96 ಕೋಟಿ ಸಾಲ ಪಡೆಯಲಾಗಿದೆ ಹಾಗೂ ಸಂಘದ ಸ್ವಂತ ಬಂಡವಾಳದಿಂದ ರೂ.4.88 ಕೋಟಿ ಕೆ.ಸಿ.ಸಿ.ಸಾಲವನ್ನು ಸದಸ್ಯರಿಗೆ ನೀಡಲಾಗಿದೆ. ಕಳೆದ ಸಾಲಿನಲ್ಲಿ ರೈತರು ಶೇ.100 ಕೆಸಿಸಿ ಸಾಲ ಮರುಪಾವತಿ ಮಾಡಿದ್ದು, ಜಾಮೀನು ಸಾಲ ರೂ.50 ಸಾವಿರ ಸುಸ್ತಿಯಾಗಿದ್ದು ವಸೂಲಾತಿಗೆ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಸಾಲಿಗೆ ರೈತರು ಹೊಂದಿಕೊಂಡ ತಲಾ ರೂ.3 ಲಕ್ಷ ಸಾಲವನ್ನು 365 ದಿನದೊಳಗೆ ಪಾವತಿಸುವ ಮೂಲಕ ಶೂನ್ಯ ಬಡ್ಡಿ ಸೌಲಭ್ಯ ಹೊಂದಿಕೊಳ್ಳಲು ಅಧ್ಯಕ್ಷ ವಿವೇಕ್ ಮನವಿ ಮಾಡಿದ್ದಾರೆ.

ಸಾಲ ಮನ್ನಾ ಒತ್ತಾಯ : ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವಧಿಯಲ್ಲಿ ಘೋಷಣೆಯಾದ ಸಾಲ ಮನ್ನಾ ಎಲ್ಲ ಕೃಷಿಕರಿಗೂ ಇನ್ನೂ ಪಾವತಿಯಾಗಿಲ್ಲ. ಈ ಬಾರಿ ಅತಿವೃಷ್ಟಿಯಿಂದಾಗಿ ಕಾನೂರು ಭಾಗದ ರೈತಾಪಿ ವರ್ಗ ಕಾಫಿ,ಕಾಳುಮೆಣಸು ಹಾಗೂ ಭತ್ತದ ಕೃಷಿಯಲ್ಲಿ ತೀವೃ ನಷ್ಟ ಹಾಗೂ ಅಡಿಕೆಗೂ ಕೊಳೆರೋಗದ ಹಿನ್ನೆಲೆ ನಷ್ಟ ಅನುಭವಿಸಿದ್ದು ಯಡಿಯೂರಪ್ಪ ಸರ್ಕಾರವೂ ಕೊಡಗಿಗೆ ವಿಶೇಷವಾಗಿ ಸಾಲ ಮನ್ನಾ ಹಾಗೂ ಫಸಲು ನಷ್ಟದ ಪರಿಹಾರ ಮೊತ್ತವನ್ನು ಹೆಚ್ಚಿಸಲು ಆಡಳಿತ ಮಂಡಳಿ ನಿರ್ದೇಶಕರ ಸಭೆಯಲ್ಲಿ ಒತ್ತಾಯಿಸಿದ್ದಾರೆ.

ಈ ಹಿಂದಿನ ಸರ್ಕಾರ ಡೀಸೆಲ್ ಹಾಗೂ ಪೆಟ್ರೋಲ್ ದರವನ್ನು ಏರಿಸುವ ಮೂಲಕ ಸಾಲಮನ್ನಾ ಮೊತ್ತವನ್ನು ಸರಿದೂಗಿಸಿದೆ. ಇದು ಸರಿಯಾದ ಕ್ರಮವಲ್ಲ ಎಂದು ಆರೋಪಿಸಿದ್ದಾರೆ.

ಎ.ಎ. ವಿವೇಕ್ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಉಪಾಧ್ಯಕ್ಷ ಕೆ.ಸಿ.ಮುತ್ತಪ್ಪ, ನಿರ್ದೇಶಕರಾದ ಕೆ.ಎಸ್.ಬೋಪಣ್ಣ, ಕೆ.ಎಸ್.ಭರತ್, ಸಿ.ಬಿ.ಬೆಳ್ಯಪ್ಪ, ಕೆ.ಆರ್.ಸುರೇಶ್, ಎಂ.ಕೆ. ರವಿ, ಎಂ.ಕೆ.ಪ್ರಕಾಶ್, ಹೆಚ್.ಕೆ. ಬೊಗ್ಗು, ಎಂ.ಎಂ. ಜಗನ್ನಾಥ್, ಎಂ.ಎನ್, ಅಶ್ವಿನಿ, ಕೆ.ಡಿ. ನಿರ್ಮಲಾ, ಪಿ.ಲೀನಾ ಬೋಪಣ್ಣ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ.ಆರ್. ಉಮೇಶ್ ಭಾಗವಹಿಸಿದ್ದರು.

- ಟಿ.ಎಲ್.ಎಸ್.